ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿಯ ‘ನಡೆ’ ಬದಲಿಸುವ ಸಮಯ

ಕಲಿಕಾ ಮಾಧ್ಯಮ ಬದಲಿಸುವುದಲ್ಲ; ನುಡಿಗಳನ್ನು ಕಲಿಸುವ ಕ್ರಮ ಬದಲಿಸಬೇಕಿದೆ
Last Updated 25 ಜನವರಿ 2019, 4:00 IST
ಅಕ್ಷರ ಗಾತ್ರ

ಹೇಳಿದ್ದೇ ಹೇಳುವ ಕಿಸಬಾಯಿದಾಸ ಅಂತ ಒಮ್ಮೆ ಅನ್ನಿಸಿದರೆ, ಅವನ ಮಾತಿನ ಕಡೆಗೆ ಕಿವಿಗೊಡುವುದನ್ನೇ ನಿಲ್ಲಿಸುತ್ತೇವೆ. ಅವನು ಹೇಳುವ ರೀತಿಯನ್ನಾದರೂ ಬದಲಿಸಿಕೊಳ್ಳಲೇಬೇಕು. ನಾನು ಈಗ ಹೇಳ ಹೊರಡುತ್ತಿರುವ ಸಂಗತಿಗೆ ಪ್ರವೇಶಿಸುವ ಮೊದಲು, ನಮ್ಮೆಲ್ಲರ ದಿನನಿತ್ಯದ ಅನುಭವಗಳನ್ನು ಹೇಳಿ ಮುಂದಡಿಯಿಡುತ್ತೇನೆ.

ಇಂದಿನ ಮಕ್ಕಳು ಹುಟ್ಟುವಾಗಲೇ ಟಿ.ವಿ ಕಂಡವರು. ಆಗಾಗ ಚಾನೆಲ್ ಬದಲಾಗುತ್ತಾ ಇರುತ್ತದೆ. ಹಾಗೆಯೇ ಅವರು ನೋಡುತ್ತಿರುವ ಭಾಷೆಯೂ. ಕನ್ನಡದ ಮಕ್ಕಳಿಗಂತೂ ಡಬ್ಬಿಂಗ್ ಇಲ್ಲದ ಕಾರಣ ಹಲವು ಕಾರ್ಟೂನ್‍ಗಳು ಹಿಂದಿ ಅಥವಾ ಇಂಗ್ಲಿಷಿನಲ್ಲಷ್ಟೇ ಸಿಗುತ್ತವೆ. ಅವರು ಅದನ್ನೇ ನೋಡುತ್ತಾರೆ. ಹಿಂದಿಯನ್ನಂತೂ ನೋಡುತ್ತಾ, ಕೇಳುತ್ತಾ ಮಾತಾಡಲೂ ಕಲಿಯತೊಡಗುತ್ತಾರೆ. ಆರನೇ ಕ್ಲಾಸಿನ ನಂತರ ಹಿಂದಿ ಕಲಿತ ನಮ್ಮ ತಲೆಮಾರಿನವರು ಅವರಷ್ಟು ಸಲೀಸಾಗಿ ಮಾತನಾಡಲಾಗದೆ ಅವರನ್ನೇ ಅವಲಂಬಿಸುತ್ತೇವೆ. ಎಷ್ಟೋ ಬಾರಿ ಅವರನ್ನು ನೋಡಿ ಅಚ್ಚರಿಪಡುತ್ತೇವೆ.

