ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೋಟೊ ಫಿನಿಶ್!

Last Updated 5 ನವೆಂಬರ್ 2020, 19:30 IST
ಅಕ್ಷರ ಗಾತ್ರ

‘ಇವತ್ತು ಹರಟೆಕಟ್ಟೆ ಮಿತ್ರರಿಗೆಲ್ಲ ನಂದೇ ಚಾ, ವಗ್ಗರಣಿ ಮಂಡಕ್ಕಿ... ಎಷ್ಟಾದ್ರು ತಿನ್ರಿ’ ಅಂದ ತೆಪರೇಸಿ. ಗುಡ್ಡೆಗೆ ಆಶ್ಚರ್ಯ ‘ಏನೋ ತೆಪರ, ಲಾಟ್ರಿ ಗೀಟ್ರಿ ಹೊಡೀತೇನೋ’ ಎಂದ.

‘ಒಂಥರ ಲಾಟ್ರಿನೇ ಅನ್ಕಾ... ‘ರೊಕ್ಕ ಅಂಡ್ ರೊಕ್ಕ ನಗರ’ಕ್ಕೆ ಹೋಗಿದ್ದೆ, ಮೂರೇ ದಿನದಲ್ಲಿ ಹತ್ತು ಸಾವಿರ ಕಲೆಕ್ಷನ್ ಆತು, ಎತ್ಕಂಡ್ ಬಂದೆ’ ಎಂದ.

‘ರೊಕ್ಕ ಅಂಡ್ ರೊಕ್ಕ ನಗರ... ಓ, ಆರ್.ಆರ್.ನಗರ ಬೈ ಎಲೆಕ್ಷನ್‍ಗೆ ಹೋಗಿದ್ದೆ ಅನ್ನು, ಕಿಲಾಡಿ ನೀನು’ ದುಬ್ಬೀರ ನಕ್ಕ.

‘ದೇಶದಾಗೆ ಈಗ ಎಲ್ಲಿ ನೋಡಿದ್ರು ಕುಸಿತದ್ದೇ ಸುದ್ದಿ. ಆರ್ಥಿಕತೆ ಕುಸಿತ, ಉದ್ಯೋಗ ಕುಸಿತ, ವ್ಯಾಪಾರ ಕುಸಿತ ಅಂತಾರೆ. ಆದ್ರೆ
ಆರ್.ಆರ್. ನಗರದಲ್ಲಿ ವೋಟಿಗೆ ಐದೈದು ಸಾವಿರ ಹಂಚಿದ್ರಪ. ಎಲ್ಲೇತಲೆ ಕುಸಿತ?’ ತೆಪರೇಸಿ ಪ್ರಶ್ನಿಸಿದ.

‘ಅದೇನರೆ ಇರ್‍ಲಿ, ನೀನು ಆರ್.ಆರ್. ನಗರದ ಬದ್ಲು ಅಮೆರಿಕಕ್ಕೆ ಹೋಗ್ಬೇಕಾಗಿತ್ತು. ಅಲ್ಲಿ ಟ್ರಂಪು, ಬೈಡನ್ನು ಡಾಲರ್‌ಗಟ್ಲೆ ರೊಕ್ಕ ಹಂಚಿದ್ರಂತೆ. ನೀನು ಸಂಪು ರೊಕ್ಕ ಮಾಡ್ಕಂಡ್ ಬರಬಹುದಿತ್ತಾ?’ ಗುಡ್ಡೆ ಸಲಹೆ ನೀಡಿದ.

‘ಅದೆಲ್ಲ ಅಷ್ಟು ಸುಲಭ ಅಲ್ಲ ಬಿಡಲೆ, ಅದಿರ್‍ಲಿ ಅಮೆರಿಕದಲ್ಲಿ ಯಾರು ಗೆದ್ರು? ಟ್ರಂಪು ಕೋರ್ಟಿಗೋಕ್ತೀನಿ ಅಂತಿದ್ರು?’

‘ಏನೋ ಗೊತ್ತಿಲ್ಲಪ, ಫೋಟೊ ಫಿನಿಶ್ ಅಂತಿದ್ರು...’

‘ಫೋಟೊ ಫಿನಿಶ್ ಅಂದ್ರೆ?’ ದುಬ್ಬೀರನಿಗೆ ಅರ್ಥವಾಗಲಿಲ್ಲ.

‘ಅದೂ ಗೊತ್ತಿಲ್ವ? ಫೋಟೊ ಫಿನಿಶ್ ಅಂದ್ರೆ ಗೆದ್ದೋರ್‍ದು ಫೋಟೊ... ಎಲ್ಲ ಕಡೆ ಫೋಟೊ ಹಾಕೋದು. ಸೋತೋರ್‍ದು ಫಿನಿಶ್... ಅಂದ್ರೆ ಕತೆ ಮುಗೀತು ಅಂತ ಅರ್ಥ’ ಗುಡ್ಡೆ ಬಿಡಿಸಿ ಹೇಳಿದ.

‘ಹಂಗೇನಿಲ್ಲ, ಅಕಸ್ಮಾತ್ ಟ್ರಂಪ್ ಸೋತ್ರೂ ಫಿನಿಶ್ ಏನಾಗಲ್ಲ. ಅವರೇ ಅಧಿಕಾರ ಹಿಡಿಯೋದು...’ ತೆಪರೇಸಿ ವಾದಿಸಿದ.

‘ಸೋತ್ರೂ ಅಧಿಕಾರ ಹಿಡೀತಾರಾ? ಹೆಂಗೆ?’

‘ಹೆಂಗೆ ಅಂದ್ರೆ ಆಪರೇಷನ್ ಮಾಡೋದು ಗೊತ್ತಿಲ್ವ? ಸ್ನೇಹಿತರಿಗೆ ನಾವು ಅಷ್ಟೂ ಹೇಳಿ ಕೊಟ್ಟಿರಲ್ವ?’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT