‘ಅನು, ಬೇಗ ತಿಂಡಿ ಕೊಡು, ಕಸಾಪ ಕ್ಲಾಸಿಗೆ ಹೋಗಲು ತಡವಾಗುತ್ತೆ...’ ಎಂದ ಗಿರಿ.
‘ಹೌದೂರಿ, ಬೆಲ್ ಹೊಡೆಯುವ ಕಾಲು ಗಂಟೆ ಮೊದಲೇ ತರಗತಿಯಲ್ಲಿರಬೇಕು, ತಡವಾಗಿ ಹೋದರೆ ಟೀಚರ್ ಕ್ಲಾಸಿಗೆ ಸೇರಿಸಲ್ಲ’ ಎನ್ನುತ್ತಾ ಅನು ತಿಂಡಿ ತಂದುಕೊಟ್ಟಳು.
‘ನೀನು ಹೇಳಿದಂತೆ ನೀಟಾಗಿ ಶೇವ್ ಮಾಡಿಕೊಂಡು, ಕ್ರಾಪ್ ತೆಗೆದು ತಲೆ ಬಾಚಿಕೊಂಡಿದ್ದೇನೆ. ಸಾಂಪ್ರದಾಯಿಕ ಉಡುಪು ಧರಿಸಿದ್ದೇನೆ’.
‘ವೆರಿಗುಡ್, ಕಸಾಪ ಕ್ಲಾಸಿಗೆ ವಿಕಾರವಾಗಿ ಗಡ್ಡ ಬೆಳೆಸಿಕೊಂಡು, ತಲೆ ಕೆದರಿಕೊಂಡು ಹೋಗಬಾರದು. ಶಿಸ್ತು, ಸಭ್ಯತೆ ಪಾಲಿಸಬೇಕು. ಕ್ಲಾಸಿನಲ್ಲಿ ಗಲಾಟೆ ಮಾಡಬೇಡಿ, ಟೀಚರ್ ತುಂಬಾ ಸ್ಟ್ರಿಕ್ಟ್, ಕ್ಲಾಸಿನಿಂದ ಆಚೆ ಕಳಿಸಿಬಿಡ್ತಾರೆ’. ಗಿರಿ ತಲೆಯಾಡಿಸಿದ.
‘ಕ್ಲಾಸಿನಲ್ಲಿ ಏರಿದ ದನಿಯಲ್ಲಿ ಮಾತನಾಡುವಂತಿಲ್ಲ, ಟೀಚರ್ ಏರಿದ ದನಿಯಲ್ಲಿ ಮಾತನಾಡಿದರೂ ನೀವು ತಾಳ್ಮೆ ಕಳೆದುಕೊಳ್ಳದೆ ಸಹಿಸಿಕೊಳ್ಳಬೇಕು. ಅನಗತ್ಯ ಪಾಂಡಿತ್ಯ ಪ್ರದರ್ಶಿಸಲು ಹೋಗಬೇಡಿ, ಸಿಲೆಬಸ್ ವ್ಯಾಪ್ತಿ ಮೀರಿದ ಯಾವುದೇ ವಿಚಾರ ಮಾತನಾಡಬೇಡಿ. ಏನಾದರೂ ಹೇಳುವುದಿದ್ದರೆ ಮೊದಲೇ ಚೀಟಿ ಬರೆದುಕೊಟ್ಟು ಟೀಚರ್ ಅನುಮತಿ ಪಡೆಯಬೇಕು, ಅವರು ಅನುಮತಿ ಕೊಡದಿದ್ದರೆ ತೆಪ್ಪಗಿರಬೇಕು. ಗೊತ್ತಾಯ್ತೇನ್ರೀ?...’ ಗಿರಿ ಮತ್ತೊಮ್ಮೆ ತಲೆಯಾಡಿಸಿದ.
‘ಟೀಚರ್‌ಗೆ ಒಬೀಡಿಯಂಟಾಗಿ ನಡೆದುಕೊಂಡು ಅವರಿಗೆ, ಸಂಸ್ಥೆಗೆ ಒಳ್ಳೆ ಹೆಸರು ತರಬೇಕು. ಕ್ಲಾಸಿನಲ್ಲಿ ನಡೆಯುವ ಯಾವುದೇ ವಿಚಾರಗಳನ್ನು ಮಾಧ್ಯಮದವರ ಮುಂದೆ, ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತಾಪಿಸಬಾರದು’.
‘ಕ್ಲಾಸಿನ ಕಟ್ಟುಪಾಡುಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೇನೆ... ಅಸೆಂಬ್ಲಿ, ಪಾರ್ಲಿಮೆಂಟಿನಲ್ಲೂ ಇದೇ ರೀತಿಯ ಶಿಸ್ತು, ಸಭ್ಯತೆಯ ನಿಯಮ ಪಾಲನೆಯಾದರೆ ನಮ್ಮ ರಾಜ್ಯ ಮಾದರಿ ರಾಜ್ಯವಾಗಿ ಪ್ರಜೆಗಳು ಕ್ಷೇಮದಿಂದಿರುತ್ತಾರೆ...’ ಎನ್ನುತ್ತಾ ಗಿರಿ ಹೊರಟ.
‘ರೀ, ಕ್ಲಾಸಿನಲ್ಲಿ ನೆಟ್ಟಗೆ ಮಾತನಾಡಿ, ಉಚ್ಚಾರಣೆ ಸ್ಪಷ್ಟವಾಗಿರಲಿ, ಸರಳ, ಸಭ್ಯ, ಸಹನೀಯ ಪದಗಳನ್ನು ಬಳಸಿ. ಕೆರಳಿಸುವ, ನರಳಿಸುವ ಮಾತುಗಳನ್ನಾಡಬೇಡಿ...’ ಎಂದು ಅನು ಮತ್ತೊಮ್ಮೆ ಎಚ್ಚರಿಸಿದಳು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.