ಬಹುಭಾಷಿಕರು ಬರುವ ಪ್ರವಾಸಿ ಸ್ಥಳದಲ್ಲಿ ಸಣ್ಣಪುಟ್ಟ ವಸ್ತುಗಳನ್ನು ಮಾರುವ ಚಿಕ್ಕವರು, ಕೆಲವೊಮ್ಮೆ ದೊಡ್ಡವರು ಆಯಾ ಭಾಷಿಕರಿಗೆ ತಕ್ಕಂತೆ ಭಾಷೆ ಬದಲಿಸುತ್ತಾರೆ. ಹೇಗೋ ಸಂವಹನ ಸಾಧಿಸುತ್ತಾರೆ. ಇವರಲ್ಲಿ ಕೆಲವರು ಶಾಲಾ ಮೆಟ್ಟಿಲನ್ನೂ ಹತ್ತಿರುವುದಿಲ್ಲ. ಕೆಲವೆಡೆ ಮಕ್ಕಳು ಫ್ರೆಂಚ್, ಜರ್ಮನ್ ಭಾಷೆಯನ್ನೂ ಮಾತಾಡುವುದಿದೆ. ಅದು ಹೇಗೆ ಇವರಿಗೆ ಮಾತಾಡಲು ಸಾಧ್ಯವಾಯಿತು? ಗಡಿ ಭಾಗದಲ್ಲಿ ನೆಲೆಸಿರುವವರು ಅದು ಹೇಗೆ ಸಲೀಸಾಗಿ ಎರಡೆರಡು ನುಡಿಗಳನ್ನು ಮಾತಾಡುತ್ತಾರೆ? ಈ ಅಂಶ ಯಾಕೆ ನಮ್ಮ ಕುತೂಹಲವನ್ನು ಕೆರಳಿಸಲಿಲ್ಲ ಅಥವಾ ನಾವ್ಯಾಕೆ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ? ನಿಜ, ಈ ಭಾಷೆಗಳನ್ನು ಅವರು ಮಾತಾಡುತ್ತಾರಾದರೂ ಓದಲು, ಬರೆಯಲು ಅವರಿಗೆ ಬರುತ್ತದೆ ಎನ್ನುವಂತಿಲ್ಲ. ಇರಲಿ.

ಹೀಗೆ ಕಿವಿ ಮೇಲೆ ಬಿದ್ದ, ಕಣ್ಣಿನ ಮೂಲಕ ನೋಡಿ, ಕೇಳಿದ ನುಡಿಗಳನ್ನು ಯಾವುದೇ ವ್ಯಾಕರಣದ ಪಾಠ ಇಲ್ಲದೆಯೇ ನಾವು ಕಲಿಯಬಹುದೆಂದಾಯಿತು. ಮುಂದೆ ಅಗತ್ಯ ಬಿದ್ದರೆ, ಆಸಕ್ತಿ ಇದ್ದರೆ ನಾವು ಇವುಗಳ ವ್ಯಾಕರಣ ವಿಶೇಷಗಳನ್ನು ಕಲಿಯಬಹುದು. ಹೀಗೆ ತಿಳಿಯಬೇಕಾದುದು ನುಡಿಯ ಕುರಿತು ವಿಶೇಷ ಅಧ್ಯಯನ ಮಾಡಬೇಕಾದವರು ಮತ್ತು ತಮ್ಮ ವೃತ್ತಿಯ ಭಾಗವಾಗಿ ನುಡಿಯೊಂದಿಗೆ ವ್ಯವಹರಿಸಬೇಕಾದವರು ಮಾತ್ರ. ಉಳಿದವರಿಗೆ ಅದು ಬದುಕೆಂಬ ಶರೀರದ ಒಂದು ಅಂಗ ಮಾತ್ರ. ಹೃದಯದ ಬಗೆಗೆ ವಿಶೇಷ ತಜ್ಞತೆ ಇಲ್ಲದೆಯೂ ಅದರೊಂದಿಗೆ ಬದುಕುವಂತೆ.

ನುಡಿ ನಮ್ಮ ಬದುಕಿನ ಅಂಗವಾಗುವಾಗ ನಮ್ಮ ನಮ್ಮ ಅವಶ್ಯಕತೆಗೆ ತಕ್ಕಂತೆ ನಾವು ಒಂದು ಅಥವಾ ಒಂದಕ್ಕಿಂತ ಹೆಚ್ಚು ನುಡಿಗಳನ್ನು ಕಲಿಯುತ್ತೇವೆ, ಬಳಸುತ್ತೇವೆ. ಈ ಅವಶ್ಯಕತೆಗಳನ್ನು ವ್ಯಾಖ್ಯಾನ ಮಾಡುವ ಕ್ರಮ ಬದಲಾದಂತೆ, ನುಡಿಗಳಲ್ಲಿ ಯಾವ ನುಡಿಗೆ ಹೆಚ್ಚು ಮಹತ್ವ ಕೊಡಬೇಕು ಎಂಬ ಚರ್ಚೆಗಳು ಮುನ್ನೆಲೆಗೆ ಬರತೊಡಗುತ್ತವೆ. ಹಾಗೆಯೇ ಅವುಗಳನ್ನು ಕಲಿಸುವ ಕ್ರಮ ಹೇಗಿರ
ಬೇಕು ಎಂಬುದೂ ವಾಗ್ವಾದದ ವಿಷಯವಾಗತೊಡಗುತ್ತದೆ. ವಾಗ್ವಾದ ಮುನ್ನೆಲೆಗೆ ಬಂದಾಗ ವೈಜ್ಞಾನಿಕತೆ ಹಿಂದೆ ಸರಿಯತೊಡಗುತ್ತದೆ. ಸದ್ಯದ ತುರ್ತು, ಪ್ರಯೋಜನಗಳನ್ನು ಕುರಿತ ಮಾತುಗಳು ಆಕರ್ಷಕವಾಗತೊಡಗುತ್ತವೆ.

ಕನ್ನಡದ ಬಗೆಗೆ ಮಾತಾಡುವವರೆಲ್ಲರೂ ಕೊನೆಗೊಂದು ಒಗ್ಗರಣೆಯಾಗಿ ‘ನಾವು ಇಂಗ್ಲಿಷನ್ನು ವಿರೋಧಿಸುತ್ತಿಲ್ಲ, ಇಂಗ್ಲಿಷ್ ಅನಿವಾರ್ಯ, ಆದರೆ ಕನ್ನಡ ಮೊದಲು’ ಅನ್ನುವುದು ನಮ್ಮೆಲ್ಲರ ಗಮನಕ್ಕೆ ಬಂದಿರುವ ಸಂಗತಿ. ಹಾಗೆ ಹೇಳುವುದಕ್ಕೆ ಮುಖ್ಯ ಕಾರಣ, ಇಂದು ಉದ್ಯೋಗಕ್ಕೆ ಇಂಗ್ಲಿಷ್‍ ಅನ್ನು ಅನಿವಾರ್ಯವಾಗಿಸಿರುವುದೇ ಆಗಿದೆ. ಹೀಗಾಗಿ ನಾವಿಂದು ಕನಿಷ್ಠ ದ್ವಿಭಾಷಿಕರಾಗಿ ಪರಿವರ್ತನೆಗೊಂಡಿದ್ದೇವೆ.

ಒಂದೆಡೆ ಕನ್ನಡವನ್ನು ಬಲಿಗೊಡುತ್ತಾ, ಇನ್ನೊಂದೆಡೆ ಇಂಗ್ಲಿಷನ್ನೂ ಸರಿಯಾಗಿ ಕಲಿಸಲಾಗದೆ ಒದ್ದಾಡುತ್ತಿರುವ ಈ ಸನ್ನಿವೇಶದಲ್ಲಿ ಇದಕ್ಕೆ ಪರಿಹಾರವೇ ಇಲ್ಲವೇ? ಖಂಡಿತಾ ಪರಿಹಾರ ಇರಲೇಬೇಕು. ಮೊತ್ತ ಮೊದಲನೆಯದಾಗಿ, ನಾವು ನುಡಿಗಳನ್ನು ಮಕ್ಕಳಿಗೆ ಕಲಿಸುವ ಕ್ರಮವನ್ನೇ ಬದಲಿಸಿಕೊಳ್ಳಬೇಕು. ಮಾಧ್ಯಮವನ್ನು ಬದಲಿಸುವುದು ಇದಕ್ಕೆ ಪರಿಹಾರ ಅಲ್ಲವೇ ಅಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ.

‘ಭಾಷಾ ಶಾಸ್ತ್ರದ ನ್ಯೂಟನ್’ ಎಂದೇ ಹೆಸರಾದ ನೋಮ್ ಚಾಮ್‍ಸ್ಕಿಯ ಸಂಶೋಧನೆಗಳು ಇದಕ್ಕೆ ಮಹತ್ತರ ಕೊಡುಗೆ ಕೊಟ್ಟಿವೆ. ಚಾಮ್‍ಸ್ಕಿ ಪ್ರಕಾರ, ನುಡಿಯ ಸಾಮರ್ಥ್ಯವೆಂಬುದು ನಮ್ಮ ಮಿದುಳಿನಲ್ಲಿ ಅಂತರ್ಗತವಾಗಿರುತ್ತದೆ. ಇದನ್ನವರು ಯೂನಿವರ್ಸಲ್ ಗ್ರಾಮರ್‌– UG ಎನ್ನುತ್ತಾರೆ. ಇದು ನಮ್ಮ ಕಿವಿಯ ಮೇಲೆ ಬೀಳುವ ಭಾಷೆಯೊಳಗಣ ವ್ಯತ್ಯಾಸಗಳನ್ನು ಗ್ರಹಿಸಿ, ನಾವದನ್ನು ಮಾತಾಗಿ ಮಾರ್ಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಜಗತ್ತಿನಾದ್ಯಂತ ಇದುವರೆಗೂ ಸಿಕ್ಕಿರುವ ಮತ್ತು ಭಾಷಾಶಾಸ್ತ್ರಜ್ಞರ ಗಮನಕ್ಕೆ ಬಂದಿರುವ ಭಾಷೆಗಳಲ್ಲಿ ವಾಕ್ಯಗಳು ಆರು ವಿಧಗಳಲ್ಲಿ ಮಾತ್ರ ರೂಪುಗೊಳ್ಳುತ್ತವೆ. Subject (S), Object (O), Verb (V)ಗಳು– SVO, SOV, OVS, OSV, VOS, VSO. ಇದರಲ್ಲಿ ಯಾವುದೋ ಒಂದೆರಡು ಕಿವಿಯ ಮೇಲೆ ಬಿದ್ದರೂ ಅವನ್ನು UG ಮೂಲಕ ಮಗು ಗ್ರಹಿಸುತ್ತದೆ. ನುಡಿಗಳಿಕೆ ಮಾಡಿಕೊಳ್ಳುತ್ತದೆ. ಈ ಹಂತದಲ್ಲಿ ಮಗುವಿಗೆ ನೆರವಾಗಲು ಮಿದುಳಿನಲ್ಲಿ ಇನ್ನೊಂದು ವ್ಯವಸ್ಥೆ ಇದೆ. ಅದು ಲ್ಯಾಂಗ್ವೇಜ್ ಅಕ್ವೈರ್ ಡಿವೈಸ್ (LAD- ಭಾಷಾ ಗಳಿಕೆಯ ಸಾಧನ). ಮಗುವಿಗೆ ಹತ್ತರಿಂದ ಹನ್ನೆರಡು ವರ್ಷಗಳಾಗುವ ತನಕ ಇದು ಚಲಾವಣೆಯಲ್ಲಿರುತ್ತದೆ. ಹೀಗಾಗಿ ಈ ವಯಸ್ಸಿನೊಳಗಡೆ ಭಾಷೆ ಕಲಿಕೆಗೆ ವ್ಯಾಕರಣದ ಅವಶ್ಯಕತೆಯಿಲ್ಲ. ಆದರೆ ಆನಂತರ ಹೊಸ ಭಾಷೆ ಕಲಿಯಬೇಕೆಂದರೆ ವ್ಯಾಕರಣದ ಮೂಲಕವೇ ಕಲಿಯಬೇಕು. ಇವರು ಹೇಳುತ್ತಿರುವ ಥಿಯರಿಯ ಒಂದು ಎಳೆಯನ್ನು ಇಲ್ಲಿ ಹೇಳುತ್ತಿರುವಂತೆಯೇ, ಈ ಮೊದಲು ಕೊಟ್ಟಿರುವ ಉದಾಹರಣೆ ನಮ್ಮ ಅನುಭವದಲ್ಲೇ ಇರುವುದರಿಂದ, ನಾವೀಗ ಇರುವ ಪರಿಸ್ಥಿತಿಯಲ್ಲಿ ಈ ಚಿಂತನೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.

ಹೀಗಾಗಿ, ನಾವು ನಮ್ಮ ಪ್ರಾಥಮಿಕ ಶಿಕ್ಷಣದ ಮೊದಲ ನಾಲ್ಕು ವರ್ಷಗಳನ್ನು ಭಾಷೆ ಮತ್ತು ಸರಳ ಗಣಿತದ ಕಲಿಕೆಗೆ ಮೀಸಲಿಡಬೇಕು. ಭಾಷೆಯ ಕಲಿಕೆ ಜೊತೆಗೆ ಇತರ ವಿಷಯಗಳು ಇರಬೇಕೇ ಹೊರತು ಇತರ ವಿಷಯಗಳ ಜೊತೆಗೆ ಭಾಷೆಯಲ್ಲ. ಆಧುನಿಕ ತಂತ್ರಜ್ಞಾನದ ಸಮರ್ಥ ಬಳಕೆ ಮಾಡಬೇಕು. ವಿಡಿಯೊ ಮತ್ತು ಆಡಿಯೊಗಳನ್ನು ಹೆಚ್ಚು ಬಳಸಬೇಕು. ಅಲ್ಲೂ ಒಣ ನೀತಿ ಪಾಠಗಳಲ್ಲ.

ಅವು ಕಾರ್ಟೂನ್, ಅನಿಮೇಷನ್‍ನಲ್ಲಿ ಹಾಡು, ಕತೆಗಳಲ್ಲಿರಬೇಕು. ಹಿಂದೆ ಬರುತ್ತಿದ್ದ ಚಿತ್ರಕಥಾ ಕೋಶದ ಮಾದರಿಯಲ್ಲಿ ಭಾಷಾ ಪಠ್ಯಪುಸ್ತಕಗಳಿರಬೇಕು. ಮಕ್ಕಳು ಮಾತಿನ ಮೂಲಕ ಅವುಗಳನ್ನು ವಿವರಿಸುವಂತೆ, ಅವರ ಕಲ್ಪನೆಗಳನ್ನು ವಿಸ್ತರಿಸಿದಷ್ಟೂ ಅವರನ್ನು ಹುರಿದುಂಬಿಸುವಂತೆ ಪ್ರೇರಿಸಬೇಕು. ದಿನದಲ್ಲಿ ಕೆಲವು ಗಂಟೆಗಳನ್ನು ಸಂಪೂರ್ಣ ಆಡುಕನ್ನಡಕ್ಕೂ ಇನ್ನು ಕೆಲವು ಗಂಟೆಗಳನ್ನು ಸಂಪೂರ್ಣ ಸರಳ ಇಂಗ್ಲಿಷಿಗೂ ಮೀಸಲಿಟ್ಟು ಅವರೇ ಮಾತಾಡಲು ಬಿಡಬೇಕು.

ಲಿಖಿತ ಪರೀಕ್ಷೆಗಳನ್ನು ಆ ಮಕ್ಕಳು ಇಚ್ಛೆಪಟ್ಟ ಮಾಧ್ಯಮದಲ್ಲಿ ಬರೆಯಲು ಬಿಡಬೇಕು. ಇದು ಸರ್ಕಾರಿ ಶಾಲೆಗಳಲ್ಲಿ ಯಶಸ್ವಿಯಾದರೆ ಖಾಸಗಿಯವರೂ ಅನುಸರಿಸುತ್ತಾರೆ. ಎಲ್ಲ ಸೌಲಭ್ಯ ಇರುವ ಖಾಸಗಿ ಪದವಿ ಕಾಲೇಜುಗಳನ್ನು ಬಿಟ್ಟು, ಸೌಲಭ್ಯ ಕಡಿಮೆ ಇರುವ ಸರ್ಕಾರಿ ಕಾಲೇಜುಗಳನ್ನೇ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುತ್ತಿರುವುದನ್ನು ಗಮನಿಸಿ.

ಇದರೊಂದಿಗೆ, ಆಯಾ ಶಾಲೆಗಳಿಗೆ ಅವರವರೇ ಸಮವಸ್ತ್ರದ ಬಣ್ಣ ಆರಿಸಿಕೊಳ್ಳಲು ಬಿಡಬೇಕೇ ಹೊರತು ಸರ್ಕಾರೀ ಬಣ್ಣದ ಹೇರಿಕೆಯಿರಬಾರದು. ಸರ್ಕಾರಿ ಶಾಲೆಯೂ, ಕನ್ನಡವೂ ಉಳಿದೇ ಉಳಿಯುತ್ತದೆ.

ಲೇಖಕಿ: ಕನ್ನಡ ಪ್ರಾಧ್ಯಾಪಕಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತರೀಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT