ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರೂಪ ತಡೆ ಮಂಡಳಿ

Last Updated 11 ಡಿಸೆಂಬರ್ 2018, 20:09 IST
ಅಕ್ಷರ ಗಾತ್ರ

ಬಹಳ ದಿನದಿಂದ ಸಿಕ್ಕೇ ಇಲ್ಲ... ಈ ಪುಢಾರಿ ಫಟಿಂಗಪ್ಪನವರನ್ನ ನೋಡಿಬರೋಣ ಅಂತ ಅವರ ಮನೆಗೆ ಹೋದೆ. ಬಂದವರನ್ನೆಲ್ಲಾ ಆಚೆ ಕಳಿಸಿ ನನ್ನ ಹತ್ರ ಮಾತಿಗೆ ನಿಂತರು.

‘ಏನ್ ಸ್ವಾಮಿ, ನೀವು ಇಷ್ಟು ಹೊತ್ತಿಗಾಗಲೇ ಮಿನಿಸ್ಟರ್ ಆಗ್ಬೇಕಿತ್ತು. ಹೋಗಲಿ, ಯಾವುದಾದರೂ ಮಂಡಳಿಯನ್ನಾದರೂ ಅಲಂಕರಿಸ್ತೀರಿ ಅಂತ ಅಂದುಕೊಂಡಿದ್ದೆ...’ ಮಾತಿಗೆ ಎಳೆದೆ.

‘ಅಯ್ಯೋ ಬಿಡಿ, ಅದೆಲ್ಲಾ ಜೇನುಗೂಡಿಗೆ ಕಲ್ಲು ಒಡೆದಂತೆ’.

‘ಅಂದರೆ?’

‘ಅದೆಲ್ಲಾ ನಿಮಗೆ ಗೊತ್ತಾಯಕ್ಕಿಲ್ಲಾ. ಕೇಳಕ್ಕೆ ಹೋದ್ರೆ, ‘ಮಂಡಳಿಗಳೇ ಇಲ್ಲಾ, ಎಲ್ಲಾ ಹೌಸ್‍ಫುಲ್’ ಅಂತಾರೆ. ಕೆಲವು ಮಂಡಳಿಗಳನ್ನು ಬರ್ಖಾಸ್ತ್ ಮಾಡವ್ರಂತೆ, ಮಿಕ್ಕಿದ್ದೆಲ್ಲಾ ಆಗಲೇ ಬುಕ್ಕಾಗ್ ಓಗದಂತೆ. ಕೊಳಚೆ ಕೂಡ ಇಲ್ಲವಂತೆ’.

‘ಅಂದರೆ, ರಾಜಕಾರಣದಲ್ಲಿ ಇದ್ದ ಕೊಳಚೆ ಹೊರಟೇ ಹೋಯ್ತಾ... ಇಷ್ಟು ಬೇಗ?’

‘ಅಯ್ಯೋ, ನಿಮ್ಮ ಮಾತಿಗೆ ಬಡಕೋಬೇಕು. ಕೊಳಚೆ ನಿರ್ಮೂಲನ ಮಂಡಳಿ ಅಂತ ಏನೋ ಇದ್ಯೆಲ್ಲಾ, ಅದೂ ಕೂಡ ಸೋಲ್ಡ್ ಔಟ್ ಅಂತೆ’.

ಅಷ್ಟರಲ್ಲಿ ಅವರ ಮೊಮ್ಮಗ ಓದುತ್ತಾ ಇದ್ದವನು ಬಂದು ಕೇಳಿದ– ‘ಜಗತ್ತಿನಲ್ಲಿ ಅತಿ ಎತ್ತರದ ಪ್ರತಿಮೆ ಯಾವುದು? ಮೊನ್ನೆ ಸ್ಥಾಪನೆಯಾದ ಪಟೇಲ್ ಪ್ರತಿಮೆ ಅಲ್ವಾ ತಾತ?’

‘ಯಾವುದೋ ಒಂದು ಬರಿಯೋ’ ಅಂತ ಅನೇಕ ಪೋಷಕರು ಮಾಡೋ ಹಾಗೇ ಗದರಿದ.

‘ನೋಡಿ, ಆ ವಪ್ಪಾ ಎಂತಾ ಪ್ರತಿಮೆ ಮಾಡಿ ನಿಲ್ಲಿಸಿದ್ದಾನೆ. ನಮ್ಮಲ್ಲೂ ಅಂಗೇ ಮಾಡಿದರೆ ಎಲ್ಲಾ ಕಡೆ, ನಮ್ಮಂತೋರಗೂ ಒಂದು ಚಾನ್ಸ್ ಕೊಡಬಹುದು’.

‘ಅಲ್ಲಾ ಸ್ವಾಮಿ, ದೇಶಾನೆಲ್ಲಾ ಪ್ರತಿಮಾಗೃಹ ಮಾಡಲಿ ಅಂತಾನೋ ನಿಮ್ಮಾಸೆ?’

‘ಬೇಕಲ್ಲಾ ಸ್ವಾಮಿ, ನಮ್ಮ ಮೊಮ್ಮಕ್ಕಳಿಗಾದರೂ...’

‘ಆದರೆ, ನಮ್ಮಲ್ಲಿ ನೋಡಿ, ದೇವೇಗೌಡರ ಪ್ರತಿಮೆನೇ ಹಾಳ್ ಮಾಡಿಟ್ಟಿದ್ದಾರಂತೆ, ಓದಲಿಲ್ವಾ ಪೇಪರ್‍ನಲ್ಲಿ?’

‘ಅದನ್ನೆಲ್ಲಾ ತಡೀಬೇಕಪ್ಪ. ಪ್ರತಿಮೆ ತಂಟೆ
ಗೋದರೆ... ತಕ್ಕ ಶಾಸ್ತಿ ಮಾಡಬೇಕು’.

‘ಅಂಗಾರೆ, ಅದನ್ನೇ ಕೇಳೋಣವಾ?’

‘ಯಾವುದನ್ನೋ?’

‘ನೀವು ಹೇಳಿದ್ರಲ್ಲಾ, ಇನ್ನೊಂದ್ಸಲಾ ಹೇಳಿ’.

‘ಪ್ರತಿಮಾ ಸ್ಥಾಪನೆ ಮತ್ತು ವಿರೂಪ ತಡೆ ಮಂಡಳಿ’.

‘ಅಂದರೆ, ಅದನ್ನೇ ಶುರು ಮಾಡಿ ನನ್ನನ್ನೇ
ಅಧ್ಯಕ್ಷ ಅಂತ ಕುಂಡಿಸ್ರಿ ಅಂತ ಜಬರ್‌ದಸ್ತ್ ಮಾಡ್ತೀನಿ’ ಅಂತ ಎದ್ದು ಹೊರಟೇಬಿಟ್ಟರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT