ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ಸರ್ವರ್ ಪ್ರಾಬ್ಲಂ!

Last Updated 16 ಆಗಸ್ಟ್ 2021, 19:45 IST
ಅಕ್ಷರ ಗಾತ್ರ

‘ಸಾ, ಸರ್ವರ್ ಡೌನಾಗಿ ಭಾಳ ತೊಂದರೆಯಾಗ್ಯ ದಂತೆ! ಯವಾರೆಲ್ಲಾ ಖೈದಾಗವಂತೆ! ಸಾಫ್ಟ್‌ ವೇರ್-ಹಾರ್ಡ್‌ವೇರ್ ಸರಿಯಾಗಕೆ ಇನ್ನೂ 3-4 ತಿಂಗಳಾದ್ರೂ ಬೇಕಂತೆ!’ ಸುದ್ದಿ ಸ್ಫೋಟ ಮಾಡಿದೆ.

‘ಹ್ಞೂಂ ಕನಪ್ಪಾ, ಸರ್ಕಾರದ ಸರ್ವರೇ ಡೌನಾಗ್ಯದೆ! ವಯಸ್ಸಾದವೆಲ್ಲಾ ಕೆಲಸ ಬುಟ್ಟು ಸೊಂಟದ ಕೆಳಗಲ ಬೋಗುಳ ಬೈತಾ ಕಾಲ ಕಳೀತಾವೆ. ಇನ್ನು ಯವಾರೆಲ್ಲಿ ಪೈಸಲಾದವು? ಮೋದಿ ಗುಜರಿ ನೀತಿ ಪ್ರಕಾರ, 15 ವರ್ಸ ಅಧಿಕಾರ ಮಾಡಿದ ಅಥವಾ 70 ವರ್ಸ ದಾಟಿದ ರಾಜಕಾರಣಿಗಳನ್ನ ಗುಜರಿಗೆ ಹಾಕದೇ ಸೈ!’ ಅಂತು ಯಂಟಪ್ಪಣ್ಣ.

‘ಅಣೈ, ಅವುನಂದದ್ದು ಸಬ್‍ರಿಜಿಸ್ಟ್ರಾರ್ ಆಪೀಸಲ್ಲಿ ಎಡವಟ್ಟಾಗ್ಯದೆ ಅಂತ! ನೀವು ಸರ್ಕಾರದ ಸರ್ವರ‍್ರು ಅಂದುಕಂಡ್ರಾ?’ ಚಂದ್ರು ನಕ್ಕ.

‘ಬಸಣ್ಣನ ಸರ್ಕಾರಕ್ಕೂ ವೈರಸ್ ಪ್ರಾಬ್ಲಂ ಆಗ್ಯದೆ ಕನ್ರೋ! ದೋಸರು ಕೊಡೋ ಮುಹೂರ್ತ, ನಕ್ಷತ್ರಕ್ಕೆ ಹೊಸಪ್ಯಾಟೆ ಸಿಂಗಂ ಕಾಯ್ತಾ ಕೂತದೆ. ರಿಜಲ್ಟು ಬಂದು ವಿತೆಲ್ಡ್ ಆದೋರು, ಲಕೋಟೆ ಕೊಟ್ಟೋರು, ಗಡ್ಡ ಬುಟ್ರೂ ಮಂತ್ರಿಯಾಗದೋರು ಕೂಗುಯ್ಯಾಲೆ ಆಡತಾವರೆ! ಇನ್ನು ಮಂತ್ರಿಯಾದವು ಕೆಲಸ ಸುರು ಮಾಡದು ಬುಟ್ಟು ಅಪೀಸಲ್ಲಿ ಮಂಗ್ಳಾರತಿ ಎತ್ತದ್ರಲ್ಲೇ ಬಿಜಿಯಾಗ್ಯವೆ. ಮಿನಿಸ್ಟ್ರಿಗೆ ಒತ್ತರಿಸಿಕ್ಯಂಡು ನಿಂತಿರೋ ಮೂರು ಬಿಟ್ಟವು ಬಾಯಿಂದ ಕೆಳಿಕ್ಕೆ ಮಾಸ್ಕಾಕಿದ್ದರೆ ಎಲ್ಲಾ ಬಿಟ್ಟವು ಮಾಸ್ಕೇ ಇಲ್ಲದೆ ಹಲ್ಲು ಕಿಸ್ಕಂಡು ಕ್ಯಾಮರಾಕ್ಕೆ ಮೂತಿ ತೋರಿಸ್ತಾ ನಿಂತಿರತವೆ’ ತುರೇಮಣೆ ಸಿಟ್ಟಾದ್ರು.

‘ಪೋಲೀಸಿನೋರಿಗೇಳಿ ಸೀಎಂ ದಂಡ ಹಾಕಿಸಬೌದಲ್ಲ ಸಾ?’ ಚಂದ್ರು ನೋವು ತೋಡಿಕ್ಯಂಡ.

‘ಪಾಪ, ಬಸಣ್ಣ ವಸಾ ಡ್ರೈವರ‍್ರು ಕಯ್ಯಾ! ಜೋರಾಗಿ ಹಾರನ್ ಹೊಡದು ಯಾರನೂ ಹೆದರಿಸಂಗಿಲ್ಲ! ಟೀವಿಯೋರು, ಪೇಪರಿನೋರೇ ‘ಎಲ್ಲಾರೂ ಮಾಸ್ಕು ಹಾಕಿದ್ರೆ ಮಾತ್ರ ಚಿತ್ರ, ಸುದ್ದಿ ಹಾಕ್ತೀವಿ! ಇಲ್ಲದಿದ್ರೆ ಯಾವುದೂ ಇಲ್ಲ!’ ಅಂತ ವ್ಯಾಧಿಪತ್ಯ ಹೊಂಡುಸ್ಬೇಕು. ಆಗ್ಲಾದ್ರೂ ರಾಜಕೀಯದವು ಮಾಸ್ಕಿಲ್ಲದವನಿಗೆ ಭವಿಷ್ಯವಿಲ್ಲ ಅಂತ ತಿಳುಕಂಡಾವೇನೋ!’ ಅಂತು ಯಂಟಪ್ಪಣ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT