ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ತನ್ನ ವಿದೇಶಾಂಗ ಸಚಿವರನ್ನು ಭಾರತಕ್ಕೆ ಕಳುಹಿಸಿದ್ದೇಕೆ?

Last Updated 6 ಏಪ್ರಿಲ್ 2022, 13:32 IST
ಅಕ್ಷರ ಗಾತ್ರ

ಹಲವು ಶತಮಾನಗಳ ಹಿಂದೆ, ಚೀನೀಯರು ವ್ಯಾಪಾರಕ್ಕಾಗಿ ಭಾರತಕ್ಕೆ ಬಂದರು. ಇದು ಮೇ 2020ರವರೆಗೂ ಯಾವುದೇ ಅಡೆತಡೆಯಿಲ್ಲದೆ ನಡೆಯಿತು. ಸುಮಾರು ಒಂದೂವರೆ ವರ್ಷದಿಂದ ಈಚೆಗೆ ಬಾರತ-ಚೀನಾ ಗಡಿಯಲ್ಲಿರುವ ಗಾಲ್ವಾನ್ ಕಣಿವೆಯಲ್ಲಿ ಉಭಯ ದೇಶಗಳ ಸೈನಿಕರು ಆಕ್ರಮಣಕಾರಿ ಚಕಮಕಿಯಲ್ಲಿ ತೊಡಗಿದ್ದಾರೆ. ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಎರಡೂ ದೇಶಗಳು ಪ್ರಬಲ ಪ್ರಾದೇಶಿಕ ಶಕ್ತಿಗಳಾಗಿ ಗುರುತಿಸಿಕೊಂಡಿವೆ. ಆದರೆ, ಗಾಲ್ವಾನ್ ಸಂಘರ್ಷದಲ್ಲಿ ಸಾಕಷ್ಟು ಸಂಖ್ಯೆಯ ಸೈನಿಕರನ್ನು ಕಳೆದುಕೊಂಡಿವೆ. ಗಾಲ್ವಾನ್ ಸಂಘರ್ಷದ ಬಳಿಕ ಭಾರತವು ಕೈಗೊಂಡ ಹಲವು ನಿರ್ಬಂಧಗಳಿಂದಾಗಿ ಈಗ ಭಾರತದ ಜತೆಗಿನ ಚೀನಾದ ವ್ಯಾಪಾರಕ್ಕೆ ಧಕ್ಕೆಯಾಗಿದೆ.

ಲಡಾಖ್ ಪ್ರದೇಶದ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್ಒಸಿ) ಚೀನಾವು ನಡೆಸಿದ್ದ ಹಠಾತ್ ದಾಳಿಯ ಬಗ್ಗೆ ಭಾರತವು ಈಗಲೂ ಕುದಿಯುತ್ತಿದೆ. ಅಕ್ಟೋಬರ್ 11, 2019ರಂದು ಮಹಾಬಲಿಪುರಂನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾದ ಪ್ರಧಾನಿ ಷಿ ಜಿನ್‌ಪಿಂಗ್ ಅವರು ಔತಣಕೂಟದ ರಾಜತಾಂತ್ರಿಕ ಸಭೆಯಲ್ಲಿ ಪಾಲ್ಗೊಂಡ ಕೆಲವೇ ದಿನಗಳಲ್ಲಿ ಈ ಘರ್ಷಣೆಗಳು ಸಂಭವಿಸಿದವು. ಈ ಸಭೆಯ ಬಳಿಕ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಈ ರೀತಿ ಟ್ವೀಟ್ ಮಾಡಿದ್ದರು: "ಯುನೆಸ್ಕೋ (UNESCO) ವಿಶ್ವ ಪರಂಪರೆಯ ತಾಣ (ಮಹಾಬಲಿಪುರಂ) ನಲ್ಲಿ ನಡೆದ ಮುಕ್ತ ಸ್ವರೂಪದ ಅನೌಪಚಾರಿಕ ಶೃಂಗಸಭೆಯು ಸಂಪರ್ಕವನ್ನು ಉನ್ನತ ಮಟ್ಟದಲ್ಲಿ ಗಾಢವಾಗಿ ಮುಂದುವರಿಸುತ್ತದೆ ಮತ್ತು ಭಾರತ-ಚೀನಾ ಸಂಬಂಧದ ಭವಿಷ್ಯದ ಪಥವನ್ನು ಮಾರ್ಗದರ್ಶನ ಮಾಡುತ್ತದೆ." ಆದರೆ, ಭಾರತದ ನಿರೀಕ್ಷೆ ತಪ್ಪೆಂದು ಕೆಲವೇ ದಿನಗಳಲ್ಲಿ ಸಾಬೀತಾಯಿತು.

ಮೋದಿಯೊಂದಿಗೆ ಹಸ್ತಲಾಘವ ಮಾಡಿದ ಮೇಲೆ, ಷಿ ಅವರು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಭೇಟಿ ಮಾಡಲು ಇಸ್ಲಾಮಾಬಾದ್‌ಗೆ ತೆರಳಿದರು. ಅಲ್ಲಿ ಒಂದು ಹೇಳಿಕೆ ನೀಡಿ, "ಕಾಶ್ಮೀರದ ಬಗ್ಗೆ ಚೀನಾ ಹೆಚ್ಚು ಗಮನ ಹರಿಸುತ್ತಿದೆ" ಎಂದರು. ಇದು ಭಾರತವನ್ನು ಸಿಟ್ಟಿಗೆಬ್ಬಿಸಿತು. ಈ ಭೇಟಿಯ ಬಳಿಕ ಆರು ತಿಂಗಳೊಳಗೆ, ವಿವಾದಿತ ಲಡಾಖ್ ಪ್ರದೇಶದಲ್ಲಿ ಚೀನಾ ಆಕ್ರಮಣಕಾರಿ ನಿಲುವನ್ನು ಅಳವಡಿಸಿಕೊಂಡಿತ್ತು.

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಮಾತುಕತೆ ನಡೆಸಲು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ನವದೆಹಲಿಗೆ ಕಳೆದ ವಾರ ನೀಡಿದ ಭೇಟಿಯನ್ನು, 2019ರ ಷಿ ಭೇಟಿ ಮತ್ತು ಗಾಲ್ವಾನ್ ಕಣಿವೆಯಲ್ಲಿನ ಘರ್ಷಣೆಯನ್ನು ಗಮನದಲ್ಲಿಟ್ಟುಕೊಂಡು ವಿಶ್ಲೇಷಿಸಬೇಕಾಗಿದೆ. ವಾಂಗ್ ಅವರ ಇನ್ನೊಂದು ಸಭೆಯು ರಾಷ್ಟ್ರೀಯ ಭದ್ರತಾ ಸಲಹೆಗಾರ ಮತ್ತು ಗಡಿ ಸಮಸ್ಯೆಯ ವಿಶೇಷ ಪ್ರತಿನಿಧಿ ಅಜಿತ್ ಡೋಬಲ್ ಅವರೊಂದಿಗೆ ಆಗಿತ್ತು. ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಸಾಮಾನ್ಯಗೊಳಿಸಲು ತಾನು ಪ್ರಯತ್ನಿಸುತ್ತಿರುವುದಾಗಿ ಅಭಿಪ್ರಾಯವನ್ನು ಮೂಡಿಸಲು ಚೀನಾ ಇದನ್ನೆಲ್ಲ ಮಾಡುತ್ತಿದೆ. ಆದರೆ ಈ ಬಾರಿಯ ಭೇಟಿ ಮತ್ತು ಮಾತುಕತೆಯ ಫಲಿತಾಂಶದ ಬಗ್ಗೆ ಸ್ನೇಹ ಅಥವಾ ಆಶಾವಾದದ ಚಿತ್ರವನ್ನು ಪ್ರಸ್ತುತಪಡಿಸಲು ಭಾರತ ಯಾವುದೇ ಪ್ರಯತ್ನ ಮಾಡಲಿಲ್ಲ.

ವಾಂಗ್ ಯಿ ಅವರ ಭೇಟಿ ಭಾರತಕ್ಕೆ ಸೀಮಿತವಾಗಿರಲಿಲ್ಲ. ಜೈಶಂಕರ್ ಅವರೊಂದಿಗಿನ ಮಾತುಕತೆಯ ಮೊದಲು ಮತ್ತು ಬಳಿಕ ಅವರು ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ನೇಪಾಳಕ್ಕೂ ಭೇಟಿ ನೀಡಿದರು. ನವದೆಹಲಿಗೆ ಬಂದಿಳಿಯುವ ಮೊದಲು, ವಾಂಗ್ ಅವರು ಪಾಕಿಸ್ತಾನದಲ್ಲಿದ್ದರು. ಅಲ್ಲಿ ಅವರು ಇಸ್ಲಾಮಿಕ್ ಸಹಕಾರ ಸಂಘಟನೆಯ (ಒಐಸಿ) ಸಭೆಯಲ್ಲಿ ಭಾಗವಹಿಸಿದ್ದರು. ಬೀಜಿಂಗ್‌ಗೆ ಮರಳಿದ ಅನಂತರ, "ಕಾಶ್ಮೀರ ಸಮಸ್ಯೆಯ ಕುರಿತು ಅನೇಕ ಇಸ್ಲಾಮಿಕ್ ಸ್ನೇಹಿತರ ಕರೆಗಳನ್ನು ನಾನು ಕೇಳಿದ್ದೇನೆ ಮತ್ತು ಅವರು ಅದೇ ಆಶಯವನ್ನು ಹಂಚಿಕೊಂಡಿದ್ದಾರೆ" ಎಂದು ವಾಂಗ್ ಹೇಳಿದರು. ಭಾರತದ ಹೆಸರನ್ನು ಪ್ರಸ್ತಾಪಿಸದೆಯೇ ಅವರು ಹೀಗೆ ಹೇಳಿದ್ದಾರೆ. ಇದಕ್ಕೆ ಕಟುವಾಗಿ ಪ್ರತಿಕ್ರಿಯಿಸಿರುವ ಭಾರತ, ಈ ವಿಷಯದಲ್ಲಿ ಚೀನಾದ ಹೇಳಿಕೆಗಳಿಗೆ ಯಾವುದೇ ಮಹತ್ವ ಇಲ್ಲ, ಇದು ನಮ್ಮ ಆಂತರಿಕ ವಿಷಯ ಎಂದು ಹೇಳಿದೆ.

ಸೌಹಾರ್ದಯುತ ಪರಿಸರವಿಲ್ಲ:
ವಾಂಗ್ ಅವರ ಮಾತುಗಳ ಪ್ರಕಾರ ನಿಯಂತ್ರಣ ರೇಖೆಯ ವಿಷಯದಲ್ಲಿ ಬೀಜಿಂಗ್ ತನ್ನ ಸಂಘರ್ಷದ ಧೋರಣೆಯನ್ನು ಬಿಟ್ಟುಕೊಟ್ಟಿಲ್ಲ ಎಂಬುದು ಸ್ಪಷ್ಟವಾಗಿದೆ. ಭಾರತಕ್ಕೆ ಆಗಮಿಸುವ ಮುನ್ನ ಉಭಯ ದೇಶಗಳ ನಡುವೆ ಅವರು ಸೌಹಾರ್ದಯುತ ವಾತಾವರಣವನ್ನು ಸೃಷ್ಟಿಸಲಿಲ್ಲ ಅಥವಾ ಅದಕ್ಕೆ ಪ್ರಯತ್ನಿಸಲೂ ಇಲ್ಲ. ತಾವು ರಾಜತಾಂತ್ರಿಕ ಕಾರ್ಯಾಚರಣೆಯಲ್ಲಿರುವ ಬಗ್ಗೆ ಒಂದು ಸಣ್ಣ ಚಿತ್ರಣವನ್ನಷ್ಟೇ ನೀಡಿದರು. ಅವರು ಒಂದು ಅಜೆಂಡಾದೊಂದಿಗೆ ಬಂದರು. ಆದರೆ, ಅದೇನೆಂದು ಸ್ಪಷ್ಟವಾಗಿ ಹೇಳಲಿಲ್ಲ. ಆದರೆ, ಅವರ ಭೇಟಿಯ ಬಳಿಕ ಹಿಮಾಲಯದ ಗಡಿಗಳಲ್ಲಿ ಇನ್ನಷ್ಟು ಆಕ್ರಮಣಗಳು ನಡೆಯುತ್ತವೆಯೇ? ಎಂಬ ಪ್ರಶ್ನೆಯಂತೂ ಕಾಡುತ್ತಿದೆ. ದಿನಾಂಕ ಇನ್ನೂ ನಿಗದಿಯಾಗಿಲ್ಲವಾದರೂ, ಈ ವರ್ಷ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯ ಆತಿಥ್ಯವನ್ನು ಚೀನಾ ದೇಶವೇ ವಹಿಸುತ್ತಿರುವುದರಿಂದ ಈ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಸಿಗುವ ಸಾಧ್ಯತೆ ಇಲ್ಲ.

ಬ್ರಿಕ್ಸ್ ಸಭೆಯಲ್ಲಿ ಭಾರತದ ಉಪಸ್ಥಿತಿಯು ನಿರ್ಣಾಯಕವಾಗಿದೆ. ಏಕೆಂದರೆ ಅದು ದಕ್ಷಿಣ ಏಷ್ಯಾದಲ್ಲಿ ಪ್ರಮುಖ ಆರ್ಥಿಕ ಶಕ್ತಿಯಾಗಿ ಬಹಳ ವೇಗವಾಗಿ ಹೊರಹೊಮ್ಮುತ್ತಿದೆ. ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ - ಬ್ರಿಕ್ಸ್‌ ಸದಸ್ಯ ರಾಷ್ಟ್ರಗಳಾಗಿವೆ. ಮೋದಿ ಅವರು ಶೃಂಗಸಭೆಯಿಂದ ದೂರ ಉಳಿಯುವ ಯಾವುದೇ ಲಕ್ಷಣಗಳು ಮೇಲ್ನೋಟಕ್ಕೆ ಗೋಚರಿಸುತ್ತಿಲ್ಲ. ಶ್ರೀಲಂಕಾ ಮತ್ತು ಮ್ಯಾನ್ಮಾರ್‌ನಂತಹ ಸಣ್ಣ ದೇಶಗಳಲ್ಲಿ ಬೆಳೆಯುತ್ತಿರುವ ಚೀನಾದ ಹೆಜ್ಜೆಗುರುತುಗಳನ್ನು ಅಳಿಸಿಹಾಕುವ ಪ್ರಯತ್ನದಲ್ಲಿ ಹಾಗೂ ಭಾರತದ ಜತೆಗೆ ಸಂಪರ್ಕವನ್ನು ಬೆಸೆಯಲು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು, ದಕ್ಷಿಣ ಏಷ್ಯಾದ ಕೆಲವು ದೇಶಗಳಿಗೆ ಒಂದು ಸುತ್ತಿನ ಪ್ರವಾಸಗಳನ್ನು ಮಾಡಿದ್ದಾರೆ.

ನವದೆಹಲಿಯಲ್ಲಿ ವಾಂಗ್ ಅವರೊಂದಿಗಿನ ಭೇಟಿಯ ಅನಂತರ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸುವ ವೇಳೆ ಜೈಶಂಕರ್ ಅವರು ತಮ್ಮ ಪದಗಳಿಗೆ ಯಾವುದೇ ಮಾಧುರ್ಯದ ಲೇಪ ಕೊಡಲಿಲ್ಲ. ಬಹುಶಃ, ಲಡಾಖ್ ಸಂಘರ್ಷದ ಅನಂತರ ಉಂಟಾದ ಬಿಕ್ಕಟ್ಟನ್ನು ಪರಿಹರಿಸುವ ಮನಃಸ್ಥಿತಿಯಲ್ಲಿ ಭಾರತವಿದೆಯೇ ಎಂದು ವಾಂಗ್ ಪರೀಕ್ಷಿಸುತ್ತಿದ್ದರು. ಏಪ್ರಿಲ್ 2020ರಿಂದ ಚೀನಾದ ಕ್ರಮಗಳ ಪರಿಣಾಮವಾಗಿ ಉಭಯ ದೇಶಗಳ ನಡುವಿನ ಸಂಬಂಧವು ತೊಂದರೆಗೊಳಗಾಗಿದೆ ಎಂದು ಜೈಶಂಕರ್ ಅವರು ವಾಂಗ್‌ ಅವರಿಗೆ ತಿಳಿಸಿದರು. ಒಪ್ಪಂದಗಳಿಗೆ ವ್ಯತಿರಿಕ್ತವಾಗಿ ಅಲ್ಲಿ ಸೈನಿಕರ ಹೆಚ್ಚಿನ ಜಮಾವಣೆಯು ಅಸಹಜತೆ ಎಂದು ಜೈಶಂಕರ್ ಹೇಳಿದರು. ಆದ್ದರಿಂದ, ಸಹಜ ಸ್ಥಿತಿಯ ಮರುಸ್ಥಾಪನೆ ಆಗಬೇಕಿದ್ದರೆ ಶಾಂತಿ ಮತ್ತು ನೆಮ್ಮದಿಯ ಮರುಸ್ಥಾಪನೆಯೂ ನಿಸ್ಸಂಶಯವಾಗಿ ಅಗತ್ಯವಿದೆ. ಎರಡೂ ದೇಶಗಳು ತಮ್ಮ ಬಾಂಧವ್ಯವನ್ನು ಸುಧಾರಿಸಲು ಬದ್ಧವಾಗಿದ್ದರೆ, ಈ ಬದ್ಧತೆಯ ಫಲಿತಾಂಶ ಕಣ್ಣಿಗೆ ಕಾಣುವಂತಿರಬೇಕು. ಗಡಿಯಲ್ಲಿ ಸಹಜ ಸ್ಥಿತಿ ಮರಳಿದರೆ ಮಾತ್ರ ಉಳಿದೆಲ್ಲವೂ ಸಹಜ ಸ್ಥಿತಿಗೆ ಮರಳಲು ಸಾಧ್ಯ ಎಂದು ಭಾರತ ಸ್ಪಷ್ಟಪಡಿಸಿದೆ. ಢೋಬಲ್ ಅವರೂ ಜೈಶಂಕರ್ ಮಾತುಗಳನ್ನು ಪ್ರತಿಧ್ವನಿಸಿದರು.

ಇದಕ್ಕೆ ವ್ಯತಿರಿಕ್ತವಾಗಿ, ಚೀನಾ ಮತ್ತು ಭಾರತ ತಮ್ಮದೇ ಆದ ಅಭಿವೃದ್ಧಿ ಪಥಗಳಿಗೆ ಅಂಟಿಕೊಳ್ಳಬೇಕು ಮತ್ತು ಈ ಪ್ರದೇಶದಲ್ಲಿ ಮತ್ತು ಪ್ರಪಂಚದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಲು ಕೈಜೋಡಿಸಬೇಕೆಂದು ಢೋಬಲ್‌ ಅವರಿಗೆ ತಿಳಿಸಿದ್ದೇನೆ ಎಂದು ವಾಂಗ್ ಅವರು ಚೀನಾದ ಸರ್ಕಾರಿ ಸುದ್ದಿ ಸಂಸ್ಥೆ ಕ್ಸಿನ್‌ಹುವಾಗೆ ತಿಳಿಸಿದರು. ಗಾಲ್ವಾನ್ ಘಟನೆಯ ಅನಂತರ ಆಕ್ರಮಣದ ಬಗ್ಗೆ ಭಾರತದ ಭಾವನೆಗಳನ್ನು ಚೆನ್ನಾಗಿ ಅರಿತುಕೊಂಡೇ ಅವರು ಈ ಮಾತುಗಳನ್ನು ಹೇಳಿದ್ದಾರೆ.

ಪ್ರಸ್ತುತ, ಭಾರತವು ಬ್ರಿಕ್ಸ್‌ಗೆ ಹಾಜರಾಗುವುದನ್ನು ಖಚಿತಪಡಿಸಿಕೊಳ್ಳುವುದು ಚೀನಾದ ಆದ್ಯತೆಯಾಗಿದೆ. ಏಕೆಂದರೆ, ರಷ್ಯಾ-ಉಕ್ರೇನ್ ನಡುವಿನ ರಕ್ತಸಿಕ್ತ ಯುದ್ಧವನ್ನೂ ಅಲ್ಲಿ ಚರ್ಚಿಸಲಾಗುವುದು. ರಷ್ಯಾವನ್ನು ಬಹಿರಂಗವಾಗಿ ಬೆಂಬಲಿಸುತ್ತಿಲ್ಲವಾದರೂ, ಚೀನಾ ಅದರ ಮಿತ್ರರಾಷ್ಟ್ರವಾಗಿದೆ. ಈಗ ಯುದ್ಧದಲ್ಲಿ ತನ್ನ ನಿಲುವನ್ನು ಬೆಂಬಲಿಸಲು ಚೀನಾ ಭಾರತದತ್ತ ನೋಡುತ್ತಿದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಸಂಧಾನ ಮತ್ತು ಮಾತುಗಳ ದಾರಿ ಮಾತ್ರವೇ ಉಳಿದಿದೆ ಎಂದು ಹೇಳುತ್ತಿರುವ ಭಾರತವು ಈವರೆಗೂ ತನ್ನ ನಿಲುವಿನಲ್ಲಿ ರಾಜತಾಂತ್ರಿಕವಾಗಿಯೇ ಉಳಿದಿದೆ.

2017ರಲ್ಲಿ, ಭೂತಾನ್, ಭಾರತ ಮತ್ತು ಚೀನಾಗಳ ಸಂಗಮ ಸ್ಥಳವಾಗಿರುವ ಡೋಕ್ಲಾಮ್‌ನಲ್ಲಿ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ನಡುವೆ ಎರಡು ತಿಂಗಳಿಗೂ ಹೆಚ್ಚು ಉದ್ವಿಗ್ನತೆ ಏರ್ಪಟ್ಟಿತ್ತು. ಡೋಕ್ಲಾಮ್ ಬಳಿ ಚೀನಾದ ರಸ್ತೆ ನಿರ್ಮಾಣವನ್ನು ತಡೆಯಲು ಭಾರತ ತನ್ನ ಮಿಲಿಟರಿಯನ್ನು ಬಳಸಿಕೊಂಡಿತು. ಅನಂತರ, ಎರಡೂ ಕಡೆಯವರು ಗಡಿಯಿಂದ ದೂರ ಸರಿಯಲು ಒಪ್ಪಂದ ಮಾಡಿಕೊಂಡರು. ಇದು ಚೀನಾದಲ್ಲಿ ನಡೆಯಲಿದ್ದ ಬ್ರಿಕ್ಸ್ ಶೃಂಗಸಭೆಯಲ್ಲಿ ಮೋದಿ ಅವರ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಇರಬಹುದು. ಸಭೆಯ ಅನಂತರ, ಚೀನಾ ಮತ್ತೆ ತನ್ನ ಬಾಲ ಬಿಚ್ಚಿ, ಅದೇ ಪ್ರದೇಶದಲ್ಲಿ ಹಲವಾರು ಮಿಲಿಟರಿ ರಚನೆಗಳ ನಿರ್ಮಾಣವನ್ನು ಪುನರಾರಂಭಿಸಿತು.

ಬಹುಶಃ ಚೀನಾ ಆತಿಥ್ಯದಲ್ಲಿ ಈ ಬಾರಿ ನಡೆಯಲಿರುವ ಬ್ರಿಕ್ಸ್ ಸಭೆಯಲ್ಲಿ ಪಾಲ್ಗೊಳ್ಳಲು ಮೋದಿ ಅವರಿಗೆ ಅನುಕೂಲಕರ ವಾತಾವರಣವನ್ನು ನಿರ್ಮಿಸಲು ವಾಂಗ್ ಪ್ರಯತ್ನಿಸಿದ್ದಾರೆ. ಮುಂದಿನ ಬ್ರಿಕ್ಸ್ ಶೃಂಗಸಭೆಯ ಆತಿಥ್ಯವನ್ನು ಭಾರತ ವಹಿಸಲಿದ್ದು, ಚೀನಾದ ಉಪಸ್ಥಿತಿಯು ಅತ್ಯಗತ್ಯವಾಗಿರುವ ಕಾರಣ ಪ್ರಧಾನಿಯೂ ಸಭೆಯಿಂದ ದೂರವುಳಿಯಲಿಕ್ಕಿಲ್ಲ.

ಭಾರತವು ಬೀಜಿಂಗ್‌ನೊಂದಿಗೆ ಕೈಕುಲುಕಬಹುದು ಮತ್ತು ಭವಿಷ್ಯದಲ್ಲಿ ದ್ವಿಪಕ್ಷೀಯ ಸಭೆಗಳು ಎಂದು ಕರೆಯಲಾಗುವ ಸಭೆಗಳಲ್ಲೂ ಭಾಗವಹಿಸಬಹುದು. ಆದರೆ ಚೀನಾ ಭಾರತದ ನಂಬಿಕೆಯನ್ನು ಕಳೆದುಕೊಂಡಿದೆ. ಭಾರತವು ಗಡಿ ವಿವಾದವನ್ನು ಬೂದಿ ಮುಚ್ಚಿದ ಕೆಂಡದಂತೆ ಇರಿಸಿಕೊಳ್ಳಬಾರದು. ಚೀನಾದ ಗಮನವು ಸಂಘರ್ಷದಿಂದ ಸಂಧಾನದ ಕಡೆಗೆ ಬದಲಾಗಿಲ್ಲ. ವಾಂಗ್ ಅವರ ಭೇಟಿಯ ಸಮಯದಲ್ಲಿ ಇದು ಸ್ಪಷ್ಟವಾಯಿತು.

ಇನ್ನೂ ಕೊನೆಗೊಳ್ಳದಿರುವ ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಚೀನಾದ ಆರ್ಥಿಕತೆಯು ಚೇತರಿಸಿಕೊಂಡಿಲ್ಲ. ರಷ್ಯಾದಂತೆ, ಚೀನಾ ಕೂಡ ತನ್ನ ಭೌಗೋಳಿಕ ರಾಜಕೀಯ ಸ್ಥಾನದಿಂದಾಗಿ ಪ್ರತ್ಯೇಕವಾಗುತ್ತಿದೆ. ಗಾಲ್ವಾನ್ ಘಟನೆಗೆ ಪ್ರತಿಕ್ರಿಯೆಯಾಗಿ, ಭಾರತವು ಅನೇಕ ಕ್ಷೇತ್ರಗಳಲ್ಲಿ ಚೀನಾದ ವ್ಯಾಪಾರವನ್ನು ನಿರ್ಬಂಧಿಸಿದೆ. ಈ ಹಂತದಲ್ಲಿ, ಬೀಜಿಂಗ್ ಭಾರತದ ಬಗೆಗಿನ ತನ್ನ ಹಳೆಯ ವಿಧಾನಕ್ಕೆ ಅಂಟಿಕೊಳ್ಳುವ ಬದಲು ತನ್ನದೇ ಆದ ಅಭಿವೃದ್ಧಿಯತ್ತ ಗಮನ ಹರಿಸಬೇಕಿತ್ತು. ತನ್ನ ಚಾಳಿಯನ್ನು ಬಿಡದ ಚೀನಾ, ಆರ್ಥಿಕವಾಗಿ ಮತ್ತು ಭೌಗೋಳಿಕವಾಗಿ ಬಲಿಷ್ಠವಾಗಲು ಸ್ವತಂತ್ರ ಹಾದಿಯಲ್ಲಿ ಸಾಗುತ್ತಿರುವ ಹೊಸ ಭಾರತವನ್ನು ಅಸಹಾಯಕತೆಯಿಂದ ನೋಡುತ್ತಿದೆ.

ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT