ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಸೂತ್ರದ ಗೊಂಬೆಯಾಟ

Last Updated 4 ಜುಲೈ 2021, 19:30 IST
ಅಕ್ಷರ ಗಾತ್ರ

ಬೆಕ್ಕಣ್ಣ ದಾರ, ಚಿಕ್ಕ ಗೊಂಬೆಗಳನ್ನಿಟ್ಟುಕೊಂಡು ಏನೋ ಮಾಡುತ್ತಿತ್ತು.

‘ಏನ್ ಹೊಸ ಕಾರುಬಾರು ನಡಿಸೀಯಲೇ’ ಎಂದೆ ಗಾಬರಿಯಿಂದ.

‘ಸೂತ್ರದ ಗೊಂಬೆಯಾಟ... ಇದು ಫಸ್ಟ್ ವರ್ಶನ್, ನೋಡು’ ಎಂದು ವೇದಿಕೆ, ಪರದೆ ಸೆಟ್ ಮಾಡಿತು. ನೋಡುತ್ತ ಕುಳಿತೆ.

‘ಆಡಿಸಿ ನೋಡು, ಬೀಳಿಸಿ ನೋಡು ತೆನೆ ಉರುಳದು ಅಂತ ಕುಮ್ಮಿ ಅಂಕಲ್ ಹಾಡಿಕೋತ ಬರತಾನ. ನನ್ನ ಆರೋಗ್ಯ ಉಳಿಸಕ್ಕಾಗಿ ದೇವರೇ ಕುರ್ಚಿಯಿಂದ ಇಳಿಸೋ ನಿರ್ಧಾರ ತಗಂಡ. ಮತ್ತೆ ಕುರ್ಚಿ ಮೇಲೆ ಕೂರಿಸೋ ನಿರ್ಧಾರವನ್ನೂ ದೇವರೇ ಮಾಡತಾನ ಅಂತ್ಹೇಳಿ ಕಣ್ಣೀರಾಗತಾನ’. ವೇದಿಕೆ ಮೇಲಿನ ಗೊಂಬೆ ಕಣ್ಣೊರೆಸಿಕೊಂಡು ಪಕ್ಕಕ್ಕೆ ಸರಿಯಿತು.

ಆಮೇಲೆ ನಾಲ್ಕಾರು ಸೂತ್ರದ ಗೊಂಬೆಗಳು ವೇದಿಕೆ ಮೇಲೆ ಬಂದು ಸರಬರನೆ ಓಡಾಡುತ್ತ, ಏನೋ ಅಳತೆ ಕೊಡುತ್ತ ಕಲಪಿಲ ಸದ್ದು ಮಾಡುತ್ತಿದ್ದವು. ‘ಇವು ಕಾಂಗಿ ಗೊಂಬೆಗಳು. ತಮ್ಮತಮ್ಮ ಅಳತೆಗೆ ತಕ್ಕ ಮುಖ್ಯಮಂತ್ರಿ ಕುರ್ಚಿ ಮಾಡಿಸಿಕೊಳ್ಳಾಕ ಬಡಗಿಗಳ ಹತ್ರ, ಸೂಟು ಹೊಲೆಸಿಕೊಳ್ಳಾಕೆ ಟೈಲರ್ ಹತ್ರ ಅಡ್ಡಾಡತಾವ. ಆದರ ಮ್ಯಾಗಿರೋ ಹೈಕಮಾಂಡು ಅನ್ನೋ ಒಂದೇ ದಪ್ಪದಾರ ತಮ್ಮನ್ನೆಲ್ಲ ಕುಣಿಸತೈತೆ ಅಂತ ಗೊತ್ತಿದ್ದರೂ ಗೊತ್ತಿಲ್ಲದಂಗೆ ನಟಿಸತಾವ’.

ಈಗ ವೇದಿಕೆ ಮೇಲೆ ಕಮಲದ ಹೂವಿನ ಪಕಳೆಗಳಂತಹ ಗೊಂಬೆಗಳು ಬಂದವು. ಕೈಕೈ ಹಿಡಿದು ‘ನಾವೆಲ್ಲರೂ ಒಂದೇ’ ಎನ್ನುತ್ತ, ದೊಡ್ಡ ಕುರ್ಚಿಯ ಮೇಲೆ ಕೂತಿದ್ದ ಗೊಂಬೆಯ ಬಳಿ ಸಾರಿದವು. ಮರುಕ್ಷಣದಲ್ಲೇ ಮೂರುನಾಲ್ಕು ಗುಂಪುಗಳಾಗಿ ಕುರ್ಚಿಯ ಕಾಲು, ಕೈ ಎಲ್ಲೆಲ್ಲಿ ನಟ್ಟುಗಳಿವೆಯೋ ಅವನ್ನೆಲ್ಲ ಬಿಗಿ ಮಾಡುವ ನಟನೆ ಮಾಡುತ್ತ, ಖರೇ ಎಂದರೆ ಸಡಿಲ ಮಾಡುತ್ತಿದ್ದವು. ‘ಇವು ಕಮಲಗೊಂಬೆಗಳು... ಇವನ್ನೂ ಮ್ಯಾಗಿರೋ ಒಂದೇ ದಪ್ಪದಾರ ಕುಣಿಸತೈತಿ. ಕಾಂಗಿ ಹೈಕಮಾಂಡು ದಾರಕ್ಕಿಂತ ಇನ್ನೂ ದಪ್ಪ, ಕಣ್ಣಿ ಹಗ್ಗದಂಗೆ’.

ಈಗ ವೇದಿಕೆ ಮೇಲೆ ಹ್ಯಾಪುಮೋರೆಯ ಒಂದಿಷ್ಟು ಗೊಂಬೆಗಳು ಬಂದವು. ‘ಇವು ನೀವು, ಶ್ರೀಸಾಮಾನ್ಯರು. ನಿಮ್ಮನ್ನು ಮ್ಯಾಗಿಂದ ಯಾರು, ಎದಕ್ಕ ಕುಣಿಸತಾರೆ ಅಂತ ನಿಮಗೆ ಕೊನೇವರೆಗೂ ಗೊತ್ತಾಗಂಗಿಲ್ಲ’ ಬೆಕ್ಕಣ್ಣ ಹಲ್ಲುಕಿಸಿಯಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT