ಮಂಗಳವಾರ, ಅಕ್ಟೋಬರ್ 20, 2020
22 °C

ಕೆಂಗಲ್ ಬಂದಿದ್ರು!

ಲಿಂಗರಾಜು ಡಿ.ಎಸ್. Updated:

ಅಕ್ಷರ ಗಾತ್ರ : | |

ಸುದಾನವಿಧದಲ್ಲಿ ಯವಾರವೊಂದನ್ನು ಮುಗಿಸಿಕೊಂಡು ಆಚೆ ಬಂದಾಗ ನಡುರಾತ್ರಿ. ‘ಲೇ ಬಡ್ಡೆತ್ತುದೆ ಬಾರ್‍ಲಾ ಇಲ್ಲಿ’ ಅಂತ ಯಾರೋ ಕರೆದರು. ತಿರುಗಿ ನೋಡಿದರೆ ಕೆಂಗಲ್ ಹನುಮಂತಯ್ಯನವರು ಮುಂದೆ ನಿಂತವರೆ. ‘ಸಾ ಅಡ್ಡ ಬಿದ್ದೆ. ಯಂಗಿದಿರಾ ತಂದೆ?’ ಅಂದೆ.

‘ನಾನು ಆರಾಮಾಗಿದೀನಿ ಕಣೋ. ಏನ್ಲಾ ಯವಾರ ನಿಂದು. ಕಾಮನ್ಸೆನ್ಸದ ನಿನಗೆ. ಕ್ಷಮಿಸಬಾರದ ತಪ್ಪು ಅದು. ನೀನು ಮನುಷ್ಯ ಜಾತಿ ಅಲ್ಲ’ ಅಂದ್ರು.

‘ಸಾ ಸುಮ್ಮನಿರಿ. ಕಾಮನ್ ಸೆನ್ಸು, ಕ್ಷಮೆ, ಜಾತಿ ಅನ್ನಬ್ಯಾಡಿ. ಅಪಾರ್ಥ, ಡಬಲ್ ಮೀನಿಂಗ್ ಆಯ್ತದೆ. ಈಗ ಯವಾರಕ್ಕೆ ಸುದಾನವಿಧವೇ ಸೇಫು ಸಾ’ ಅಂದೆ.

‘ನಮ್ಮ ರಾಜಕಾರಣಿಗಳೆಲ್ಲಾ ಹೆಂಗವರೆ?’ ಅಂದ್ರು ಕೆಂಗಲ್.

‘ಸಾ ಈಗ ಕರ್ನಾಟಕದ ರಾಜಕಾರಣಿಗಳಿಗೆ ಭಾರಿ ಬೆಲೆ ಅದೆ! ಹಿಂಗಿಂಗೆ ಈತರಕೀತರಾ... ನೀವೇನಂತೀರಾ?’ ಅಂದೆ. ಕೆಂಗಲ್ಲು ಜೋರಾಗಿ ಕ್ಯಾಕರಿಸಿದರು.

‘ಹ್ಞೂಂ ಕಣಪ್ಪಾ ನಿಮ್ಮಂತಾ ಮಾನಗೆಟ್ಟೋರಿಗೆ ಅಭಿನಂದನೆ ಸಲ್ಲಿಸಬೇಕು’ ಅಂದ್ರು. ‘ಸಾ ಅಭಿನಂದನೆ ಅನ್ನಬ್ಯಾಡಿ ನೀತಿ ಸಂಹಿತೆ ಅಡ್ಡ ಬತ್ತದೆ’ ಅಂದೆ.

‘ಲೋಕಸಭೆಗೆ ಮಂಡೇದಲ್ಲಿ ಕ್ಯಾಂಡಿಡೇಟು ಯಾರ್‍ಲಾ?’ ಅಂದ್ರು. ‘ಸಾ ಮೈತ್ರಿಗೆ ವಿರುದ್ಧ ಮಾತಾಡಂಗಿಲ್ಲ. ಮರಾಮತ್ ಇಲಾಖೆ ಮಂತ್ರಿಗಳು ಶಾಪ ಕೊಡ್ತರೆ’ ಅಂತಂದೆ.

‘ನೋಡ್ಲಾ ಸುದಾನವಿಧ ಕಟ್ದೋರು ಕೈದಿಗಳು ಕಣೋ. ನಿಷ್ಠೆಯಿಂದ ಶ್ರಮದಾನ ಮಾಡಿ ಪಾಪ ಕಳಕಂಡು ನೆಮ್ಮದಿಯಾಗಿ ಸತ್ತೋದ್ರು’ ಅಂತ ವ್ಯಥೆಪಟ್ಟರು ಕೆಂಗಲ್. ನಾನು ತಲೆಕೆರಕಂಡು ಸುಮ್ಮನಾದೆ.

‘ಓಹೋ ಗೊತ್ತಾಯ್ತು ಬುಡ್ಲಾ. ಸುದಾನವಿಧ ಕಟ್ಟಿದ ಮೇಲೆ ಕೈದಿಗಳ ಪಾಪಗಳೆಲ್ಲಾ ಬುಟ್ಟೋಗಿ ಮರಕ್ಕೆ ನ್ಯಾತಾಕಿಕೊಂಡಿದ್ದೊ. ಈಗ ಅವೆಲ್ಲಾ ವಾಪಾಸ್ ಬಂದು ಸುದಾನವಿಧದೊಳಕ್ಕೆ ಬಂದೋರನ್ನೆಲ್ಲಾ ಅಮಿಕ್ಕಂತಾವೆ!’ ಅಂದ್ರು.

ನನಗೆ ಪರಮ ಸತ್ಯದ ದರ್ಶನವಾಗಿ, ಬೆನ್ನ ಮೇಲೆ ಯಾರೋ ಕೂತು ಗುಮ್ಮತಾ ಇದ್ದಂಗೆ ಅನ್ನಿಸಿತು. ಕೆಂಗಲ್ಲು ತಲೆ ಚಚ್ಚಿಕೊಂಡು ಹೋಯ್ತಾ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.