ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ನಾವೂ ಭವಿಷ್ಯವನು ಕಟ್ಟಿದೆವು

ಕೊಟ್ಟಕೊನೆಯ ಮಹಿಳೆಯೂ ಘನತೆಯ ಬದುಕು ಕಾಣಲು ಕಾರಣವಾದ ಚಳವಳಿ ಮತ್ತೆ ಹುಟ್ಟಲಿ
Published 24 ಮಾರ್ಚ್ 2024, 22:00 IST
Last Updated 24 ಮಾರ್ಚ್ 2024, 22:00 IST
ಅಕ್ಷರ ಗಾತ್ರ

ಇದು ಹೊಸ ಇತಿಹಾಸ ಸೃಷ್ಟಿಸುವ ಹುಚ್ಚಿಗೆ ಬಿದ್ದ ಕಾಲ. ಈಗ ತುರ್ತಾಗಿ ಹೊಸ ರಾಜಕುಮಾರರು ಬೇಕಾಗಿರುವುದರಿಂದ ಮಾಧ್ಯಮಗಳು ದೊಡ್ಡ ದೊಡ್ಡ ಕ್ಯಾಮೆರಾಗಳನ್ನು ಹೊತ್ತು ತಿರುಗುತ್ತಿವೆ. ಅವರ ವೈಭವಗಳನ್ನು ಧಾರಾವಾಹಿಗಳಂತೆ ಪ್ರಸಾರ ಮಾಡಿ ಪುಳಕಗೊಳ್ಳುತ್ತಿವೆ. ‘ಅಯ್ಯೋ, ನಮ್ಮ ಪರಂಪರೆಯ ಸೌಭಾಗ್ಯವೇ! ಎಷ್ಟೋ ಲಕ್ಷ ಕೋಟಿ ಆಸ್ತಿಯ ಒಡೆಯನಾದರೂ ಎಂಥಾ ಸರಳತೆ!’ ಎಂದು ಉದ್ಗರಿಸುತ್ತವೆ. ಮತ್ತದೇ ಉಸಿರಿನಲ್ಲಿ ಆ ಮನೆಯ ಹೆಂಗಸರ ಒಂದೊಂದು ಒಡವೆಯ ಕಿಮ್ಮತ್ತು ಎಷ್ಟಿರಬಹುದು ಎಂದು ನಿದ್ದೆ ಬಿಟ್ಟು ಲೆಕ್ಕ ಹಾಕುತ್ತವೆ. ಪಾಪ! ಹೀಗಾಗಿ, ಇವರಿಗೆ ಭಾರತದ ಅಮೂಲ್ಯ ಪ್ರಾಕೃತಿಕ ಸಂಪತ್ತು ಕರಗಿ ಹೋಗುವುದು ಕಾಣಿಸುತ್ತಿಲ್ಲ. ಲಡಾಕ್‍ಗೆ ರಾಜ್ಯ ಸ್ಥಾನಮಾನಕ್ಕೆ ಆಗ್ರಹಿಸಿ ನೂರಾರು ಜನರ ಜೊತೆಗೆ ಆಮರಣಾಂತ ಉಪವಾಸ ಮಾಡುತ್ತಿರುವ ಸೋನಮ್ ವಾಂಗ್‍ಚುಕ್, ದೆಹಲಿ ರೈತರ ಕಡೆಗೆ ಕ್ಯಾಮೆರಾ ಹೊರಳಿಸಿದಲ್ಲಿ ಎಲ್ಲಿ ಮುರಿದೀತೋ ಎಂಬ ಭಯ! ಇಂತಹ ‘ಸುವರ್ಣ ಕಾಲ’ದಲ್ಲಿ ಸಾವಿರಾರು ಕೋಟಿ ಬಾಂಡ್ ಖರೀದಿಸಿದವರ ಇತಿಹಾಸ ನೋಡಿದರೆ, ‘ವಾರಕ್ಕೆ ‘ಎಪ್ಪತ್ತು ಗಂಟೆ’ ಕೆಲಸ ಮಾಡುವುದಾದರೂ ಯಾಕೆ?’ ಎಂಬ ವೈರಾಗ್ಯ ಯಾರಿಗೂ ಇನ್ನೂ ಬಂದಂತಿಲ್ಲ.

ಹೀಗೆಲ್ಲಾ ಇರುವಾಗ, ಇತಿಹಾಸದಲ್ಲಿ ನಡೆದುಹೋದ ನಿಜ ವಿಸ್ಮಯವು ಮಾತ್ರ ನಮಗೆ ಸರಿದಾರಿಯನ್ನು ತೋರಬಲ್ಲದು. ಇಂತಹ ನಿಜ ಇತಿಹಾಸ ದಾಖಲಿಸಿದ ಒಂದು ಅಪೂರ್ವ ಕೃತಿ ‘ನಾವೂ ಇತಿಹಾಸ ಕಟ್ಟಿದೆವು’. ಊರ್ಮಿಳಾ ಪವಾರ್ ಮತ್ತು ಮೀನಾಕ್ಷಿ ಮೂನ್ ಮರಾಠಿಯಲ್ಲಿ ಬರೆದ ಕೃತಿಯ ಇಂಗ್ಲಿಷ್ ಅವತರಣಿಕೆಯನ್ನು ದು.ಸರಸ್ವತಿಯವರು ಕನ್ನಡಕ್ಕೆ ತಂದಿದ್ದಾರೆ. (ಕವಿ ಪ್ರಕಾಶನ, ಕವಲಕ್ಕಿ). ‘ಆ ಕಾಲದ ಸುದ್ದಿ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳು ಅಕ್ಷರಶಃ ಅಂಬೇಡ್ಕರ್ ಅವರ ಚಳವಳಿಯನ್ನು ಬಹಿಷ್ಕರಿಸಿದ್ದವು. ಅಸ್ಪೃಶ್ಯ ಕಾರ್ಯಕರ್ತರ ಸುದ್ದಿ, ಅವರ ಕೆಲಸ ಮತ್ತು ಒಟ್ಟಾರೆಯಾಗಿ ಚಳವಳಿಗೆ ಸಿಗುತ್ತಿದ್ದ ಪ್ರಚಾರ ವಿರಳ’ (ಪುಟ 7). ಅಂಬೇಡ್ಕರ್ ಸ್ವತಃ ಪತ್ರಿಕೆಗಳನ್ನು ತರಲಾರಂಭಿಸಿದರು. ಅವುಗಳಿಗೆ ‘ಮೂಕ ನಾಯಕ’, ‘ಬಹಿಷ್ಕೃತ ಭಾರತ’ ಎಂಬ ಹೆಸರಿಟ್ಟಿದ್ದರು. ಆ ಹೆಸರುಗಳು ರೂಪಕದಂತೆ ಧ್ವನಿಸುತ್ತಿವೆ.

ದಲಿತ ಮಹಿಳೆಯರು ಕಟ್ಟಿದ ಚಳವಳಿಗೆ ಅಂಬೇಡ್ಕರ್ ಸ್ಫೂರ್ತಿ ಮತ್ತು ಮಾರ್ಗದರ್ಶಿ ಮಾತ್ರ ಆಗಿದ್ದರು. ಮಹಿಳೆಯರೇ ಅದನ್ನು ಕಟ್ಟಿ ಬೆಳೆಸಿದರು. ಎಲ್ಲರೂ ಶ್ರಮಜೀವಿಗಳು. ಯಾವ ಬಂಡವಾಳಶಾಹಿಯ ಬೆಂಬಲವೂ ಇಲ್ಲದ ಹೋರಾಟವದು. ‘ನೀವು ಎಷ್ಟೇ ಕಡಿಮೆ ದುಡಿದರೂ ನಿಮ್ಮ ಕೂಲಿಯ ಹಣದಲ್ಲಿ ನಾಲ್ಕಾಣೆಯನ್ನು ಮಹಿಳಾ ಮಂಡಲದ ಕೆಲಸಕ್ಕೆ ನೀಡಿ’ ಎಂಬ ಅಂಬೇಡ್ಕರ್ ಮಾತನ್ನು ಅಕ್ಷರಶಃ ಪಾಲಿಸಿದರು. ಬೆವರಿನ ಈ ನಾಲ್ಕಾಣೆಯ ವಜ್ರಖಚಿತ ಹೊಳಪಿನ ಮುಂದೆ ರಕ್ತಚರಿತ್ರೆಯ ಲಕ್ಷ ಕೋಟಿಯ ಬೃಹತ್ ವಿಲಾಸಕ್ಕೆ ಬೆಲೆಯೇ ಇಲ್ಲ ಎಂಬುದನ್ನು ಸಾಬೀತು ಮಾಡಿದರು. ಸಾವಿರಾರು ಸಂಖ್ಯೆಯಲ್ಲಿ ಸಭೆ ಮತ್ತು ಹೋರಾಟಕ್ಕೆ ಬಂದರು. ಬಸುರಿ, ಬಾಣಂತಿಯರೂ ಜೈಲಿಗೆ ಹೋದರು. ಏಕಕಾಲಕ್ಕೆ ಹೊರಗಿನ ಮತ್ತು ಒಳಗಿನ ಪಿತೃಪ್ರಧಾನ ವ್ಯವಸ್ಥೆಯ ಝಳವನ್ನು ಎದುರಿಸಿದರು.

‘ನಿತ್ಯ ಜೀವನದ ಸಮಸ್ಯೆಗಳನ್ನು ಪುರುಷರು ಮತ್ತು ಮಹಿಳೆಯರಿಬ್ಬರೂ ಸೇರಿ ಬಗೆಹರಿಸಿಕೊಳ್ಳಬೇಕು. ಹಾಗೆಯೇ ಪುರುಷರು ಮತ್ತು ಮಹಿಳೆಯರು ಒಟ್ಟಿಗೆ ಕೆಲಸ ಮಾಡುವ ಮೂಲಕ ಸಮಾಜದ ಸಮಸ್ಯೆಗಳನ್ನು ಪರಿಹರಿಸಬೇಕು’ ಎಂಬ ಅಂಬೇಡ್ಕರ್ ಅವರ ಮಾತುಗಳನ್ನು ಕೇಳಿದ ಪುರುಷರು ಚಳವಳಿಗೆ ಬಂದರೂ ಮನೆಯಲ್ಲೇನೂ ಅಷ್ಟು ಸುಲಭಕ್ಕೆ ಬದಲಾಗಲಿಲ್ಲ. ‘ನಾವಿಬ್ಬರೂ ಸಭೆಗಳಲ್ಲಿ ಮತ್ತು ಧರಣಿಯಲ್ಲಿ ಪಾಲ್ಗೊಳ್ಳುತ್ತಿದ್ದೆವು. ಮನೆಗೆ ಹಿಂತಿರುಗಿ ಬಂದ ಮೇಲೆ ಜಗಳಗಳು, ವಾದಗಳು ನಡೆಯುತ್ತಿದ್ದವು. ಅಂಥ ಸಂದರ್ಭಗಳಲ್ಲಿ ಹೊಡೆತವನ್ನೂ ತಿಂದಿದ್ದೇನೆ. ನನಗದು ಅಭ್ಯಾಸವಾಗಿಬಿಟ್ಟಿತ್ತು’ (ಪುಟ 346) ಎಂಬ ಬೇಬಿತಾಯಿ ಕಾಂಬ್ಳೆಯವರ ಮಾತು, ಮಹಿಳೆಯು ಎದುರಿಸುವ ಸವಾಲಿನ ಪ್ರತೀಕವಾಗಿದೆ. ಆದರೆ ಇದೆಲ್ಲವನ್ನೂ ಮೀರಿ ಆ ಹೆಣ್ಣುಮಕ್ಕಳು ಹೊಂದಿದ್ದ ಸ್ಪಷ್ಟತೆ ಅಸದೃಶ.

ಧರ್ಮ, ಆಚರಣೆ, ಸಂಪ್ರದಾಯಗಳಲ್ಲಿ ಪಿತೃಸತ್ತೆಯ ಬೇರು ಆಳವಾಗಿ ಬೇರೂರಿದೆ ಎಂಬುದನ್ನು ಅನುಭವದಿಂದ ಕಂಡುಕೊಂಡಿದ್ದರು. ಮತಾಂತರದ ಬಗ್ಗೆ ಅಂಬೇಡ್ಕರ್ ಯೋಚಿಸುತ್ತಿದ್ದಾಗ, ‘ಬಾಬಾಸಾಹೇಬರೇ ನಮಗೆ ಹೊಸ ಧರ್ಮವನ್ನು ನೀಡಿ, ಆದರೆ ನಾವು ಪರದಾ ಧರಿಸುವಂತೆ ಮಾಡುವ ಧರ್ಮವನ್ನು ನಮಗೆ ನೀಡಬೇಡಿ’, ‘ಬಾಬಾಸಾಹೇಬ್ ನಮ್ಮದೆನಿಸುವ ಧರ್ಮವನ್ನು ನಮಗೆ ಕೊಡಿ. ನಾವು ಮನುಷ್ಯರಂತೆ ಬದುಕಲು ಬಿಡುವ ಧರ್ಮವನ್ನು ನಮಗೆ ಕೊಡಿ’ (ಪುಟ 208, 209) ಎಂದವರು ಇವರು.

ದೇವದಾಸಿ– ಮುರಳಿ ಮೊದಲಾದ ಪದ್ಧತಿಗಳು ಅಸ್ಪೃಶ್ಯ ಮಹಿಳೆಯರನ್ನು ಪೀಡಿಸುತ್ತಿದ್ದ ಬಹುದೊಡ್ಡ ಸಮಸ್ಯೆಗಳಾಗಿದ್ದವು. ಇದರ ವಿರುದ್ಧ ಅಂಬೇಡ್ಕರ್ ಕಾರ್ಯೋನ್ಮುಖರಾಗಿದ್ದರು. ಜೊತೆಗೇ, ಪಾರಂಪರಿಕವಾಗಿ ತಮ್ಮ ಸ್ಥಿತಿಯನ್ನು ಲೋಕಕ್ಕೆ ಎತ್ತಿತೋರಿಸುವ ಉಡುಗೆಗಳನ್ನು ಧಿಕ್ಕರಿಸಲು ಕರೆ ಕೊಟ್ಟರು. ಆ ಮೂಲಕ, ಕಟ್ಟಿಕೊಳ್ಳಬೇಕಾದ ಅಸ್ಮಿತೆ ಯಾವುದು ಎಂಬುದನ್ನು ಸ್ಪಷ್ಟಪಡಿಸಿದರು. ಇಂದು ಅಸ್ಮಿತೆಯ ರಾಜಕಾರಣವನ್ನು ದಿಕ್ಕು ತಪ್ಪಿಸಲಾಗುತ್ತಿದೆ. ಅಸ್ಮಿತೆ ಎಂಬುದು ವ್ಯಕ್ತಿ, ಸಮುದಾಯಗಳ ಕರ್ತೃತ್ವಶಕ್ತಿಯ ಗುರುತಿಸುವಿಕೆ ಮತ್ತು ಸಹಜವಾಗಿ ಅವರಿಗೆ ದಕ್ಕಬೇಕಾದ ಅವಕಾಶಗಳ ಹಕ್ಕೊತ್ತಾಯವಾಗಿರುತ್ತದೆ. ಅದು ಅತ್ಯಂತ ಸ್ಪಷ್ಟವಾಗಿ ರಾಜಕೀಯ ಮಂಡನೆಯಾಗಿದೆ. ಆದರೆ ಅದೊಂದು ಸಾಂಸ್ಕೃತಿಕ ಪರಂಪರೆ ಎಂಬ ಕಟ್ಟುಕಥನಗಳನ್ನು ವೈಭವೀಕರಿಸಲಾಗುತ್ತಿದೆ. ಇಂತಹ ಪ್ರತಿರಾಜಕಾರಣವು ವಿನಾಶಕಾರಿಯಾದುದು. ಇದು ಮೌಢ್ಯಗಳನ್ನೇ ಜ್ಞಾನ ಎಂಬಂತೆ ಬಿಂಬಿಸುತ್ತದೆ. ಗುಲಾಮಿ ಮನಃಸ್ಥಿತಿಯನ್ನು ಪೋಷಿಸುತ್ತದೆ.

ಶ್ರೇಣೀಕರಣದ ತುದಿಯಲ್ಲಿ ಕುಳಿತಿರುವ ಕೆಲವು ಮತಿಗೇಡಿಗಳು ಈಗ ಚುರುಕಾಗಿದ್ದಾರೆ. ದೇವದಾಸಿ ಪದ್ಧತಿಯು ನಮ್ಮ ಅಸ್ಮಿತೆಯಾಗಿದ್ದು ಇವರು ನಮ್ಮ ಕಲೆ, ಸಂಪ್ರದಾಯಗಳನ್ನು ಪೋಷಿಸುವ ಈವೆಂಟ್ ಮ್ಯಾನೇಜರ್‌ಗಳಾಗಿದ್ದರು. ಇದರ ಬಗ್ಗೆ ಗೊತ್ತಿಲ್ಲದ ಬ್ರಿಟಿಷರು, ತಲೆಕೆಟ್ಟ ಎಡಪಂಥೀಯರು, ತಲೆಕೆಟ್ಟ ಫೆಮಿನಿಸ್ಟರು ದೇವದಾಸಿಯರನ್ನು ದೇವಸ್ಥಾನಗಳಿಂದ ಹೊರದಬ್ಬಿದರು ಎಂದೆಲ್ಲಾ ಗಳುಹುವ ಲಜ್ಜೆಗೆಟ್ಟ ಭಾಷಣಗಳು ಯುಟ್ಯೂಬ್‍ನಲ್ಲಿ ಲಭ್ಯವಿವೆ. ಇವರು ದೇವಸ್ಥಾನದ ಆಡಳಿತವನ್ನೇ ಈ ಪ್ರತಿಭಾವಂತೆಯರಿಗೆ ಬಿಟ್ಟುಕೊಡುವರೇ? ಇವರ ಮನೆತನದಿಂದ ಎಷ್ಟು ಜನ ಇಂತಹ ಈವೆಂಟ್ ಮ್ಯಾನೇಜರ್‌ಗಳಾಗಿದ್ದರು ಎಂದು ಲೆಕ್ಕ ಕೊಡಬಲ್ಲರೇ?

‘ಇಂಡಿಯಾಸ್ ಪ್ರಾಸ್ಟಿಟ್ಯೂಶನ್ ವಿಲೇಜಸ್’ ಎಂಬುದು 2023ರಲ್ಲಿ ಬಂದ ಡಾಕ್ಯುಮೆಂಟರಿ. ದೇಶದ ರಾಜಧಾನಿಯ ಸಮೀಪದ ವಾಸ್ತವದ ಚಿತ್ರಣವಿದು. ಅಲ್ಲಿ ಗಮನಿಸಬೇಕಾದ ಅಂಶವೊಂದಿದೆ. ಇಡೀ ಹಳ್ಳಿಯ ಕೇರಿಗಳಲ್ಲಿ ಈ ವೃತ್ತಿ ಮಾಡುತ್ತಿರುವವರೆಲ್ಲಾ ಶ್ರೇಣೀಕರಣದ ಕೊಟ್ಟಕೊನೆಯಲ್ಲಿರುವ ಜಾತಿಗಳ ಮಹಿಳೆಯರು. ಬಡತನ, ತಲೆಮೇಲೆ ಬಿದ್ದ ಸಾಲ, ಅನಕ್ಷರತೆಯೇ ತಾವು ಹೀಗಿರಲು ಕಾರಣ ಎಂದು ಅವರಿಗೆ ತಿಳಿದಿದೆ. ತಮ್ಮ ಮಕ್ಕಳು ಇದರಿಂದ ಹೊರಗೆ ಬರಲು ಶಿಕ್ಷಣದ ಆಸರೆ ಬಯಸುತ್ತಿದ್ದಾರೆ. ಚಿಕ್ಕ ಹುಡುಗಿಯರು ಓದಿ ಭವಿಷ್ಯ ಕಟ್ಟಿಕೊಳ್ಳುವ ಕನಸು ಕಾಣುತ್ತಿದ್ದಾರೆ. ಅಂಬೇಡ್ಕರ್ ಕಾಲದ ಮಹಿಳಾ ಚಳವಳಿ ಯಾಕೆ ಮುಖ್ಯ ಎಂದು ಗೊತ್ತಾಗಬೇಕೆಂದರೆ ಇಂತಹ ಹಲವು ಸುಡು ವಾಸ್ತವಗಳ ಅರಿವು ನಮಗಿರಬೇಕು.

‘ಹುಡುಗಿಯರನ್ನು ದೇವದಾಸಿಯರು, ಮುರಳಿಯರು ಮತ್ತು ಜೋಗತಿಯರಾಗಿ ದೇವರ ಹೆಸರಿನಲ್ಲಿ ಅರ್ಪಿಸುವ ಪದ್ಧತಿಯು ನವ ಬೌದ್ಧರಲ್ಲಿ ಮತಾಂತರದ ನಂತರ ಕೊನೆಯಾಯಿತು’ (ಪುಟ 213) ಎಂಬ ವಿವರವು ದೇವದಾಸಿ, ಲೈಂಗಿಕ ಕಾರ್ಯಕರ್ತೆಯಾಗುವುದು ಎಂದಿಗೂ ಮಹಿಳೆಯರ ಆಯ್ಕೆ ಆಗಿರಲಿಲ್ಲ ಎನ್ನುವುದನ್ನೂ ಹೇಳುತ್ತದಲ್ಲವೇ? ಹಾಗೆಯೇ ಆ ಚಳವಳಿ ಕೋಟ್ಯಂತರ ಜನರ ಭವಿಷ್ಯವನ್ನೂ ಕಟ್ಟಿಕೊಟ್ಟಿದ್ದರ ಕುರುಹೂ ಹೌದು.

ನೂರು ವರ್ಷಗಳ ಹಿಂದೆ ಬಲಿಷ್ಠ ಶಕ್ತಿಗಳ ಎದುರು ನೆಲದ ಮರೆಯ ಎರೆಹುಳುಗಳಂತೆ ಕೆಲಸ ಮಾಡಿದ ಹೆಂಗಳೆಯರ ಚೈತನ್ಯವಿದು. ಇಂದಿನ ವರ್ತಮಾನಕ್ಕೆ ಕೈದೀವಿಗೆಯೂ ಹೌದು. ಮಹಿಳಾ ಮಂಡಲಗಳನ್ನು ಮಾಡಿಕೊಂಡ ಈ ಮಹಿಳೆಯರು ಕೇರಿಗಳಲ್ಲಿ, ಮನೆಗಳಲ್ಲಿ ಸಂಘಟನೆ ಮಾಡಿ ಅರಿವನ್ನು ಮೂಡಿಸಿದರು. ಅಧಿಕಾರಕ್ಕಾಗಿ ಜನರ ದಿಕ್ಕು ತಪ್ಪಿಸಲಿಲ್ಲ. ಮನ್ನಣೆಗಾಗಿ ಕಚ್ಚಾಡಲಿಲ್ಲ. ಮೌಢ್ಯಗಳು ಪುನಃ ಅಪ್ಪಳಿಸತೊಡಗಿರುವ ಈ ಕಾಲದಲ್ಲಿ, ‘ನಾನು ಚಳವಳಿಯಲ್ಲಿ ಕೆಲಸ ಮಾಡಿದೆ. ನನ್ನ ಹೆಣ್ಣುಮಕ್ಕಳು ಮತ್ತು ಸೊಸೆಯಂದಿರೂ ಚಳವಳಿಯಲ್ಲಿ ಕೆಲಸ ಮಾಡಬೇಕೆಂದು ನಾನು ಭಾವಿಸುತ್ತೇನೆ’ ಎಂಬ ಸೋನುತಾಯಿ ಲಾಂಜೆವಾರ್ ಮಾತುಗಳು ನಮ್ಮ ಕಿವಿಯಲ್ಲಿ ಅನುರಣಿಸಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT