ಬುಧವಾರ, ಆಗಸ್ಟ್ 17, 2022
30 °C

ಚುರುಮುರಿ: ಖಾತೆ ಹಂಚಿಕೆ

ಕೆ.ವಿ.ರಾಜಲಕ್ಷ್ಮಿ Updated:

ಅಕ್ಷರ ಗಾತ್ರ : | |

Prajavani

‘ಸಂಜೆ ಸರೋಜಾ ಮನೇಲಿ ಪಾರ್ಟಿ’.

‘ಯಾಕೋ? ಮಹಿಳಾ ಮಂಡಳಿ ಅಧ್ಯಕ್ಷಗಿರಿ ಜೊತೆ ಬೇರೆ ಹೊಸ ಹುದ್ದೆ ಸಿಕ್ತಾ?’ ನನ್ನವಳ ಕಾಲೆಳೆದೆ.

‘ಇಲ್ಲಪ್ಪಾ, ಅವರ ಮಗನಿಗೆ ಎಂಬಿಬಿಎಸ್ ಸೀಟ್ ಸಿಕ್ಕಿರಲಿಲ್ಲ, ಆಯುರ್ವೇದ ವೈದ್ಯಶಾಸ್ತ್ರಕ್ಕೆ ಅರ್ಧ ಮನಸ್ಸಿನಲ್ಲೇ ಸೇರಿಸಿದ್ದರು. ಈಗ, ಶಸ್ತ್ರಚಿಕಿತ್ಸೆ ಮಾಡೋಕ್ಕೆ ಅರ್ಹತೆ, ಅವಕಾಶ ಸಿಕ್ತಿದೆಯಲ್ಲ, ಅದರ ಸೆಲೆಬ್ರೇಶನ್’ ಪುಟ್ಟಿ ಸಂಶಯ ನಿವಾರಿಸಿದಳು.

‘ಅದೂ ಒಂದು ರೀತಿ ಒಳ್ಳೇದೆ. ಗ್ರಾಮೀಣ ಪ್ರದೇಶಗಳಲ್ಲಿ ತಜ್ಞರಿಲ್ಲದೆ ಸಿಟಿಗೆ ಓಡಿ ಬರೋ ಕಷ್ಟ ತಪ್ಪುತ್ತೆ. ನಮ್‌ ಕಾಲದಲ್ಲಿ ಇಂಗ್ಲಿಷ್ ಡಾಕ್ಟರ್ ಎಲ್ಲಿ ಬಂತು? ಸಣ್ಣ ಪುಟ್ಟದ್ದಕ್ಕೆಲ್ಲ ಹಿತ್ತಲ ವೈದ್ಯವೇ- ಆಪರೇಶನ್ ಅಂದ್ರೆ ದೊಡ್ಡ ಆಸ್ಪತ್ರೆ’ ಅತ್ತೆ ಕ್ಷಣಕಾಲ ಗತಕ್ಕೆ ಹೋದರು.

‘ಅಬ್ಬಾ ವಿಪರೀತ ಚಳಿ, ಸ್ವಲ್ಪ ಬಿಸಿಬಿಸಿ ಕಾಫಿ ಸಿಕ್ಕರೆ...’ ಎನ್ನುತ್ತಾ ವಾಕ್ ಮುಗಿಸಿ, ಮಂಕಿ ಕ್ಯಾಪ್, ಮಾಸ್ಕ್‌ಧಾರಿ ಕಂಠಿ ಮನೆಯೊಳಗೆ ಕಾಲಿಟ್ಟ.

‘ಕಾಫಿಗಿಂತ ಕಷಾಯ ಕುಡಿದರೆ ಆರೋಗ್ಯಕ್ಕೂ ಹಿತ, ಒಳ್ಳೆ ಇಮ್ಯೂನಿಟಿ ಕೊಡುತ್ತೆ, ಕೊರೊನಾ ಗಿರೊನಾ ಬರೋಲ್ಲ. ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳಿಗೂ ಕಷಾಯ, ಹಣ್ಣು ಕ್ಯಾಂಟೀನ್ ಮೆನುಲಿ ಸೇರಿದೆ’ ಅತ್ತೆಯ ಉಪದೇಶ.

‘ಅಮೆರಿಕದ ರಾಜ್ಯಭಾರದಲ್ಲಿ ನಮ್ಮವರೂ ಸೇರ್ಪಡೆಯಾಗ್ತಿದ್ದಾರೆ, ಕಮಲಾರ ಜೊತೆ ಮಾಲಾ. ನಮಗೆ ಹೆಮ್ಮೆಯ ಸಂಗತಿ. ಆದರೆ ನಮ್ಮಲ್ಲಿ ಖಾತೆಯ ಹಂಚಿಕೆಯೋ ಮರುವಿಂಗಡಣೆಯೋ ಕುತೂಹಲ’ ನಾನು ವಿಷಯ ಬದಲಿಸಿದೆ.

‘ಶ್ರೀಮತಿ ಹೇಳ್ತಿದ್ರು, ನಿಮ್ಮ ಮನೆಯಲ್ಲೂ ಖಾತೆ ಬದಲಾವಣೆಯಂತೆ?’ ನನ್ನವಳು ಹೊಸ ಸುದ್ದಿ ಬಿತ್ತರಿಸಿದಳು.

‘ಹೌದು, ಜವಳಿ ಖಾತೆ ಹೊಸ ಸೇರ್ಪಡೆ- ವಾಷಿಂಗ್ ಮೆಷೀನ್ ಕೆಟ್ಟಿದೆ. ಬಟ್ಟೆ ಒಗೆಯೋದು, ಒಣಹಾಕೋದು ಎಲ್ಲಾ ನನ್ನ ತಲೆಗೇ’.

‘ನಮ್ಮ ಮನೆಯಲ್ಲೂ ಕೆಲಸದವಳು ಎರಡು ತಿಂಗಳು ರಜಾ. ಏನಪ್ಪಾ ಮಾಡೋದು ಅಂತ ಯೋಚಿಸ್ತಿದ್ದೆ, ಪರಿಹಾರ ಸಿಕ್ಕಿತು’.

ಮಾಮೂಲಿ ಕಾಫಿ ಕಂಠಿಯ ಪಾಲಾಗಿದ್ದರೆ, ಕಷಾಯದ ಕಹಿ ನನಗೆ ಸಿಕ್ಕಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.