ಚುರುಮುರಿ: ಒಳ್ಳೇರಿಗೆ ಕಾಲವಿಲ್ಲ

‘ಅಪರಾಧಿಗಳೇ ಇವತ್ತು ಹಣಬಲ, ರಾಜಕೀಯ ಬಲ, ತೋಳ್ಬಲ ತೋರಿಸಿಗ್ಯಂಡು ಜೀವನದಲ್ಲಿ ಮ್ಯಾಲಮ್ಯಾಲಕ್ಕೋಯ್ತಾವರೆ. ಒಳ್ಳೇರಿಗೆ ಕಾಲ ಇಲ್ಲ ಕನಪ್ಪಾ’ ಯಂಟಪ್ಪಣ್ಣ ನೋವು ತೋಡಿ ಕೊಂಡಿತು.
‘ದಿಟ ಕನಣೈ, ಒಳ್ಳೇರಾದಷ್ಟೂ ಮುಳ್ಳು ಮುರಿಯರು ಜಾಸ್ತಿ. ಸತ್ಯಹರಿಚ್ಚಂದ್ರನ್ನೇ ನೋಡಿ, ಒಳ್ಳೇನಾಗವೊತ್ಗೆ ಹೆಂಡ್ರು ಮಕ್ಳ ಮಾರಿಕ್ಯಂಡು ಮಸಾಣ ಕಾದ’ ಅಂತ ದುಃಖ ತೋರಿಸಿದೆ.
‘ಹ್ಞೂಂಕಲಾ, ಕೆಟ್ಟೋನಾಗ ವೊತ್ಗೆ ಹಿರಣ್ಯಕಶಿಪು ಬೇಗನೆ ಸ್ವರ್ಗ ಸೇರಿಕ್ಯಂಡ. ದುರ್ಯೋಧನ ದ್ರೌಪದಮ್ಮನ ಅವಮಾನ ಮಾಡಿ ಮೆರೆದ್ರೂವೆ ಕೊನೆಗೆ ಸ್ವರ್ಗಕ್ಕೋದ’ ಯಂಟಪ್ಪಣ್ಣ ಕಣ್ಣೀರು ಹಾಕತೊಡಗಿತು.
‘ಇದೇನಿರ್ಲಾ ನಿಮ್ಮ ಮುಲುಕಾಟ, ಕುತುಗಂಡು ಯಾರಿಗೆ ಸಾಪ ಹಾಕ್ತಿದ್ದರಿ? ರಾಜಕೀಯದೋರು ವೋಟಾಕ್ರಿ ಅಂತ ಕುಕ್ಕರ್‍ರು, ಸೀರೆ, ದುಡ್ಡು-ಕಾಸು ಹಂಚತಾವ್ರಂತೆ’ ತುರೇಮಣೆ ಸಿಡಿದರು.
‘ಒಳ್ಳೇತನಕ್ಕೆ ಬೆಲೆ ಇಲ್ಲ ಅಂತ ನಾವು ಮುಕ್ಕುರಿತಿದ್ರೆ ನೀನೊಬ್ಬ. ನಂದೆಲ್ಲಿ ಮಡಗಲಿ ಅಂತ’ ಯಂಟಪ್ಪಣ್ಣ ಸಿಟ್ಟಿಗೆ ಬಿದ್ದಿತು.
‘ನೋಡಿರ್ಲಾ ಸಾಮಾನ್ಯ ಜನ ತೀರಾ ಒಳ್ಳೇರಾಗ ವೊತ್ಗೇ ಇವೆಲ್ಲಾ ಹಲವಂಗ. ಈಗ ಎಲೆಕ್ಷನ್ ಬಂತಲ್ಲಾ ‘ನಾವು ಗೆದ್ರೆ ಉಚಿತ ವಿದ್ಯುತ್, ಉಚಿತ ದವಸ, ಸಾಲ ಮನ್ನಾ, ಲೊಟ್ಟೆ ಲೊಸಕು’ ಅಂತ ನಿಮ್ಮನ್ನ ಮಂಗ ಮಾಡ್ತಾವೆ ಕನ್ರೋ’ ತುರೇಮಣೆ ದನಿ ಎತ್ತಿದರು.
‘ಸಾ, ಮುಂದ್ಲ ಜಲುಮದೇಲಿ ಅದಾನಿ ಮನೇಲೋ ಅಂಬಾನಿ ಮನೇಲೋ ಹುಟ್ಟಲೇ ಬೇಕು ಅಂತ ಯಂಟಪ್ಪಣ್ಣ ತಯಾರಿ ನಡೆಸ್ತಾ ಅದೆ’ ನಾನು ಸತ್ಯವನ್ನ ಸ್ಫೋಟಿಸಿದೆ.
‘ಹ್ಞೂಂ ಕಲಾ, ಬರೀ ಕೈ ಅಲ್ಲಾಡಿಸಿಕ್ಯಂಡು ರಾಜಕೀಯಕ್ಕೆ ಬಂದೋರು ಐದೊರ್ಸದೇಲೇ ಕೋಟಿ ಕೋಟಿ ಆಸ್ತಿ ಮಾಡ್ತರಲ್ಲಾ ಯಂಗೆ ಅಂತ ರಮೇಸಣ್ಣ ಬಾಯ ಮ್ಯಾಲೆ ಬೆಳ್ಳಿಟ್ಟುಕಂಡದೆ’ ಅಂತ ಯಂಟಪ್ಪಣ್ಣ ಲೇವಡಿ ಮಾಡಿತು.
‘ಅಲ್ಲ ಕನ್ರೋ, ಮುಂದ್ಲ ಜಲುಮದೇಲಿ ಒಳ್ಳೇದಾಗ್ಲಿ ಅಂತ ಈ ಜಲ್ಮದೇಲಿ ತೀರಾ ಒಳ್ಳೇರಾಗಿ ಅನ್ಯಾಯಕ್ಕೆ ಮಣೆ ಹಾಕ್ತಿರಲ್ಲೋ ಬಾಯಿ ಸತ್ತ ನನ ಮಕ್ಕಳಾ!’ ತುರೇಮಣೆ ಕ್ರಾಂತಿ ಮಾಡತೊಡಗಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.