ಬುಧವಾರ, ಆಗಸ್ಟ್ 4, 2021
20 °C

ಚುರುಮುರಿ | ಇವರು ಶ್ರೀಸಾಮಾನ್ಯರು

ಸುಮಂಗಲಾ Updated:

ಅಕ್ಷರ ಗಾತ್ರ : | |

Prajavani

ಸ್ವರ್ಗದಲ್ಲಿದ್ದ ಆರ್.ಕೆ. ಲಕ್ಷ್ಮಣರಿಗೆ ತಮ್ಮ ಶ್ರೀಸಾಮಾನ್ಯನನ್ನು ಕಾಣದೆ ಬಹಳ ಬೇಜಾರಾಗಿತ್ತು. ನಾಕು ದಿನ ಭರತಮಾತೆಯ ಆಗಸದಲ್ಲಿ ಓಡಾಡಿ, ಶ್ರೀಸಾಮಾನ್ಯನನ್ನು ಎತ್ತರದಿಂದಲೇ ಕಣ್ತುಂಬಿಕೊಳ್ಳುತ್ತೇನೆಂದು ಇಂದ್ರನಿಗೆ ಕೇಳಿದರು. ಇಂದ್ರ ಹಾರಿಬಿದ್ದ. ‘ಅಲ್ಲೆಲ್ಲ ಕೊರೊನಾ ವೈರಸ್‌ ಅಂತಪ್ಪ, ಪುಷ್ಪಕವಿಮಾನಗಳನ್ನೂ ನಿಲ್ಲಿಸಿದ್ದೀವಿ. ಯಾರನ್ನೂ ಆಚೆ ಬಿಡ್ತಿಲ್ಲ’.

‘ಭಾರತದ ಜಾತಿ ವೈರಸ್ಸು, ಅಮೆರಿಕದ ಜನಾಂಗೀಯ ವೈರಸ್ಸಿಗಿಂತ ಇದು ಭಾಳ ಶಕ್ತಿಶಾಲಿನಾ?’ ಆರ್.ಕೆ. ಅಚ್ಚರಿಗೊಂಡರು. ‘ಈಗ ಆ ಇಲಾಖೆ ನೋಡ್ಕಂತಿರೋ ಚಿತ್ರಗುಪ್ತಂಗೆ ಕೇಳಪ್ಪಾ’ ಎಂದು ಇಂದ್ರ ಸಾಗಹಾಕಿದ.

ಚಿತ್ರಗುಪ್ತ ಶುರುಮಾಡಿದ. ‘ಭಾರತದಲ್ಲಿ ಶ್ರೀಸಾಮಾನ್ಯ ಇಲ್ಲವೇ ಇಲ್ಲ ಅಂತ ತುಷಾರ್ ಮೆಹ್ತಾ ಸಾಹೇಬ್ರು ಹೇಳಿದ್ದಾರೆ. ಎಪಿಎಂಸಿ ಕಾನೂನು ತಿದ್ದುಪಡಿ ಮಾಡಿ ರೈತರ ಬೆಳೆಗೆ ತಕ್ಕ ಬೆಲೆ, ಹತ್ತಾರು ಬಗೆಯ ಸಾಲ ನೀಡಿಕೆ, ಸಬ್ಸಿಡಿ, ಖಾತೆಗೆ ನೇರ ದುಡ್ಡು... ಹಿಂಗೆ ಅವರೂ ಸಿರಿಸಾಮಾನ್ಯ ಆಗಿದಾರಂತೆ. ನೀವು ವಲಸಿಗ ಶ್ರೀಸಾಮಾನ್ಯ ಅಂದಿರಲ್ಲ, ಅವರನ್ನೆಲ್ಲ ಫಸ್ಟ್‌  ಕ್ಲಾಸ್ ಶ್ರಮಿಕ್ ಬುಲೆಟ್ ರೈಲಲ್ಲಿ ಊಟ, ತಿಂಡಿ, ದುಡ್ಡು ಕೊಟ್ಟು ರಾಜೋಚಿತವಾಗಿ ಮನೆಗೆ ಕಳಿಸಿದಾರಂತೆ’.

ವಾಪಸು ಹೊರಟ ಆರ್.ಕೆ.ಯವರಿಗೆ ಸ್ವರ್ಗದ ಬಾಗಿಲ ಹೊರಗೆ ಒಳಸರಿದ ಹೊಟ್ಟೆ, ಗುಳಿಬಿದ್ದ ಕಣ್ಣುಗಳ ಎಪ್ಪತ್ತೆಂಬತ್ತು ಬಡಕಲು ದೇಹಗಳು ಕಂಡವು. ‘ಹೊರಗಿದ್ದಾರಲ್ಲ ಮತ್ತೆ ವಲಸಿಗ ಶ್ರೀಸಾಮಾನ್ಯರು’ ಆರ್.ಕೆ.ಗೆ ಮತ್ತೆ ಅಚ್ಚರಿ.

‘ಭರತಖಂಡದ ಭೂಮಿಯಲ್ಲೇ ನರಕದರ್ಶನ ಮಾಡಿಸಿ, ಸೀದಾ ಇಲ್ಲಿಗೆ ಕಳಿಸಿದ್ದಾರೆ. ಇನ್ನೂ ವಿಚಾರಿಸಬೇಕಿದೆ’.

‘ಆ ತುದಿಯಲ್ಲಿದ್ದಾನಲ್ಲ, ಕತ್ತಿನ ಮೇಲೆ ಹಿಚುಕಿದ ಗುರುತಿದೆಯಲ್ಲ, ಅವನ್ಯಾರು?’

‘ಅವನು ಕಪ್ಪು ಶ್ರೀಸಾಮಾನ್ಯ’ ಚಿತ್ರಗುಪ್ತ ಉದಾಸೀನದಿಂದ ಹೇಳಿದ.

‘ಏಳಡಿ ಎತ್ತರದ ಆಜಾನುಬಾಹು, ಅವನನ್ನು ಯಾರು, ಯಾಕೆ ತದುಕಿದರು?’

‘ಇವನು ಏಳಡಿ ಬಾಹುಬಲದವನು ನಿಜ, ಆದರೆ ಇವನ ಕುತ್ತಿಗೆ ಮೇಲೆ ಮಂಡಿಯೂರಿದವನು ಬಿಳಿಚರ್ಮದ ಅಸಾಮಾನ್ಯ... ಗೊತ್ತಾಯಿತೇ’ ಚಿತ್ರಗುಪ್ತ ಕೊಂಕುನಗೆ ಬೀರಿದ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.