ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಭ್ಯತೆಯ ಎಲ್ಲೆ ಮೀರಿದಾಗ... ಹರ್ಮನ್ ವರ್ತನೆಗೆ ತಲೆತಗ್ಗಿಸಿದ ಕ್ರಿಕೆಟ್ ಲೋಕ

ವಿಶ್ಲೇಷಣೆ
Published 26 ಜುಲೈ 2023, 22:41 IST
Last Updated 26 ಜುಲೈ 2023, 22:41 IST
ಅಕ್ಷರ ಗಾತ್ರ

ಗುಂಡಪ್ಪ ವಿಶ್ವನಾಥ್ ಹೆಸರು ಕೇಳಿದಾಕ್ಷಣ ಕ್ರಿಕೆಟ್‌ ಪ್ರೇಮಿಗಳ ಮನಸ್ಸು ನಾಲ್ಕು ದಶಕಗಳ ಹಿಂದಿನ ನೆನಪಿನಂಗಳದಲ್ಲಿ ವಿಹರಿಸಲಾರಂಭಿಸುತ್ತದೆ.

1980ರಲ್ಲಿ ಮುಂಬೈನಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ಬಾಬ್‌ ಟೇಲರ್ ಔಟಾಗಿದ್ದಾರೆಂದು ಅಂಪೈರ್ ತೀರ್ಪು ನೀಡಿದ್ದರು. ಬಾಬ್ ವಿಕೆಟ್‌ಕೀಪರ್‌ಗೆ ಕ್ಯಾಚಿತ್ತಿದ್ದರು. ಆದರೆ ಚೆಂಡು ಟೇಲರ್ ಬ್ಯಾಟ್‌ ಸ್ಪರ್ಶಿಸದೇ ಹಿಂದೆ ಹೋಗಿತ್ತು ಎಂದು ಮನಗಂಡ ಭಾರತ ತಂಡದ ನಾಯಕ ವಿಶ್ವನಾಥ್ ತಮ್ಮ ಸಹ ಆಟಗಾರರೊಂದಿಗೆ ಮಾತನಾಡಿದರು. ಕೂಡಲೇ ಅಂಪೈರ್ ಬಳಿ ಸಾಗಿ, ‘ನನ್ನ ಮನವಿಯನ್ನು ವಾಪಸ್‌ ತೆಗೆದುಕೊಳ್ಳುತ್ತೇನೆ’ ಎಂದರು. ಟೇಲರ್‌ ಅವರನ್ನು ಮರಳಿ ಕ್ರೀಸ್‌ಗೆ ಕರೆಸಿದರು. ಟೇಲರ್‌ ಅಬ್ಬರದ ಬ್ಯಾಟಿಂಗ್‌ನಿಂದಾಗಿ ಇಂಗ್ಲೆಂಡ್ ಜಯಿಸಿತು. ಜಿಆರ್‌ವಿ ಕ್ರೀಡಾಸ್ಫೂರ್ತಿ ವಿಶ್ವವನ್ನೇ ಗೆದ್ದಿತು!

