ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನದಾಳದ ಮಾತು

Last Updated 7 ಮೇ 2019, 20:15 IST
ಅಕ್ಷರ ಗಾತ್ರ

‘ಹಾಯ್ ಹಲೋ ನಮಸ್ಕಾರ ಈವತ್ತಿನ ವೀಕ್-ಎಂಡ್ ವಿತ್ ರೂಪೇಶ್ ಕಾರ್ಯಕ್ರಮಕ್ಕೆ ನಿಮ್ಮೆಲ್ಲರಿಗೂ ಪ್ರೀತಿಯ ಸ್ವಾಗತ. ನಮ್ಮ ಈವತ್ತಿನ ಅತಿಥಿ ಪರ್ಮನೆಂಟ್ ಮಂತ್ರಿಗಳಾದ ದೇಶಭಕ್ತ ಅರ್ಥಾತ್ ದೇಭ!’ ದೇಭ ಬಂದು ಕರೀ ಕುರ್ಚಿಯ ಮೇಲೆ ಕೂತರು.

‘ನಿಮಗೆ ಮೊದಲನೇ ಪ್ರಶ್ನೆ ದೇಭರೇ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದ್ರೂ ನಿಮ್ಮನ್ನ ಮಂತ್ರಿ ಮಾಡ್ತಾರೆ. ಅದು ಹೇಗೆ?’

‘ನೋಡಿ ರೂಪೇಶ್, ಜೇಬುಗಳ್ಳನಿಗೆ ಯಾವುದು ಎಲ್ಲಿದೆ ಅಂತ ಗೊತ್ತಿರತ್ತೆ. ಅವರೆಲ್ಲರ ಸೀಕ್ರೇಟು ನನಗೆ ಗೊತ್ತಿದೆಯಲ್ಲಾ’ ಅಂದ್ರು ದೇಭ.

‘ಸರಿ ಸಾರ್, ನಿಮ್ಮ ಆಸ್ತಿ ವರ್ಷವರ್ಷಕ್ಕೂ ನೂರು-ಇನ್ನೂರು ಪಟ್ಟು ಜಾಸ್ತಿಯಾಗೋ ರಹಸ್ಯ ಏನು?’ ಕೇಳಿದ್ರು ರೂಪೇಶ್.

‘ನೋ ಕಾಮೆಂಟ್ಸ್ ರೂಪೇಶ್. ನಾನು ಈವತ್ತು ರಸ್ತೆ, ನೀರು, ಕರಂಟು ಇಲ್ಲದೇ ಬದುಕೋದನ್ನು ಜನಕ್ಕೆ ಕಲಿಸಿದ್ದೀನಿ! ಈವತ್ತು ರೈತರು ಬೇಸಾಯ ಬಿಟ್ಟು ಸಿಟೀಲಿ ನೆಮ್ಮದಿಯಾಗಿ ಬದುಕ್ತಿದಾರೆ’. ದೇಭರ ಉತ್ತರಕ್ಕೆ ಭಾರಿ ಚಪ್ಪಾಳೆ ಬಿತ್ತು.

‘ದೇಭರೇ ನಿಮ್ಮ ಮಗ, ಸೊಸೆ, ಹೆಂಡತಿ, ತಮ್ಮ, ಅಣ್ಣನಿಗೆ ಎಂಎಲ್‍ಎ ಮಾಡಿದ್ದೀರಿ. ಯಾಕೆ ನಿಮ್ಮ ಪಕ್ಷದಲ್ಲಿ ಕಾರ್ಯಕರ್ತರಿಲ್ಲವಾ?’ ರೂಪೇಶ್ ಪ್ರಶ್ನೆಗೆ ದೇಭ ಗಂಭೀರವಾದರು.

‘ಮಾಧ್ಯಮ ನನ್ನನ್ನ ತಪ್ಪು ತಿಳಕೊಂಡಿರೋದೆ ಇಲ್ಲಿ! ಕಾರ್ಯಕರ್ತರು, ಜನ ರಾಜಕೀಯಕ್ಕೆ ಬಂದು ಕಷ್ಟಪಡೋದು ಬೇಡಾ ಸಾರ್. ಅದೆಲ್ಲಾ ಅವಮಾನ, ನೋವು ನಮ್ಮ ಕುಟುಂಬಕ್ಕೇ ಇರಲಿ’ ಅಂತ ಬಿಕ್ಕಿದರು ದೇಭ.

‘ಸರಿ ದೇಭರೇ, ಕೊನೆಯದಾಗಿ ಜನಕ್ಕೆ ಏನು ಸಂದೇಶ ಕೊಡ್ತೀರಿ?’ ಅಂತ ರೂಪೇಶ್ ಕೇಳಿದಾಗ ದೇಭರು ಅಂದ್ರು ‘ಅಭಿವೃದ್ಧಿನೇ ನಮ್ಮ ಗುರಿ! ಜನ ಕಾರಿಲ್ಲದಿದ್ರೂ ಕಾಲಲ್ಲಿ ನಡಕಂಡೋಗಲಿ ಅಂತ ಎಲಿವೇಟೆಡ್ ಕಾರಿಡಾರ್, ವೈಟ್ ಟಾಪಿಂಗ್ ಮಾಡಿಸಿದ್ದೀನಿ. ಭಾಗ್ಯಗಳ್ನ ಕೊಟ್ಟಿದೀನಿ, ವರ್ಷಕ್ಕೆ ದುಡ್ಡು ಕೊಡ್ತೀನಿ ಅಂತ ಹೇಳಿದೀನಿ! ಸಾಲ ಮನ್ನಾ ಅಂತ ಹೇಳಿದೀನಿ. ಇದನ್ನೆಲ್ಲಾ ನಂಬೋದು ನಿಮ್ಮ ಧರ್ಮ’ ಅಂತ ಮೇಲೆದ್ರು ದೇಭ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT