ಗುರುವಾರ , ಜೂನ್ 17, 2021
22 °C

ಚಿಂತಾಕ್ರಾಂತ ಅಗ್ರಜ

ಪ್ರೊ. ಎಸ್.ಬಿ.ರಂಗನಾಥ್ Updated:

ಅಕ್ಷರ ಗಾತ್ರ : | |

Prajavani

ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರ ಚಿಂತಾಕ್ರಾಂತನಾಗಿದ್ದ. ಲಕ್ಷ್ಮಣ ಕಾರಣ ಕೇಳಿದ.

‘ಸೋದರ, ಕಲಿಯುಗದ ಮನುಷ್ಯರು ನನ್ನ ಹೆಸರಿನಲ್ಲಿ ಇಷ್ಟೊಂದು ಕಿತ್ತಾಡೋದನ್ನು ನೋಡಿ ನನಗೆ ಅತೀವ ದುಃಖ ಆಗುತ್ತಿದೆ. ನನ್ನ ಜನ್ಮಭೂಮಿ ವಿವಾದ ಕೊನೆಕೊಳ್ಳುವುದು ಯಾವಾಗ’ ಎಂದ ಶ್ರೀರಾಮ.

ಲಕ್ಷ್ಮಣ ಸಮಾಧಾನಪಡಿಸಿದ- ‘ಅಗ್ರಜ, ಈಗ ಸುಪ್ರೀಂ ಕೋರ್ಟ್ ಪ್ರತಿನಿತ್ಯ ವಿಚಾರಣೆ ನಡೆಸ್ತಿದೆ. ಶೀಘ್ರವಾಗಿ ತೀರ್ಪು ಹೊರಬರಬಹುದು’.

‘ನನ್ನ ಹೆಸರಿನ ವಿಪರೀತ ದುರ್ಬಳಕೆ ಆಗ್ತಿದೆ, ನನಗೆ ಜಯಕಾರ ಹಾಕೋದಕ್ಕೆ ಒಬ್ಬ ಮಹಿಳಾ ಮುಖ್ಯಮಂತ್ರಿ ಅಡ್ಡಿಪಡಿಸ್ತಿದಾರೆ!’

‘ಸಹೋದರ, ಅವರ ನಂಬಿಕಸ್ತರೆಲ್ಲಾ ಶತ್ರುಪಾಳೆಯ ಸೇರ್ತಿರೋದ್ರಿಂದ ಅವರು ಹತಾಶರಾಗಿ ಹಾಗೆ ಮಾಡ್ತಿರೋದನ್ನು ಕ್ಷಮಿಸಿಬಿಡು’.

‘ರಾಜಸ್ಥಾನದ ರಾಜಸಮಂಡ್ ಸಂಸದೆ ದಿಯಾ ಕುಮಾರಿ ತಾನು ನಮ್ಮ ರಘುವಂಶಕ್ಕೆ ಸೇರಿದವರೂಂತ ಹೇಳ್ತಿದಾರಂತೆ. ಇದಕ್ಕೇನಂತೀಯಾ?’

‘ಅಣ್ಣಾ ಅಷ್ಟೇ ಅಲ್ಲ, ಜಯಪುರದ ಅರವಿಂದ್ ಸಿಂಗ್ ಮೇವಾಡ್ ಎನ್ನುವವರೂ ನಮ್ಮ ವಂಶ ಸಂಜಾತರೂಂತ ಹೇಳಿಕೊಳ್ತಿದಾರೆ!’

‘ಲಕ್ಷ್ಮಣಾ, ವಿಶೇಷವೆಂದರೆ, ನನ್ನ ಭಕ್ತ ಆಂಜನೇಯನ ಶಿಷ್ಯನೊಬ್ಬ ಹುಟ್ಟಿಕೊಂಡಿದಾನೆ. ಅವನು ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ಮರದ ಮೇಲಿದಾನಂತೆ. ನಿನ್ನ ಅತ್ತಿಗೆಯನ್ನು ರಾವಣನಿಂದ ರಕ್ಷಿಸಲು ಹೋರಾಡಿದ ಜಟಾಯು ಹೆಸರಿನಲ್ಲಿ ಹೈದರಾಬಾದ್ ಬಳಿಯ ಬಾಲಾಜಿ ದೇವಸ್ಥಾನದಲ್ಲಿ ಸ್ತ್ರೀರಕ್ಷಕ ಪಡೆ ಸ್ಥಾಪಿಸಿದಾರಂತೆ! ಅಯೋಧ್ಯೇಲಿ ರಾಮಮಂದಿರ ನಿರ್ಮಾಣಕ್ಕೆ ಚಿನ್ನದ ಇಟ್ಟಿಗೆ ದಾನ ಕೊಡುವುದಾಗಿ ಬಾಬರ್ ವಂಶಸ್ಥರೊಬ್ಬರು ಹೇಳಿದಾರಂತೆ! ಬಬ್ಲುಖಾನ್ ಎಂಬುವರು 25 ಮುಸ್ಲಿಂ ಯುವಕರೊಡನೆ ಮಂದಿರ ಕಟ್ಟುವ ಕಲ್ಲುಗಳನ್ನು ಶುಚಿಗೊಳಿಸ್ತಿದಾರಂತೆ! ಇಂಥ ಕೆಲಸಗಳನ್ನು ಸ್ವಾಗತಿಸೋಣ. ಆದ್ರೆ ನಮ್ಮ ವಂಶಸ್ಥರೆಂದು ಹೇಳಿಕೊಳ್ತಿರೋರಿಗೆ ಏನು ಮಾಡೋದು?’

‘ನಮ್ಮ ರಘುವಂಶಕ್ಕೆ ಸೇರಿದವರೂಂತ ಯಾರೂ ನಿಮ್ಮ ಅನುಮತಿ ಇಲ್ಲದೆ ಹೇಳಿಕೊಳ್ಳದಂತೆ ಪ್ರತಿಬಂಧಕಾಜ್ಞೆ ನೀಡಲು ಸುಪ್ರೀಂ ಕೋರ್ಟ್‌ಗೆ ಇಂಪ್ಲೀಡ್ ಅರ್ಜಿ ಸಲ್ಲಿಸೋಣ! ಹೇಗಿದ್ರೂ ಅದು ನಿಮ್ಮ ಜನ್ಮಭೂಮಿ ವಿವಾದದ ವಿಚಾರಣೆ ನಡೆಸ್ತಿದೆಯಲ್ಲ!’

ಶ್ರೀರಾಮಚಂದ್ರ ‘ತಥಾಸ್ತು’ ಎಂದ!

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.