ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಭಗೀರಥನ ಚಿಂತೆ

Last Updated 17 ಮೇ 2021, 19:30 IST
ಅಕ್ಷರ ಗಾತ್ರ

‘ನನ್ನ ಪಾಡಿಗೆ ನಾನಿದ್ದೆ, ನಿನ್ನ ವಂಶಸ್ಥರಿಗೆ ಮೋಕ್ಷ ದೊರೆಯಲೆಂದು ಭರತಭೂಮಿಗೆ ಕರಕೊಂಡು ಹೋದೆ. ನೀನಿಲ್ಲಿ ಸ್ವರ್ಗದಲ್ಲಿ ಆರಾಮಾಗಿದ್ದಿ. ಅಲ್ಲಿ ನನ್ನ ದಂಡೆ ಮ್ಯಾಗಿರೋ ಸಾವಿರಾರು ಫ್ಯಾಕ್ಟರಿಗಳು, ನಗರಗಳು, ಹಳ್ಳಿಗಳ ಕಸಕಡ್ಡಿ, ಕಾರ್ಖಾನೆ ತ್ಯಾಜ್ಯ ಸುರಿದು ನನ್ನ ಅವಸ್ಥೆ ನೋಡು’ ಭಗೀರಥನಿಗೆ ಗಂಗೆ ಫೋನಿನಲ್ಲಿ ವರಾತ ಹಚ್ಚಿದ್ದಳು.

‘ಪ್ರಧಾನಿಗಳೇ ಗಂಗಾಮಾ ಅಂತ ನಿನ್ನ ಬಾಯ್ತುಂಬ ಕರದು, ನಮಾಮಿ ಗಂಗೆ ಯೋಜನೆಗೆ ಒಂಬತ್ತು ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿ, ಅಗದಿ ಭಯಂಕರ ಸ್ವಚ್ಛ ಮಾಡ್ಯಾರೆ. ಇನ್ನಾ ಏನ್ ಬೇಕು ನಿನಗ’ ಎಂದು ಭಗೀರಥ ಬುದ್ಧಿ ಹೇಳಿದ.

‘ಹೆಣ ಸುಡಾಕೆ ಕಟ್ಟಿಗೆಗೆ ರೊಕ್ಕ ಇಲ್ಲ ಅಂತ್ಹೇಳಿ ಮಂದಿ ಅದನ್ನೂ ಆವಾಗೀವಾಗ ನನ್ನ ಒಡಲಿಗೆ ಬಿಸಾಕತಿದ್ರು. ಬಡಮಂದಿ ಅಂತ ಸುಮ್ಮನಿರತಿದ್ದೆ. ನಮಾಮಿ ಗಂಗೆ ಪ್ರಾಜೆಕ್ಟಿನಾಗೆ ಬಡವರ ಹೆಣ ಸುಡಾಕೂ ವ್ಯವಸ್ಥೆ ಮಾಡಬೇಕಿತ್ತು...’

‘ಬರೀ ಎಡಗಣ್ಣಿಗೆ ಕಂಡಿದ್ದೇ ಖರೇ ಅಲ್ಲಬೇ... ಬಲಗಣ್ಣಿಂದ ನೋಡು. ಎಪ್ಪತ್ತನಾಕು ದೇಶಗಳಲ್ಲಿ ಎಪ್ಪತ್ತನಾಕು ಪ್ರಧಾನಿಗಳಿದ್ದರೂ ಹತ್ತೊಂಬತ್ತು ಲಕ್ಷ ಜನ ಸತ್ತಾರೆ. ನಮ್ಮಲ್ಲಿ ಒಬ್ಬರೇ ಪ್ರಧಾನಿ ಕೊರೊನಾ ಸಾವನ್ನು ಎರಡೂ
ವರೆ ಲಕ್ಷಕ್ಕೆ ನಿಲ್ಲಿಸ್ಯಾರೆ...’ ಭಗೀರಥನ ವಿವರಣೆ.

‘ಕೊರೊನಾದಿಂದ ಸತ್ತ ನೂರಾರು ಹೆಣಗಳನ್ನೂ ನನ್ನ ಒಡಲಿಗೆ ಎಸದಾರ. ಯಾವ ಕಣ್ಣಿಂದ ನೋಡಿದರೂ ಅಷ್ಟೇ. ನಾ ಕೊಳೆತು ನಾರಾಕಹತ್ತೀನಿ’.

‘ಇಲಿ ಹೋದ್ರೆ ಹುಲಿ ಹೋತು ಅನ್ನಾಕಿ ನೀ. ತಡಿ, ವಿಚಾರಿಸತೀನಿ’ ಎಂದು ಬಿಹಾರ, ಉತ್ತರ
ಪ್ರದೇಶದ ಮುಖ್ಯಮಂತ್ರಿಗಳನ್ನು ಕಾನ್ಫರೆನ್ಸ್ ಕಾಲ್‌ಗೆ ಸೇರಿಸಿಕೊಂಡ. ‘ಅವೆಲ್ಲ ಮ್ಯಾಗಿಂದ ಕೆಳಗೆ ಬಂದಾವು, ಯೋಗಣ್ಣನ ರಾಜ್ಯದವು’ ನಿತೀಶಣ್ಣನ ವಾದಕ್ಕೆ ಯೋಗಿವರ್ಯರು ‘ಅವು ನಮ್ಮವಲ್ಲ. ಪ್ರವಾಹ ಜಾಸ್ತಿಯಾಗಿ ಕೆಳಗಿಂದ ಮ್ಯಾಗೆ ತೇಲಿಕೋತ ನಮ್ಮಕಡಿಗೂ ಬಂದಾವು’ ಎಂದು ವಾದಿಸತೊಡಗಿದರು.

ಈ ವಿತಂಡವಾದಗಳ ನಡುವೆ, ಕೊರೊನಾ ಮೋಕ್ಷಕ್ಕೆ ಭಗೀರಥ ಪ್ರಯತ್ನ ಮಾಡುವವರು ಯಾರಪ್ಪ ಎಂದುಕೊಳ್ಳುತ್ತ ಭಗೀರಥ ಮೆತ್ತಗೆ ಫೋನಿಟ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT