ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಹವಾಮಾನ ತುರ್ತುಸ್ಥಿತಿ: ಮೆಟ್ಟಬೇಕಿದೆ ಸವಾಲು

ಜನಸಮೂಹದ ಮೇಲಾಗುವ ದುಷ್ಪರಿಣಾಮದ ತೀವ್ರತೆ ತಗ್ಗಿಸಲು ಬೇಕು ಕಟ್ಟುನಿಟ್ಟಿನ ಕ್ರಮ
Published 5 ಜೂನ್ 2024, 0:16 IST
Last Updated 5 ಜೂನ್ 2024, 0:16 IST
ಅಕ್ಷರ ಗಾತ್ರ

ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಮುಂದಿನ ಐದು ವರ್ಷಗಳ ಅವಧಿಗೆ ದೇಶದ ಆಡಳಿತದ ಚುಕ್ಕಾಣಿ ಹಿಡಿಯಲು ರಾಜಕೀಯ ಪಕ್ಷಗಳಿಂದ ಕಸರತ್ತು ನಡೆದಿದೆ. ಈ ಹೊತ್ತಿನಲ್ಲೇ ವಿಶ್ವ ಪರಿಸರ ದಿನ (ಜೂನ್‌ 5), ನಮ್ಮ ಮುಂದೆ ಇರುವ ಸವಾಲುಗಳನ್ನು ನೆನಪಿಸುತ್ತಿದೆ. ಹವಾಮಾನ ತುರ್ತು ಪರಿಸ್ಥಿತಿಯ ಹೊತ್ತಿನಲ್ಲಿ, ಜನಸಾಮಾನ್ಯರ ಬದುಕನ್ನು ಸಹ್ಯಗೊಳಿಸಲು ತೆಗೆದು ಕೊಳ್ಳಬೇಕಾದ ಪಾರಿಸರಿಕ ಸಂರಕ್ಷಣಾ ಕ್ರಮಗಳು ನಿಜಕ್ಕೂ ಸವಾಲಿನವೇ ಆಗಿವೆ. ಆದ್ಯತೆಗಳನ್ನು ಗುರುತಿಸುವಲ್ಲಿ ಸೋತಿದ್ದರಿಂದ ದೇಶದ ಎಲ್ಲೆಡೆ ಅರಣ್ಯ ಪ್ರದೇಶಗಳು ಕ್ಷೀಣಿಸಿವೆ. ಅದರಲ್ಲೂ ಕಾನೂನುಬದ್ಧವಾಗಿ ಕಾಯ್ದಿಟ್ಟುಕೊಂಡ ಅರಣ್ಯಗಳನ್ನು ಅನ್ಯ ಉದ್ದೇಶಕ್ಕೆ ಬಳಸುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.

ಹಿಂದಿನ 24 ವರ್ಷಗಳಲ್ಲಿ ದೇಶವು 23 ಲಕ್ಷ ಹೆಕ್ಟೇರ್‌ನಷ್ಟು ಹಸಿರು ಕವಚವನ್ನು ಕಳೆದುಕೊಂಡಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಹಸಿರು ನ್ಯಾಯಮಂಡಳಿಯು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು, ಕೇಂದ್ರ ಸರ್ಕಾರಕ್ಕೆ ವಿವರಣೆ ಕೇಳಿದೆ. ಅಭಿವೃದ್ಧಿಯ ಹೆಸರಿನಲ್ಲಿ ಪರಿಸರ ಕಾಳಜಿ ಮರೆತ ಸರ್ಕಾರಕ್ಕೆ ಸಮಜಾಯಿಷಿ ನೀಡುವುದು ಕಷ್ಟದ ಕೆಲಸವೇ ಆಗಲಿದೆ. ಜೀವಿವೈವಿಧ್ಯ ನೆಲೆಗಳು, ಅಭಯಾರಣ್ಯಗಳು, ರಾಷ್ಟ್ರೀಯ ಉದ್ಯಾನಗಳು ಸೇರಿದಂತೆ ವಿವಿಧ ಸ್ವರೂಪದ ಅರಣ್ಯ ಪ್ರದೇಶಗಳಲ್ಲಿ 2014– 20ರ ನಡುವಿನ ಆರು ವರ್ಷಗಳಲ್ಲಿ 270 ಮಹಾಯೋಜನೆಗಳಿಗೆ ಕೇಂದ್ರ ಪರಿಸರ ಸಚಿವಾಲಯ ಅನುಮತಿ ನೀಡಿದೆ.

ರಾಷ್ಟ್ರೀಯ ಅರಣ್ಯ ನೀತಿಯ ಪ್ರಕಾರ, ದೇಶದ ಒಟ್ಟು ಭೌಗೋಳಿಕ ವಿಸ್ತೀರ್ಣದ ಶೇಕಡ 33ರಷ್ಟು ಪ್ರದೇಶದಲ್ಲಿ ಅರಣ್ಯ ಇರಬೇಕು. ಆದರೆ, ಈ ಪ್ರಮಾಣ ಶೇ 22ಕ್ಕೆ ಇಳಿದಿರುವುದು ಹವಾಮಾನ ತುರ್ತು ಪರಿಸ್ಥಿತಿಗೆ ಪ್ರಮುಖ ಕಾರಣವಾಗಿದೆ. ಪರಿಸರ ಸಂರಕ್ಷಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಸುಪ್ರೀಂ ಕೋರ್ಟ್‌ ಕೂಡ, ರಾಷ್ಟ್ರೀಯ ಸಂಪತ್ತಾಗಿರುವ ಅರಣ್ಯಗಳು ದೇಶದ ಆರ್ಥಿಕ ಸಂಪತ್ತಿನ ಮೂಲಗಳೂ ಆಗಿವೆ ಎಂದು ಪ್ರತಿಪಾದಿಸಿದೆ. ಇದೇ ಹೊತ್ತಿನಲ್ಲಿ ‘ಡೌನ್ ಟು ಅರ್ಥ್’ ನಿಯತಕಾಲಿಕ ಹಾಗೂ ವಿಜ್ಞಾನ ಮತ್ತು ಪರಿಸರ ಕೇಂದ್ರ ಜಂಟಿಯಾಗಿ ‘ಭಾರತದ ಪರಿಸರದ ಸ್ಥಿತಿಗತಿ- 2024’ ವರದಿಯನ್ನು ಬಿಡುಗಡೆ ಮಾಡಿವೆ. ಹವಾಮಾನದ ಮೇಲೆ ಗಂಭೀರ ವ್ಯತಿರಿಕ್ತ ಪರಿಣಾಮ ಬೀರಬಲ್ಲ ಆರು ಮುಖ್ಯ ಕ್ಷೇತ್ರಗಳ ಸ್ಥಿತಿಗತಿ
ಗಳನ್ನು ಈ ವರದಿಯಲ್ಲಿ ವಿಶ್ಲೇಷಿಸಲಾಗಿದೆ.

2023ರಲ್ಲಿ ಹವಾಮಾನ ವೈಪರೀತ್ಯ ಬಾಧಿಸಿದ ಒಟ್ಟು ಅವಧಿ, ಹವಾಮಾನ ತುರ್ತು ಪರಿಸ್ಥಿತಿಯ ಪರಿಣಾಮಕ್ಕೆ ಬಲಿಯಾದವರು, ಫಸಲು ನಾಶ, ಭಾರತ ಹೊರಕಕ್ಕಿದ ಇಂಗಾಲಾಮ್ಲದ ಪ್ರಮಾಣ ಈ ಎಲ್ಲದರ ಬಗ್ಗೆಯೂ ವಿವರಿಸಲಾಗಿದೆ. ಇಂಗಾಲಾಮ್ಲ ಹೊರಸೂಸುವಿಕೆಯಲ್ಲಿ ವಿದ್ಯುತ್ ಕ್ಷೇತ್ರ ಸಿಂಹಪಾಲನ್ನು ಹೊಂದಿದೆ. ಶೇ 20ರಷ್ಟು ಪ್ರಮಾಣದ ಇಂಗಾಲಾಮ್ಲವನ್ನು ನಿಯಮಿತವಾಗಿ ಹೀರಿಕೊಳ್ಳುವ ಅರಣ್ಯ, ಇತರ ಭೂಪ್ರದೇಶಗಳು ಕ್ರಮೇಣ ಕ್ಷೀಣಿಸುತ್ತಿವೆ. 2021ನೇ ಸಾಲಿನಲ್ಲಿ ಭಾರತದಲ್ಲಿ ಸಂಭವಿಸಿದ ಒಟ್ಟು ಮರಣ ಪ್ರಮಾಣದಲ್ಲಿ ಹೆಚ್ಚಿನವುಗಳಿಗೆ ಹೃದಯ ಸಂಬಂಧಿ ಕಾಯಿಲೆ, ಶ್ವಾಸಕೋಶದ ಸೋಂಕು, ಕ್ಷಯರೋಗ ಹಾಗೂ ದೀರ್ಘಕಾಲದ ಉಸಿರಾಟದ ತೊಂದರೆಯು ಕಾರಣಗಳಾಗಿವೆ. ಕಲುಷಿತ ನೀರು ಸೇವನೆ ಕೂಡ ಮತ್ತೊಂದು ಪ್ರಧಾನ ಕಾರಣವಾಗಿದೆ. ದೇಶದ ಉತ್ತರ ಹಾಗೂ ಪೂರ್ವ ಭಾಗದ ಪ್ರದೇಶಗಳು ಅತ್ಯಂತ ಹೆಚ್ಚು ವಾಯುಮಾಲಿನ್ಯ ಹೊಂದಿದ್ದು, ದೆಹಲಿ ಸೇರಿದಂತೆ ಹರಿಯಾಣ, ಉತ್ತರಪ್ರದೇಶ, ರಾಜಸ್ಥಾನವು ಅತಿ ಹೆಚ್ಚು ವಾಯುಮಾಲಿನ್ಯ ಸೂಚ್ಯಂಕವನ್ನು ದಾಖಲಿಸಿವೆ. ಬದಲಿಗೆ, ದೇಶದ ದಕ್ಷಿಣ ಪ್ರದೇಶಗಳು ಕಡಿಮೆ ವಾಯುಮಾಲಿನ್ಯವನ್ನು ಹೊಂದಿದ್ದು, ಕರ್ನಾಟಕದ ಮೈಸೂರು ದೇಶದಲ್ಲೇ ಅತ್ಯಂತ ಶುದ್ಧವಾದ ಹವೆ ಹೊಂದಿದ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಮಹಾ ನಗರಗಳು ಮತ್ತು ನಗರಗಳು ತಮ್ಮ ಹಸಿರುಕವಚವನ್ನು ಕಳೆದುಕೊಂಡ ಕಾರಣಕ್ಕೆ ಅತಿಬಿಸಿಯಿಂದ ಬಳಲುತ್ತಿವೆ. ವಾತಾವರಣವನ್ನು ತಂಪಾಗಿಡುವ ಸಾಮರ್ಥ್ಯ ಹೊಂದಿರುವ ಮರಗಿಡಗಳ ಬದಲಿಗೆ ರಸ್ತೆ, ರೈಲು ಮಾರ್ಗ ಹಾಗೂ ಕಟ್ಟಡಗಳನ್ನು ಅನಿಯಮಿತವಾಗಿ ನಿರ್ಮಿಸಿದ್ದೇ ಈ ವಿದ್ಯಮಾನಕ್ಕೆ ಕಾರಣ. ಈ ವರ್ಷದ ಮೇ 22ರಂದು ದೆಹಲಿಯು 8,000 ಮೆಗಾವಾಟ್ ವಿದ್ಯುತ್ತನ್ನು ಬಳಸಿದ್ದು, ಒಂದೇ ದಿನದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ವಿದ್ಯುತ್ ಬಳಕೆಯಾಗಿರುವುದು ಸಾರ್ವಕಾಲಿಕ ದಾಖಲೆಯಾಗಿದೆ.

ಸಾರ್ವಜನಿಕ ಸಾರಿಗೆಯ ಮೇಲಿನ ಅವಲಂಬನೆ ಕಡಿಮೆಯಾಗಿದೆ. ಮುಖ್ಯವಾಗಿ ಹೊಸ ಬಸ್ಸುಗಳ ನೋಂದಣಿ ಪ್ರಮಾಣ ಇಳಿಕೆಯಾಗಿದೆ. ವಿದ್ಯುತ್‌ಚಾಲಿತ ವಾಹನಗಳ ನೋಂದಣಿ ಸಂಖ್ಯೆಯಲ್ಲಿ ತುಸು ಏರಿಕೆ ಕಂಡರೂ, ಡೀಸೆಲ್ ವಾಹನಗಳು ಎಂದಿನಂತೆ ಹೆಚ್ಚು ಮಾಲಿನ್ಯವನ್ನು ಕಕ್ಕುತ್ತಿವೆ. ಅವಧಿ ಮೀರಿದ ಭಾರಿ ವಾಹನಗಳು ಸಹ ಮಾಲಿನ್ಯದ ಪ್ರಮಾಣ ಹೆಚ್ಚಾಗಲು ಮತ್ತೊಂದು ಕಾರಣವಾಗಿವೆ. ಪ್ರಯಾಣಿಕರು ಸಂಚರಿಸುವ ವಿದ್ಯುತ್‌ಚಾಲಿತ ಭಾರಿ ವಾಹನಗಳನ್ನು ನೋಂದಾಯಿಸಿ ರುವುದರಲ್ಲಿ ದೆಹಲಿ, ಕರ್ನಾಟಕ ಮತ್ತು ಮಹಾರಾಷ್ಟ್ರ ಮುಂಚೂಣಿಯಲ್ಲಿವೆ. ದೇಶದಲ್ಲಿ ವಿದ್ಯುತ್‌ಚಾಲಿತ ಭಾರಿ ವಾಹನಗಳಲ್ಲಿ ಶೇ 75ರಷ್ಟು ಈ ಮೂರು ರಾಜ್ಯಗಳಲ್ಲಿವೆ.

ಭಾರತದಲ್ಲಿ ಪ್ರತಿನಿತ್ಯ 30 ಸಾವಿರ ಟನ್ ಘನತ್ಯಾಜ್ಯ ಸರಿಯಾಗಿ ವಿಲೇವಾರಿಯಾಗದೆ ಭೂಪ್ರದೇಶ ಹಾಗೂ ತನ್ಮೂಲಕ ಜಲಮೂಲಗಳನ್ನು ಕಲುಷಿತಗೊಳಿಸುತ್ತಿದೆ. ಗೊಬ್ಬರವಾಗಬಲ್ಲ ಹಸಿತ್ಯಾಜ್ಯ ಕೂಡ ನಿರ್ವಹಣೆ ಮತ್ತು ವಿಲೇವಾರಿ ಕೊರತೆಯನ್ನು ಎದುರಿಸುತ್ತಿದೆ. ಸರ್ಕಾರಗಳ ನಿರ್ಲಕ್ಷ್ಯ, ನೈರ್ಮಲ್ಯ ಕಾಮಗಾರಿಗಳನ್ನು ನಿಯಮಿತವಾಗಿ ಕೈಗೊಳ್ಳದಿರುವುದು, ನಿರ್ವಹಣೆಯಲ್ಲಿನ ವೈಫಲ್ಯದಿಂದಾಗಿ ಪ್ಲಾಸ್ಟಿಕ್ ತ್ಯಾಜ್ಯವು ವಿವಿಧ ಮಾಲಿನ್ಯಗಳಿಗೆ ನೇರವಾಗಿ ಕಾರಣವಾಗಿದೆ.

ಹವಾಮಾನ ಸಂಬಂಧಿ ಕಾರಣಗಳಿಂದ ಆಂತರಿಕ ವಲಸೆಯ ಪ್ರಮಾಣ ಹೆಚ್ಚುತ್ತಿದೆ. ‘ಆಂತರಿಕ ವಲಸೆ– 2024’ ಜಾಗತಿಕ ವರದಿಯ ಪ್ರಕಾರ, 2023ನೇ ಸಾಲಿನಲ್ಲಿ ಪ್ರಪಂಚದ 45 ದೇಶಗಳ ಸುಮಾರು 4.5 ಕೋಟಿ ಜನರು ಆಂತರಿಕವಾಗಿ ವಲಸೆ ಕೈಗೊಂಡಿದ್ದಾರೆ. ಈ ಪಟ್ಟಿಯಲ್ಲಿ ಭಾರತವು 20ನೇ ಸ್ಥಾನದಲ್ಲಿದೆ. ಇದಕ್ಕೂ ಹವಾಮಾನ ವೈಪರೀತ್ಯದ ದುಷ್ಪರಿಣಾಮಗಳಾದ ಬರ, ನೆರೆ ಮತ್ತು ಚಂಡಮಾರುತ ಮುಖ್ಯ ಕಾರಣಗಳಾಗಿವೆ. 2022-23ನೇ ಸಾಲಿನಲ್ಲಿ ಅರಣ್ಯ ಪ್ರದೇಶವನ್ನು ಅರಣ್ಯೇತರ ಉದ್ದೇಶಕ್ಕೆ ಬಳಸಿದ ರಾಜ್ಯಗಳಲ್ಲಿ ಒಡಿಶಾ, ಮಧ್ಯಪ್ರದೇಶ, ಗುಜರಾತ್, ಉತ್ತರಾಖಂಡ ಮತ್ತು ಉತ್ತರಪ್ರದೇಶ ಮುಂಚೂಣಿಯಲ್ಲಿವೆ.

ಮಾನವಕೇಂದ್ರಿತ ಚಟುವಟಿಕೆಗಳ ಕಾರಣಕ್ಕೆ ವನ್ಯಜೀವಿಗಳ ಆವಾಸಸ್ಥಾನ ಮತ್ತು ಆಹಾರ ಲಭ್ಯತೆ ವೇಗವಾಗಿ ಕ್ಷೀಣಿಸುತ್ತಿದ್ದು, ಇದು ಮಾನವ-ವನ್ಯಜೀವಿ ಸಂಘರ್ಷಕ್ಕೆ ಕಾರಣವಾಗಿದೆ. 2022ನೇ ಸಾಲಿನಲ್ಲಿ ಪ್ರತಿ ಗಂಟೆಗೊಬ್ಬರಂತೆ ರೈತ ಅಥವಾ ರೈತ ಕಾರ್ಮಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೇ ಹೊತ್ತಿನಲ್ಲಿ 195 ರೈತ ಪ್ರತಿಭಟನೆಗಳು ದಾಖಲಾಗಿವೆ. ಪ್ರತಿಭಟನೆಗೆ ಮುಖ್ಯ ಕಾರಣ, ಕೃಷಿ ಭೂಮಿ ಭೂಸ್ವಾಧೀನ ಪ್ರಕ್ರಿಯೆ ಹಾಗೂ ಕನಿಷ್ಠ ಬೆಂಬಲ ಬೆಲೆ ಬೇಡಿಕೆಯಾಗಿದೆ. ಜೊತೆಗೆ ರೈತರ ಹಿತಾಸಕ್ತಿಗೆ ವಿರುದ್ಧವಾದ ಕಾನೂನು ಸಹ ಕಾರಣವಾಗಿದೆ. ಉದಾಹರಣೆಗೆ, ಕೆಲವು ಕೃಷಿ ಉತ್ಪನ್ನಗಳಿಗೆ ರಫ್ತು ನಿಷೇಧ ಹೇರುತ್ತಿರುವುದು. ಸಾವಯವ ಕೃಷಿ ಉತ್ಪನ್ನಗಳಿಗೆ ಸಂಬಂಧಿಸಿದಂತೆ, ವಿವಿಧ ಸರ್ಕಾರಿ ಮತ್ತು ಸ್ವಯಂಸೇವಾ ಸಂಸ್ಥೆಗಳಿಂದ ಪ್ರಮಾಣೀಕರಿಸಿದ ಕೃಷಿ ಜಮೀನಿನ ವ್ಯಾಪ್ತಿ ಹೆಚ್ಚಿದೆಯಾದರೂ, ಸಾವಯವ ಕೃಷಿ ಹಾಗೂ ತೋಟಗಾರಿಕಾ ಉತ್ಪಾದನಾ ಮಟ್ಟ ಇಳಿಕೆಯಾಗಿದೆ.

ಹದಿನೈದಕ್ಕಿಂತ ಹೆಚ್ಚು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಂತರ್ಜಲವನ್ನು ನಿಗದಿತ ಮಾನದಂಡಕ್ಕಿಂತ ಹೆಚ್ಚು ಬಳಸಲಾಗಿದೆ. ಕೋವಿಡ್ ಉಲ್ಬಣಿಸಿದ ಅವಧಿಯ ನಂತರದಲ್ಲಿ ಉದ್ಯೋಗಾವಕಾಶ ಗಣನೀಯವಾಗಿ ಕಡಿಮೆಯಾಗಿರು ವುದು, ವಾರಾಣಸಿಯಂತಹ ಸೌರ ನಗರದಲ್ಲೇ ಸೌರ ವಿದ್ಯುತ್ ಉತ್ಪಾದನೆ ಗುರಿ ಮುಟ್ಟದೇ ಕುಂಟುತ್ತಿರುವಂತಹ ವಿಚಾರಗಳನ್ನು ವರದಿಯು ತೆರೆದಿಟ್ಟಿದೆ.

ಕೇಂದ್ರದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯುವವರು ಈ ಎಲ್ಲಾ ಅಂಶಗಳನ್ನು ಗಂಭೀರವಾಗಿ ಗಮನಿಸಿ, ಹವಾಗುಣ ತುರ್ತು ಪರಿಸ್ಥಿತಿ ಮತ್ತು ಅದರಿಂದ ಜನರ ಮೇಲಾಗುವ ದುಷ್ಪರಿಣಾಮಗಳ ತೀವ್ರತೆಯನ್ನು ತಗ್ಗಿಸಲು ಮತ್ತು ನಿಯಂತ್ರಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಅವು ಕಟ್ಟುನಿಟ್ಟಾಗಿ ಅನುಷ್ಠಾನ ಆಗುವಂತೆ ನೋಡಿಕೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT