ಗುರುವಾರ , ಮಾರ್ಚ್ 30, 2023
24 °C

ಚುರುಮುರಿ| ಬಲು ಘಾಟು

ಲಿಂಗರಾಜು ಡಿ.ಎಸ್. Updated:

ಅಕ್ಷರ ಗಾತ್ರ : | |

Prajavani

ತುರೇಮಣೆ ಒಂದೇ ಸಮನೆ ಸೀನುತಿದ್ದರು. ‘ಇದ್ಯಾಕ್ಸಾ ಸೀನುತಿದ್ದೀರಿ. ಕೊರೊನಾ ಬಂದದೆ ಅಂತ ಜನ ತಪ್ಪು ತಿಳಕತರೆ’ ಅಂತ ಪುಳ್ಳೆ ಹಾಕಿದೆ.

‘ಲೋ ಬೊಡ್ಡಿಹೈದ್ನೇ, ಮನೇಲಿ ಒಣ ಮೆಣಸಿನಕಾಯಿ ಹುರಿತಾವ್ರೆ! ಅದುರುದ್ದೇ ಘಾಟು ಕಲಾ!’ ಅಂದ್ರು.

‘ಹ್ಞೂಂ ಕಯ್ಯಾ, ರಾಜ್ಯದೇಲೆಲ್ಲಾ ಘಾಟುಗಳು ಜಾಸ್ತಿಯಾಗಿ ಜನ ಕೆಮ್ಮಿ, ಸೀತು ಸುಸ್ತಾಗ್ಯವರೆ. ಎತ್ತಿನ ಬಂಡೀಲಿ ಸದನಕ್ಕೋದ್ರೆ ಜನದ ಬಂಡಾಟ ತಪ್ತದಾ! ಬಸಣ್ಣ ಮಾಮ ಡೆಲ್ಲಿಗೋಗದ್ರಲ್ಲೇ ಬಿಜಿ ಅದೆ!’ ಯಂಟಪ್ಪಣ್ಣ ಬೇಜಾರಲ್ಲಿ ಮಾತಾಡಿತು.

‘ಅಣ್ಣೇಳದು ಸರಿಯಾಗದೆ. ಶಿರಾಡಿ ಘಾಟು, ಚಾರ್ಮಾಡಿ ಘಾಟು ಕಡೆ ಮೂರೊರ್ಸದ ಹಿಂದೆ ಮಾಡಿದ ಸಿಮೆಂಟು ರೋಡು ಕಿಸ್ಕಂಡು ಬಿದ್ದದಂತೆ?’ ತುರೇಮಣೆ ಹೇಳಿದರು.

‘ಸಿಮೆಂಟ್ ತೋರಿಸಿಕ್ಯಂಡೋದ್ರೆ ಸಿಮೆಂಟು ರೋಡು ಅಂದಾರೇ? ಬಿಬಿಎಂಪಿ ರೋಡೆಲ್ಲಾ ಬೀಟೆ ಸೆಣೆದು ಬಿರುಕು ಬಿಟ್ಟವೆ, ಕಲ್ಯಾಣ ಕರ್ನಾಟಕದೇಲಿ ರೋಡೆಲ್ಲ ದೂಳಿನ ಘಾಟು ಎಬ್ಬಿಸ್ತಾವೆ. ಶಾಸಕರ ನಿಧಿ ಬಳಕೆಯಾಗ್ದೆ ಕೋಟಿ ಕೋಟಿ ಹಂಗೇ ಬಿದ್ದದಂತೆ? ಜನ ಹಳೆ ಕಲ್ಲು ಹೊಸ ಬಿಲ್ಲು ಅಂತ ನಗಾಡಿಕ್ಯಂಡು ಸುಮ್ಮಗವ್ರೆ’ ಅಂತು ಯಂಟಪ್ಪಣ್ಣ.

‘ಯಂಟಪ್ಪಣ್ಣೋ, ಅತ್ಯಾಚಾರದ ಘಾಟು, ನಡು ರಾತ್ರೀಲಿ ಡ್ರಗ್ಸ್ ಘಾಟು, ಕಾಶ್ಮೀರದಲ್ಲಿ ಉಗ್ರರ ಘಾಟು, ಸದನದಲ್ಲಿ ಆರೋಪದ ಘಾಟು, ಮೀಸಲಾತಿ ಘಾಟು, ಖಾತೆ ಘಾಟು, ಅತಂತ್ರ ನಗರಸಭೆಗಳಲ್ಲಿ ಕುರ್ಚಿ ಘಾಟು, ಒಂದಾ ಎರಡಾ, ಶಾಸಕರ ನಿಧಿಯಗೇನದೆ ಪುಗಸಟ್ಟೆ ಪುನುಗು’ ಅಂತಂದೆ.

‘ಕೊರೊನಾ, ಪೆಟ್ರೋಲು, ಗ್ಯಾಸು ಟ್ರಬಲ್ಲಲ್ಲಿ ನಮ್ಮ ಸ್ಥಿತಿ ಕೊಯ್ ಕೊಟಾರ್ ಆಗಿ ಹರಿಶ್ಚಂದ್ರ ಘಾಟ್ ಕಾಣ್ತಾ ಅದೆ ಕನೋ. ಮೋದಿ ಮಾವಾರು ಮಾತ್ರ ನಮ್ಮ ಆರ್ಥಿಕತೆ ಬಲಿಷ್ಠವಾಗ್ಯದೆ ಅಂತ ಘಾಟೆಬ್ಬಿಸವ್ರಲ್ರೋ! ಯಾಕಿಂಗೆ?’ ಅಂತು ಯಂಟಪ್ಪಣ್ಣ.

‘ಉಳ್ಳೋರಿಗೇ ಪಾಯ್ದೆಯಾಗಬೇಕಾದ್ರೆ ಒಳ್ಳೇರಿಗೆ ಘಾಟು ಆದೇ ಆಯ್ತದೆ ಕನಿರ್ಲಾ. ಪಾಯ್ದೆ ಸಂಸ್ಥಾಪನಾರ್ಥಾಯ ಘಾಟು ಸಂಭವಾಮಿ ಯುಗೇಯುಗೇ’ ಅಂದ ತುರೇಮಣೆ ಘಾಟಿನ ವಿಶ್ವರೂಪ ತೋರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.