ಆದರೆ ಐದು ದಿನಗಳ ಹಿಂದೆ ಢಾಕಾದಲ್ಲಿ ಭಾರತ ಮಹಿಳಾ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ದುರ್ವರ್ತನೆಯಿಂದಾಗಿ ಕ್ರಿಕೆಟ್ ರಂಗವೇ ತಲೆತಗ್ಗಿಸುವಂತಾಯಿತು. ಬಾಂಗ್ಲಾ ವಿರುದ್ಧದ ಏಕದಿನ ಪಂದ್ಯದಲ್ಲಿ ಜಯಿಸಿದ್ದರೆ ಭಾರತಕ್ಕೆ ಸರಣಿ ಕಿರೀಟ ಒಲಿಯುತ್ತಿತ್ತು. ಈ ಪಂದ್ಯದಲ್ಲಿ ಹರ್ಮನ್‌ಪ್ರೀತ್ ತಮ್ಮನ್ನು ಔಟ್ ಎಂದು ಘೋಷಿಸಿದ ಅಂಪೈರ್ ವಿರುದ್ಧ ಸಿಟ್ಟಿಗೆದ್ದರು. ಬ್ಯಾಟ್‌ನಿಂದ ಸ್ಟಂಪ್ಸ್‌ಗೆ ಹೊಡೆದರು. ಪೆವಿಲಿಯನ್‌ಗೆ ಹೋಗುವ ಹಾದಿಯಲ್ಲಿ ಬೈಗುಳ ಉದುರಿಸಿದರು. ಪಂದ್ಯ ಟೈ ಆಯಿತು. ಬಾಂಗ್ಲಾದೇಶದ ನಾಯಕಿ ನಿಗರ್ ಸುಲ್ತಾನಾ ಅವರೊಂದಿಗೆ ಟ್ರೋಫಿ ಸ್ವೀಕರಿಸುವಾಗ ಹರ್ಮನ್‌, ‘ಅಂಪೈರ್‌ಗೆ ಪ್ರಶಸ್ತಿ ನೀಡಲು ಇಲ್ಲಿಗೆ ಕರೆಯಿರಿ’ ಎಂದು ಕೈಬೀಸಿ ಸುಲ್ತಾನಾ ಕೈಯಿಂದ ಟ್ರೋಫಿ ಸೆಳೆದುಕೊಂಡು ಹೋಗಿದ್ದರು. ಇದರಿಂದಾಗಿ ಅವಮಾನಿತರಾದ ಬಾಂಗ್ಲಾ ಆಟಗಾರ್ತಿಯರು ಫೋಟೊ ಸೆಷನ್‌ಗೆ ನಿಲ್ಲದೇ ಮೈದಾನವನ್ನು ತೊರೆದು ತಿರುಗೇಟು ನೀಡಿದ್ದರು.

ಕ್ರಿಕೆಟ್‌ ಎಂದರೆ ಸಭ್ಯರ ಆಟ. ಆದರೆ ಆ ಸಭ್ಯ ನಡವಳಿಕೆ ಮತ್ತು ಕ್ರೀಡಾ ಮನೋಭಾವವನ್ನು ಕಲಿಯದೇ ಹೋದರೆ ನೂರಾರು ಪಂದ್ಯಗಳನ್ನು ಆಡಿ, ಸಾವಿರಾರು ರನ್‌ ಗಳಿಸಿ, ವಿಕೆಟ್‌ಗಳ ರಾಶಿ ಒಟ್ಟಿದರೂ ಪ್ರಯೋಜನಕ್ಕೆ ಬರುವುದಿಲ್ಲ. ನಿಯಮಾವಳಿ ಮತ್ತು ಸಭ್ಯತೆಯ ಎಲ್ಲೆಯೊಳಗೆ ಆಡುವುದೇ ಕ್ರೀಡೆಯ ಮೂಲ ಉದ್ದೇಶ. ಇತಿಮಿತಿಯೊಳಗೆ ತಮ್ಮ ಸಾಮರ್ಥ್ಯ ಮೆರೆದು ತಂಡಕ್ಕೆ ಗೆಲುವು ತಂದುಕೊಡುವವರು ತಾರೆಗಳಾಗುತ್ತಾರೆ. ಜಿಆರ್‌ವಿ ಅವರ ಶತಕಗಳು, ಸ್ಕ್ವೇರ್‌ಕಟ್‌ಗಳು ಅಮೋಘ. ಆದರೆ ಅವರು ಸದಾಕಾಲ ದಿಗ್ಗಜ ಎನಿಸಿಕೊಂಡಿದ್ದು ತಮ್ಮ ಕ್ರೀಡಾಸ್ಫೂರ್ತಿ ಹಾಗೂ ಸಭ್ಯ ವ್ಯಕ್ತಿತ್ವದಿಂದ. ಅವರೇ ಹೇಳಿಕೊಳ್ಳುವಂತೆ; ತಮ್ಮ ವೃತ್ತಿಜೀವನದಲ್ಲಿ ಹಲವು ಬಾರಿ ಅಂಪೈರ್‌ಗಳು ನೀಡಿದ್ದ ತೀರ್ಪುಗಳು ತಪ್ಪಿದ್ದರೂ ವಿರೋಧ ವ್ಯಕ್ತಪಡಿಸದೇ ಪೆವಿಲಿಯನ್‌ಗೆ ಮರಳಿದ್ದರಂತೆ.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನೂರು ಶತಕಗಳನ್ನು ಹೊಡೆದಿರುವ ಸಚಿನ್ ತೆಂಡೂಲ್ಕರ್ ಕೂಡ ಎಷ್ಟೋ ಪಂದ್ಯಗಳಲ್ಲಿ 80–90 ರನ್‌ಗಳನ್ನು ಗಳಿಸಿದ ಸಂದರ್ಭದಲ್ಲಿ ಅಂಪೈರ್‌ಗಳ ತಪ್ಪು ನಿರ್ಣಯಗಳಿಗೆ ಬಲಿಯಾಗಿದ್ದಾರೆ. ಆದರೆ ಯಾವತ್ತೂ ತೀರ್ಪುಗಳಿಗೆ ಎದುರಾಗಿ ವಾಗ್ವಾದ ಮಾಡಿಲ್ಲ.

‘ಆ ಕಾಲಘಟ್ಟದಲ್ಲಿ ಸಚಿನ್ ವರ್ಚಸ್ಸು ಹೇಗಿತ್ತೆಂದರೆ ಅಂಪೈರ್‌ಗಳು ಔಟ್ ನೀಡುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸಬೇಕಿತ್ತು. ತಪ್ಪಾಗಿ ಔಟ್ ನೀಡಿದರೆ ಪ್ರೇಕ್ಷಕರ ಆಕ್ರೋಶಕ್ಕೆ ತುತ್ತಾಗುವ ಭಯ ಕಾಡುತ್ತಿತ್ತು. ಅಂತಹ ಜನಬೆಂಬಲ ತಮ್ಮ ಹಿಂದೆ ಇದ್ದರೂ ಸಚಿನ್ ಯಾವತ್ತೂ ಶಿಸ್ತಿನ ಚೌಕಟ್ಟು ಮೀರಲಿಲ್ಲ’ ಎಂದು ಹಿರಿಯ ರೆಫರಿಯೊಬ್ಬರು ಹೇಳಿದ ಮಾತು ಈಗಲೂ ಪ್ರಸ್ತುತ.

ಇವತ್ತಿನ ಕ್ರಿಕೆಟ್‌ನಲ್ಲಿ ಹಣ ಹಾಗೂ ಹೆಸರು ಗಳಿಸಲು ಪೈಪೋಟಿ ಏರ್ಪಟ್ಟಿದೆ. ಅದಕ್ಕೆ ತಕ್ಕಂತೆ ಆಟಗಾರರಿಗೆ ಯಾವುದೇ ಹಂತದಲ್ಲಿಯೂ ಅನ್ಯಾಯ ಆಗದಂತೆ ಅಂಪೈರ್ ತೀರ್ಪು ಮರುಪರಿಶೀಲನೆ ವ್ಯವಸ್ಥೆ (ಯುಡಿಆರ್‌ಎಸ್‌) ಕೂಡ ಜಾರಿಯಲ್ಲಿದೆ. ಅಂಪೈರ್‌ಗಳಿಗೂ ಕಾಲಕ್ಕೆ ತಕ್ಕ ತರಬೇತಿ ನೀಡಲಾಗುತ್ತಿದೆ. ಆದರೂ ಇದೆಲ್ಲವನ್ನೂ ಮೀರಿ ತಪ್ಪುಗಳು ಘಟಿಸುತ್ತವೆ. ಅಂತಹ ಸಂದರ್ಭದಲ್ಲಿ ನಿಯಮದ ಚೌಕಟ್ಟಿನಲ್ಲಿಯೇ ಪ್ರತಿಭಟಿಸುವ ಹಕ್ಕು ಹಾಗೂ ಅವಕಾಶ ಆಟಗಾರರಿಗೆ ಇದೆ. ಇದ್ಯಾವುದನ್ನೂ ಮಾಡದೆ ಅನುಚಿತ ವರ್ತನೆಗೆ ಇಳಿಯುವುದು ಯಾರಿಗೂ ಶೋಭೆಯಲ್ಲ.

ಕ್ರೀಡಾಸ್ಫೂರ್ತಿಗೆ ಮಸಿ ಬಳಿಯುವ ಇಂತಹ ಘಟನೆಗಳು ಇದೇ ಮೊದಲೇನಲ್ಲ. ಇತ್ತೀಚೆಗಷ್ಟೇ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್‌ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರಾಟ್ ಕೊಹ್ಲಿ ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್ ನಡುವಣ ಜಟಾಪಟಿ ದೊಡ್ಡ ಸುದ್ದಿಯಾಗಿತ್ತು.

ದಶಕದ ಹಿಂದೆ ವಿದೇಶದಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ, ಪ್ರೇಕ್ಷಕರಿಗೆ ಕೆಟ್ಟ ಸಂಜ್ಞೆ ತೋರಿ ಅವಮಾನಿಸಿದ್ದು ಹಾಗೂ ಇನ್ನೊಂದು ಪಂದ್ಯದಲ್ಲಿ ಪತ್ರಕರ್ತರೊಬ್ಬರೊಂದಿಗೆ ಜಗಳ ಕಾದಿದ್ದು ದೊಡ್ಡ ಸುದ್ದಿಯಾಗಿದ್ದವು. ಇತ್ತೀಚೆಗಷ್ಟೇ ಪಂದ್ಯವೊಂದರಲ್ಲಿ ಕೊಹ್ಲಿ ಅತಿರೇಕದ ಸಂಭ್ರಮ ತೋರಿ ಟೀಕೆಗೊಳಗಾಗಿದ್ದರು. ಅವರು ಅದ್ಭುತ ಆಟಗಾರನೆಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಅದಕ್ಕಾಗಿಯೇ ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ. ಅವರನ್ನು ಅನುಕರಿಸುವ ಎಳೆಯ ಆಟಗಾರರಿಗೂ ಅವರು ಆದರ್ಶಪ್ರಾಯರಾಗಬೇಕಲ್ಲವೇ?

ಹೋದ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೆಸ್ಟ್ ಪಂದ್ಯವೊಂದರಲ್ಲಿ ‘11 ಆಟಗಾರರ ವಿರುದ್ಧ ಇಡೀ ದೇಶವೇ ಆಡುತ್ತಿದೆ’ ಎಂದು ಭಾರತದ ಕೆ.ಎಲ್. ರಾಹುಲ್ ಅವರು ಆತಿಥೇಯ ತಂಡವನ್ನು ವ್ಯಂಗ್ಯ ಮಾಡಿದ್ದು ಸ್ಟಂಪ್‌ ಮೈಕ್‌ನಲ್ಲಿ ಪ್ರತಿಧ್ವನಿಸಿತ್ತು. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಕ್ರಿಕೆಟ್ ಬಾಂಧವ್ಯದ ಇತಿಹಾಸದ ಅರಿವು ಇಲ್ಲದಿದ್ದರೆ ಇಂತಹ ಅಪ್ರಬುದ್ಧ ನಡೆ ಖಚಿತ ಎಂದು ಹಲವು ಹಿರಿಯರು ಟೀಕಿಸಿದ್ದರು.

ಇಂತಹ ಪಿಡುಗು ಕ್ರಿಕೆಟ್‌ಗೆ ಮಾತ್ರ ಸೀಮಿತವಾಗಿಲ್ಲ. ಈಚೆಗೆ ಬೆಂಗಳೂರಿನಲ್ಲಿ ನಡೆದ ದಕ್ಷಿಣ ಏಷ್ಯಾ ಫುಟ್‌ಬಾಲ್ ಟೂರ್ನಿಯಲ್ಲಿ (ಸ್ಯಾಫ್‌) ಭಾರತ ತಂಡದ ಕೋಚ್ ಇಗೋರ್ ಸ್ಟಿಮ್ಯಾಚ್ ತಮ್ಮ ಅತಿರೇಕದ ವರ್ತನೆಗಳಿಂದ ಸುದ್ದಿಯಾದರು. ರೆಡ್‌ ಕಾರ್ಡ್ ಪಡೆದು ಫೈನಲ್ ಸೇರಿದಂತೆ ಮೂರು ಪಂದ್ಯಗಳಿಂದ ಅಮಾನತು ಆದರು. ಫ್ರಾನ್ಸ್‌ ಫುಟ್‌ಬಾಲ್ ತಾರೆ ಜಿನೆದಿನ್ ಜಿದಾನ್ ಅವರ ಕಾಲ್ಚಳಕ ಅದ್ಭುತವಾಗಿತ್ತು. ಆದರೆ 2006ರ ಫಿಫಾ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಜಿದಾನ್ ಇಟಲಿಯ ಮಾರ್ಟಿನೇಜ್‌ ಎದೆಗೆ ತಲೆಯಿಂದ ಗುದ್ದಿ ರೆಡ್‌ ಕಾರ್ಡ್ ಪಡೆದಿದ್ದನ್ನೇ ಈಗಲೂ ಬಹಳಷ್ಟು ಕ್ರೀಡಾಭಿಮಾನಿಗಳು ಮರೆತಿಲ್ಲ. ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್, ಫುಟ್‌ಬಾಲ್ ತಾರೆ ಡಿಯೆಗೊ ಮರಡೊನಾ ಸೇರಿದಂತೆ ಹಲವರು ನಿಯಮ ಮೀರಿದ ವರ್ತನೆಯಿಂದಲೂ ಸುದ್ದಿಯಾದವರು.

ಆದರೆ ಈಗ ಹರ್ಮನ್ ಅವರ ನಡವಳಿಕೆಯಿಂದಾಗಿ ಮಹಿಳಾ ಕ್ರಿಕೆಟ್‌ ಮೇಲೆ ಆಗುವ ದುಷ್ಪರಿಣಾಮದ ಬಗ್ಗೆಯೂ ಚರ್ಚೆಯಾಗುತ್ತಿದೆ. ಶಾಂತಾ ರಂಗಸ್ವಾಮಿ, ಮಿಥಾಲಿ ರಾಜ್ ಮತ್ತು ಜೂಲನ್ ಗೋಸ್ವಾಮಿ ಅವರ ನಂತರ ಭಾರತದ ವನಿತೆಯರ ಕ್ರಿಕೆಟ್‌ ರಂಗದ ತಾರೆಯಾಗಿ ಗುರುತಿಸಿಕೊಂಡವರು ಈ ಪಂಜಾಬಿ ಹುಡುಗಿ. ಪುರುಷರ ಕ್ರಿಕೆಟ್‌ಗೆ ಸಮನಾಗಿ ಬೆಳೆಯುವತ್ತ ಮುನ್ನುಗ್ಗುತ್ತಿರುವ ಮಹಿಳಾ ಕ್ರಿಕೆಟ್ ಅಭಿಯಾನಕ್ಕೆ ಅವರು ರಾಯಭಾರಿಯೂ ಹೌದು. ಆದರೆ ಇಂತಹ ಕೆಟ್ಟ ನಡವಳಿಕೆಯಿಂದಾಗಿ ಅಭಿಯಾನಕ್ಕೆ ಹಿನ್ನಡೆಯಾಗುವ ಆತಂಕವೂ ಇದೆ.

ಇವತ್ತಿನ ಡಿಜಿಟಲ್ ಯುಗದಲ್ಲಿ ‘ನಕಾರಾತ್ಮಕ ಪ್ರಚಾರ’ದಿಂದಲೂ ಲಾಭ ಗಿಟ್ಟಿಸುವ ಗೀಳು ಹೆಚ್ಚುತ್ತಿದೆ. ಆದರೆ ಇಂತಹ ಹಾದಿ ಕ್ರೀಡಾತಾರೆಗಳಿಗೆ ಶೋಭೆಯಲ್ಲ. ಆದ್ದರಿಂದ ಆಟದ ಜೊತೆಗೆ ಸಭ್ಯತೆಯ ಪಾಠವನ್ನೂ ಆಟಗಾರರಿಗೆ ಹೇಳಿಕೊಡುವ ಹೊಣೆ ಕೂಡ ಕ್ರಿಕೆಟ್ ಮತ್ತಿತರ ಕ್ರೀಡೆಗಳ ಆಡಳಿತ ಮಂಡಳಿಗಳಿಗೆ ಇದೆ. ಇಲ್ಲದಿದ್ದರೆ ಮುಂದೊಂದು ದಿನ ‘ಸಭ್ಯರ ಆಟ’ವೆಂಬ ಪಟ್ಟ ಕಳೆದುಕೊಳ್ಳುವ ಅಪಾಯವೂ ಇದೆ. ಕ್ರೀಡೆಗಿಂತ ಯಾರೂ ದೊಡ್ಡವರಲ್ಲ ಎಂಬ ಅರಿವು ಮೂಡಿಸುವುದೂ ತುರ್ತು ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT