ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರು ಇತ್ತೀಚೆಗಂತೂ ಒಂದಿಲ್ಲೊಂದು ಕಾರಣಕ್ಕಾಗಿ ಪ್ರಸ್ತಾಪವಾಗುತ್ತಿದೆ. ಸಂದರ್ಭೋಚಿತವಾಗಿ ಹೇಳುವುದಾದರೆ, ನಾಲ್ವಡಿ ಅವರ ಹೆಸರನ್ನು ಕನ್ನಡಿಗರು ಅಭಿಮಾನದಿಂದ ಸ್ಮರಿಸಬೇಕಾದ ತಿಂಗಳು ಆಗಸ್ಟ್. ಅವರು ಮೈಸೂರು ಸಂಸ್ಥಾನದ ಮಹಾರಾಜರಾಗಿ ಪಟ್ಟಾಭಿಷಿಕ್ತರಾದದ್ದು ಆಗಸ್ಟ್ 8ರಂದು (1902). ಅವರು ನಮ್ಮನ್ನು ಅಗಲಿದ್ದು ಆಗಸ್ಟ್ 3ರಂದು (1940).

ನಾಲ್ವಡಿ ಅವರ ವ್ಯಕ್ತಿತ್ವಕ್ಕೆ ದಿವ್ಯತೆ, ಭವ್ಯತೆಯ ಮೆರುಗು ಬಂದದ್ದು ಅವರು ಮಹಾರಾಜರು ಎಂಬ ಕಾರಣಕ್ಕಲ್ಲ. ಬದಲಿಗೆ, ಮಹಾರಾಜರಾಗಿದ್ದವರು ಅರಮನೆಯ ಅಟ್ಟದಿಂದ ಜನಮನಕ್ಕಿಳಿದರು ಎಂಬ ಕಾರಣಕ್ಕಾಗಿ. ಬಿಜ್ಜಳನ ಅರಮನೆಗೆ ಪ್ರತಿಯಾಗಿ ಬಸವಣ್ಣ ‘ಮಹಾಮನೆ’ಯನ್ನು ಕಟ್ಟಿದರಷ್ಟೆ. ಆದರೆ, ನಾಲ್ವಡಿಯವರು ಅರಮನೆಯನ್ನೇ ಜನ ಸಾಮಾನ್ಯರ ಮಹಾಮನೆಯಾಗಿ ಪರಿವರ್ತಿಸಿದರು. ಕುವೆಂಪು ಅವರು ಸಾಮ್ರಾಜ್ಯಶಾಹಿ, ಪುರೋಹಿತಶಾಹಿ ಮತ್ತು ಬಂಡವಾಳಶಾಹಿ ವಿರೋಧವಾದ ನಿಲುವು ತಾಳಿರುವುದನ್ನು ಅವರ ಸಾಹಿತ್ಯದಲ್ಲಿ ಕಂಡಿದ್ದೇವೆ. ಅಂತಹ ಕುವೆಂಪು, ನಾಲ್ವಡಿ ಅವರನ್ನು ಕುರಿತು ಬರೆದಿರುವ ‘ಬೆಳ್ಳಿ ಹಬ್ಬದ ಕಬ್ಬದ ಬಳ್ಳಿ’ ಕವನದಲ್ಲಿ– ರಾಜಋಷಿ, ಕರ್ಮಯೋಗಿ, ಆತ್ಮವೀರ, ಧರ್ಮವೀರ, ಲೋಕಮಾನ್ಯ, ಪೂರ್ಣಹೃದಯಿ– ಮೊದಲಾದ ವಿಶ್ಲೇಷಣಾತ್ಮಕ ಪದಪುಂಜಗಳನ್ನು ಬಳಸುವುದರ ಮೂಲಕ ನಾಲ್ವಡಿಯವರ ವ್ಯಕ್ತಿತ್ವವನ್ನು ಕಟ್ಟಿಕೊಡುವ ಕೆಲಸ ಮಾಡುತ್ತಾರೆ. ಮತ್ತೂ ಒಂದು ಹೆಜ್ಜೆ ಮುಂದೆ ಹೋಗುವ ಅವರು– ಹರಿಶ್ಚಂದ್ರ, ರಾಮ, ಕೃಷ್ಣ, ಅಶೋಕ, ಯುಧಿಷ್ಠಿರಾದಿಯಾಗಿ ಮಹಾನೃಪರ ಸಾಲಿನಲ್ಲಿ ನಾಲ್ವಡಿ ಅವರ ಹೆಸರು ಬೆಳಗುತ್ತದೆ ಎನ್ನುತ್ತಾರೆ.

ಚಾಮರಾಜೇಂದ್ರ ಒಡೆಯರ್ ಮೃತರಾದಾಗ ನಾಲ್ವಡಿ ಅವರು ಹತ್ತು ವರ್ಷದ ಬಾಲಕ. ಅವರು ರಾಜ್ಯಾಭಿಷಿಕ್ತರಾದಾಗ 18 ವರ್ಷದ ಯುವಕ. ಪಟ್ಟಾಭಿಷಿಕ್ತರಾದ ಮೇಲೆ ತಂದೆಯವರಂತೆಯೇ ನಾಡಿನ ಉದ್ದಗಲಕ್ಕೂ ಸಂಚರಿಸಿದರು. ಹಾಗೆ ಸಂಚರಿಸಿದಾಗ ತಮ್ಮ ತಂದೆಯವರು ಹುಟ್ಟುಹಾಕಿ ಹೋಗಿದ್ದ ಸಾಧನಾ ಮಾರ್ಗದ ವಿಸ್ತರಣೆಯ ದೂರದೃಷ್ಟಿಯ ಕನಸನ್ನು ಕಂಡರು. ಇದರಿಂದಲೇ ಅವರು ‘ಮಾದರಿ ಮೈಸೂರು ಸಂಸ್ಥಾನ’ವನ್ನು ಕಟ್ಟಲು ಸಾಧ್ಯವಾಯಿತು. ಈ ಮಾತು ಹೇಳುವಾಗ ಒಂದು ಪ್ರಸಂಗ ನೆನಪಿಗೆ ಬರುತ್ತದೆ. (ಎಂ. ಶಿಂಗ್ರಯ್ಯನವರು ಬರೆದಿರುವ ಶ್ರೀ ಚಾಮರಾಜೇಂದ್ರ ಒಡೆಯರವರ ಚರಿತ್ರೆ, 1927). ಅದು ಹೀಗಿದೆ:

ನಾಲ್ವಡಿ ಅವರ ತಂದೆ ಚಾಮರಾಜೇಂದ್ರ ಒಡೆಯರ್ ಅವರು ಆಳ್ವಿಕೆ ನಡೆಸುತ್ತಿದ್ದ ಕಾಲದಲ್ಲಿ ಸರ್ ರಿಚರ್ಡ್ ಮೀಡ್ ಎಂಬ ಆಂಗ್ಲ ಅಧಿಕಾರಿ ಮೈಸೂರು ಸಂಸ್ಥಾನದ ಚೀಫ್ ಕಮಿಷನರ್ ಆಗಿದ್ದರು. ನಂತರ ಅವರು ನಿವೃತ್ತರಾಗಿ ಸ್ವದೇಶಕ್ಕೆ ಹಿಂದಿರುಗಿದರು. 1884ರಲ್ಲಿ ಚಾಮರಾಜೇಂದ್ರರಿಗೆ ನಾಲ್ವಡಿ ಕೃಷ್ಣರಾಜ ಪುತ್ರ ರತ್ನನ ಜನನದ ಸಂಭ್ರಮ. ಆಗ ಮೀಡ್ರವರು ಮಹಾರಾಜರಿಗೆ ಅಭಿನಂದಿಸಿ ಪತ್ರ ಬರೆದರು. ಆ ಪತ್ರಕ್ಕೆ ಪ್ರತ್ಯುತ್ತರವಾಗಿ ಚಾಮರಾಜೇಂದ್ರರು ಮೀಡ್ ಅವರಿಗೆ ಬರೆದ ಪತ್ರದ ಒಕ್ಕಣೆ ಹೀಗಿದೆ:

‘ಪ್ರಿಯ ಮಿತ್ರರಾದ ಸರ್ ರಿಚರ್ಡ್ ಮೀಡ್ ಸಾಹೇಬರವರೇ, ನನಗೆ ಪುತ್ರೋತ್ಸವ ಆದುದಕ್ಕಾಗಿಯೂ, ಜಿ.ಸಿ.ಎಸ್.ಐ ಎಂಬ ಬಿರುದು ಲಭಿಸಿದುದಕ್ಕಾಗಿಯೂ ತಾವು ಬರೆದ ಸಂತೋಷಪೂರಕವಾದ ಸ್ನೇಹ ಪತ್ರಕ್ಕಾಗಿ ನಾನು ನಿಮ್ಮನ್ನು ಮನಸಾರೆ ಅಭಿನಂದಿಸುತ್ತೇನೆ.

ಇದುವರೆಗೂ ನಮ್ಮಲ್ಲಿ ಮಳೆಗಾಲ ವಿಮುಖ ವಾಗಿರುವುದು ಎಂದು ತಿಳಿಸಲು ವಿಷಾದಿಸುತ್ತೇನೆ. ಆದರೆ, ಕಾಲಸ್ಥಿತಿಯು ಉತ್ತಮವಾಗಬಹುದು ಎಂಬ ಭರವಸೆಯೂ ತೋರುತ್ತಿದೆ. ಹೈಕೋರ್ಟಿಗೆ ಸಂಬಂಧಿಸಿದ ಏರ್ಪಾಡುಗಳೆಲ್ಲಾ ಮುಗಿಯುತ್ತಾ ಬಂದಿದೆ. ಇದು ಪ್ರಜೆಗಳ ಗೌರವಕ್ಕೆ ಪಾತ್ರವಾದ ನ್ಯಾಯಸ್ಥಾನ ಆಗಿರುತ್ತದೆ ಎಂದು ಭಾವಿಸುತ್ತೇನೆ.

ನಮ್ಮ ಸಂಸ್ಥಾನದ ರೈಲ್ವೆಗಳು ಕ್ರಮೇಣ ವೃದ್ಧಿಯಾಗುತ್ತಿವೆ ಎಂದು ತಿಳಿಸಿದರೆ ತಾವು ಸಂತೋಷಪಡುವಿರಿ. ಬೆಂಗಳೂರಿನಿಂದ ಮೈಸೂರಿಗೆ ಮಾತ್ರವಲ್ಲದೆ ತಿಪಟೂರು ಕಡೆಗೆ ಐವತ್ತು ಮೈಲುಗಳಿಗಿಂತ ಹೆಚ್ಚಾಗಿ ರೈಲು ರಸ್ತೆಯು ಮುಗಿಯುತ್ತಾ ಬಂದಿದೆ. ತಮ್ಮ ಪತ್ನಿಯವರಾದ ಲೇಡಿ ಮೀಡ್ರವರಿಗೆ ವಿಶ್ವಾಸಪೂರ್ವಕ ನನ್ನ ಧನ್ಯವಾದಗಳನ್ನು ದಯವಿಟ್ಟು ತಿಳಿಸಿ.

1884ರ ಜೂನ್ 26ರಂದು ಬೆಂಗಳೂರಿನಿಂದ ಚಾಮರಾಜೇಂದ್ರ ಒಡೆಯರ್ ಅವರು ಬರೆದ ಪತ್ರ ಒಂದು ಶುದ್ಧ ಖಾಸಗಿ ಪತ್ರ. ಖಾಸಗಿ ಪತ್ರದಲ್ಲೂ ಮಹಾರಾಜರು ಆ ನಿವೃತ್ತ ಅಧಿಕಾರಿಗೆ ತಮ್ಮ ಸಂಸ್ಥಾನದ ಮಳೆ ಬೆಳೆ, ಹೈಕೋರ್ಟ್ ಕೆಲಸದ ಪ್ರಗತಿ, ರೈಲು ಮಾರ್ಗಗಳ ಅಭಿವೃದ್ಧಿ– ಈ ವಿಷಯಗಳನ್ನು ತಿಳಿಸುತ್ತಾರೆಂದರೆ, ಮಹಾರಾಜರವರ ಜನಹಿತ ಧ್ಯಾನದ ಅರಿವಾಗುತ್ತದೆ. ಜೊತೆಗೆ, ಮೀಡ್ ಎಂಬ ವ್ಯಕ್ತಿ ಅಧಿಕಾರದಲ್ಲಿದ್ದಾಗ ತೋರಿರಬಹುದಾದ ಕಾರ್ಯಕ್ಷಮತೆಯನ್ನು ಮಹಾರಾಜರು ಗುರುತಿಸಿರುವುದು ಗೊತ್ತಾಗುತ್ತದೆ. ಜನಪರ ಆಡಳಿತಗಾರ ಮತ್ತು ದಕ್ಷ ಅಧಿಕಾರಿಯ ಮಧ್ಯೆ ಇರಬೇಕಾದ ಸಂಬಂಧದ ರೀತಿಯನ್ನು ಪತ್ರ ಸೂಕ್ಷ್ಮವಾಗಿ ಸೂಚಿಸುತ್ತದೆ.

ತಂದೆಯವರ ಮೇಲ್ಪಂಕ್ತಿಯನ್ನೇ ಅನುಸರಿಸಿದವರು ನಾಲ್ವಡಿಯವರು. ಅವರ ತಂದೆ 1881ರ ಅ. 7ರಂದು ಸ್ಥಾಪಿಸಿದ್ದ ‘ಪ್ರಜಾಪ್ರತಿನಿಧಿ ಸಭೆ’ಯನ್ನು ಮತ್ತಷ್ಟು ಜನಪರವಾಗಿಸಿದರು. ಪ್ರಜಾಪ್ರತಿನಿಧಿ ಸಭೆಗೆ ಚುನಾವಣೆ ಮತ್ತು ಮಹಿಳೆಯರಿಗೂ ಮತದಾನದ ಹಕ್ಕು ನೀಡಿದರು. 1907ರಲ್ಲಿ ನ್ಯಾಯವಿಧಾಯಕ ಪರಿಷತ್ತನ್ನು ರೂಪಿಸಿದರು. ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ವಿಶ್ವವಿದ್ಯಾಲಯ, ಕೃಷ್ಣರಾಜ ಸಾಗರ, ಭದ್ರಾವತಿಯ ಉಕ್ಕಿನ ಕಾರ್ಖಾನೆ, ಮಿಂಟೋ ಆಸ್ಪತ್ರೆ, ಇರ್ವಿನ್ ನಾಲೆ, ಕಾವೇರಿ ವಿದ್ಯುತ್ ಸರಬರಾಜು ಯೋಜನೆ, ಮೈಸೂರು ಬ್ಯಾಂಕ್, ಚೇಂಬರ್ ಆಫ್ ಕಾಮರ್ಸ್... ಒಂದೇ ಎರಡೇ. ಸಾಮಾನ್ಯರಿಗೆ ಅಗತ್ಯವಾಗಿದ್ದ ವಿದ್ಯಾಭ್ಯಾಸ, ಆರೋಗ್ಯ, ವಿದ್ಯುದ್ದೀಪ, ರಸ್ತೆ, ರೈಲು ಮಾರ್ಗ, ನೀರಾವರಿ, ವ್ಯವಸಾಯ, ವಾಣಿಜ್ಯ, ಉದ್ಯಮಗಳಿಗೆ ಬೆಲೆಯಿತ್ತು ಮಾದರಿ ಮೈಸೂರು ಸಂಸ್ಥಾನವನ್ನೂ, ಆಧುನಿಕ ಮೈಸೂರು ಸಂಸ್ಥಾನವನ್ನೂ ಕಟ್ಟಿದ ಕೀರ್ತಿ ನಾಲ್ವಡಿಯವರದ್ದು.

ಕೃಷ್ಣರಾಜಸಾಗರ ಅಣೆಕಟ್ಟು ನಿರ್ಮಾಣದ ಅಗಾಧ ವೆಚ್ಚವನ್ನು ಅವರು ವೈಯಕ್ತಿಕವಾಗಿ ಭರಿಸಿದ್ದು, ಮಹಾಯುದ್ಧದ ಕಾಲದಲ್ಲಿ ಕಲ್ಲಿದ್ದಲು ಕೊರತೆಯಾದರೂ ಭದ್ರಾವತಿ ಉಕ್ಕಿನ ಕಾರ್ಖಾನೆಯನ್ನು ಸೌದೆ ಸುಟ್ಟು ನಡೆಸಿದ್ದು ಇಂದಿನವರಿಗೆ ದಂತಕಥೆಗಳೇ.

ನನಗೆ ಅವರ ನೂರಾರು ಸಾಧನೆಗಳ ಪಟ್ಟಿಯಲ್ಲಿ ಒಂದು ಈಗ ಪ್ರಸ್ತುತವೆನಿಸುತ್ತದೆ. 1905ರಲ್ಲಿ ಪ್ಲೇಗ್ ಮಾರಿ ಸಂಸ್ಥಾನವನ್ನು ಅಪ್ಪಳಿಸಿದಾಗ ಅವರು ಅದನ್ನು ನಿಭಾಯಿಸಿದ ರೀತಿ. ಮಾರಕ ಪ್ಲೇಗ್ನಿಂದ ಸಂಸ್ಥಾನವನ್ನು ರಕ್ಷಿಸಲು ಶಾಶ್ವತ ವಿಧಾನವನ್ನು ಕಂಡುಹಿಡಿಯಬೇಕೆಂದು ಬಯಸಿ 12 ಸದಸ್ಯರನ್ನು ಒಳಗೊಂಡ ಸಮಿತಿಯನ್ನು ಅವರು ರಚಿಸಿದರು. ಮುಖ್ಯ ಎಂಜಿನಿಯರ್ ಡಬ್ಲ್ಯು. ಮ್ಯಾಕ್ ಹಚಿನ್ ಅಧ್ಯಕ್ಷತೆಯಲ್ಲಿ ರಚಿಸಲಾದ ಸಮಿತಿಯಲ್ಲಿ ಸೀನಿಯರ್ ಸರ್ಜನ್, ಸ್ಯಾನಿಟರಿ ಕಮಿಷನರ್, ಜಿಲ್ಲಾಧಿಕಾರಿ, ಹೀಗೆ ಅಧಿಕಾರಿಗಳಷ್ಟೇ ಅಲ್ಲ,
ಎಂ. ವೆಂಕಟಕೃಷ್ಣಯ್ಯ, ಲಿಂಗರಾಜೇ ಅರಸ್, ಮೀರ್ ಕಮಾಲುದ್ದೀನ್ ಅಲಿಖಾನ್, ಅನಂತರಾಜಯ್ಯ ಎಂಬ ಸಾರ್ವಜನಿಕ ಬದುಕಿನ ಗಣ್ಯವ್ಯಕ್ತಿಗಳನ್ನೂ ಸೇರಿಸಲಾಗಿತ್ತು. ಈ ಸಮಿತಿ ನೀಡಿದ ವರದಿಯ ಅನುಷ್ಠಾನಕ್ಕೂ ಮಹಾರಾಜರು ಮುಂದಾದರು. ಪರಿಣಾಮವಾಗಿ, ಒಳಚರಂಡಿ ವ್ಯವಸ್ಥೆ, ರಸ್ತೆಗಳ ವಿಸ್ತರಣೆ, ಸ್ವಚ್ಛ ಪರಿಸರ, ಇವುಗಳಿಂದ ಸಂಸ್ಥಾನ ಹೊಸ ರೂಪ ಪಡೆಯುವಂತಾಯಿತು. ಇದನ್ನು ಇಲ್ಲಿ ಜ್ಞಾಪಿಸಿಕೊಳ್ಳಲು ಕಾರಣ, ಈಗ್ಯೆ ಮೂರು ವರ್ಷಗಳ ಹಿಂದೆ ಕೊರೊನಾ ಬಂದಾಗ ಸರ್ಕಾರ ತೆಗೆದುಕೊಂಡ ಉಪಕ್ರಮಗಳ ಬಗ್ಗೆ ನಮ್ಮಲ್ಲಿ ಈಗಲೂ ಚರ್ಚೆ ನಡೆಯುತ್ತಿದೆ. ಅಷ್ಟೇ ಅಲ್ಲ, ಪರಿಣಾಮಕಾರಿಯಾಗಿ, ಪಾರದರ್ಶಕವಾಗಿ, ಪ್ರಾಮಾಣಿಕವಾಗಿ ಕ್ರಮಗಳನ್ನು ಕೈಗೊಳ್ಳಲಾಯಿತೇ ಎಂಬುದನ್ನು ವಿಚಾರಣೆ ಮಾಡಲು ಸರ್ಕಾರ ಆಯೋಗವೊಂದನ್ನು ನೇಮಿಸಿ ವರದಿ ಪಡೆದುಕೊಂಡಿದೆ. ಅಂದಿನ ಪ್ಲೇಗ್, ಇಂದಿನ ಕೊರೊನಾ; ಅಂದಿನ ನಾಲ್ವಡಿ, ಇಂದಿನ ನಾವು...? ಹೋಲಿಕೆ ಅನಗತ್ಯ.

ಜಾತಿಗಣತಿ, ಸಾಮಾಜಿಕ ನ್ಯಾಯದ ಬಗ್ಗೆ ಇನ್ನೂ ನಮ್ಮ ಗೊಂದಲ ಮುಗಿದಿಲ್ಲ. ಆದರೆ ಅಂದೇ ‘ಮಿಲ್ಲರ್ ಆಯೋಗ’ ರಚಿಸಿದ ನಾಲ್ವಡಿ ಅವರ ಸಾಮಾಜಿಕ ಕಳಕಳಿಗೆ ನಾವು ಯಾರೂ ಸಾಟಿಯಲ್ಲ! ಆದುದರಿಂದಲೇ ಕುವೆಂಪು ಅವರು ತಮ್ಮ ಕವನದಲ್ಲಿ ಪರಮಹಂಸ, ವಿವೇಕಾನಂದರು ಸಾರಿ ಹೇಳಿದ ‘ಸರ್ವಧರ್ಮ ಸಮನ್ವಯ’ ತತ್ವವನ್ನು ನಾಲ್ವಡಿಯವರು ಕಾರ್ಯದಲ್ಲಿ ತೋರಿಸಿದರೆಂದು ಹೇಳುತ್ತಾರೆ.

‘ಕನ್ನಡದ ಕಣ್ವ’ರೆಂದು ಕರೆಯಲ್ಪಡುವ ಬಿ.ಎಂ.ಶ್ರೀ ಅವರು ನಾಲ್ವಡಿಯವರ ಕಾಲದಲ್ಲಿ ಅರಮನೆಗೆ ನಿಕಟವರ್ತಿಯಾಗಿದ್ದವರು. ಅವರು ತಮ್ಮ ‘ಶ್ರೀ ಕೃಷ್ಣರಾಜ ರಜತ ಮಹೋತ್ಸವ ಪ್ರಗಾಥ’ ಕಾವ್ಯದಲ್ಲಿ ನಾಲ್ವಡಿ ಅವರ ವ್ಯಕ್ತಿತ್ವ ಮತ್ತು ಸಾಧನೆಗಳ ಚಿತ್ರಣವನ್ನು ನೀಡುತ್ತಾರೆ. ನಾಲ್ವಡಿ ಅವರನ್ನು ಕಾಯುವಂತೆ ‘ಬೆಟ್ಟದೊಡತಿ’ಯನ್ನು ಬೇಡಿಕೊಳ್ಳುತ್ತ, ‘ಹೊನ್ನುನಡೆಯ, ಹೊನ್ನನುಡಿಯ,
ಕನ್ನಡಿಗರ ವಯಿರಮುಡಿಯ, ಒಡೆಯ ಕೃಷ್ಣನ’ ಎನ್ನುತ್ತಾರೆ.

ಬಿ.ಎಂ.ಶ್ರೀ ಅವರೊಂದಿಗೆ ಕನ್ನಡಿಗರೆಲ್ಲ ದನಿಗೂಡಿಸಿ ಹೇಳಬಹುದು: ‘ಪುಣ್ಯದರಸು, ಧರ್ಮದಾಳು, ಕನ್ನಡಿಗರ ವಯಿರಮುಡಿ.’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.