ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ: ಬಿಸಿ ಬ್ರೇಕ್‍ಫಾಸ್ಟ್

ಆನಂದ
Published 9 ಫೆಬ್ರುವರಿ 2024, 20:18 IST
Last Updated 9 ಫೆಬ್ರುವರಿ 2024, 20:18 IST
ಅಕ್ಷರ ಗಾತ್ರ

‘ಮಕ್ಕಳಿಗೂ ಶಾಸಕರಿಗೂ ಎಷ್ಟೊಂದು ಹೋಲಿಕೆಯಿದೆ ಅಲ್ಲವೇ?’ ಎಂದು ಮಡದಿ ಕೇಳಿದಳು. ನಾನು ಹೌಹಾರಿದೆ. ‘ಶಾಂತಂ ಪಾಪಂ. ಮಕ್ಕಳನ್ನು ದೇವರಿಗೆ ಹೋಲಿಸ್ತಾರೆ. ನೀನು ಅವರನ್ನು ಶಾಸಕರಿಗೆ ಹೋಲಿಸ್ತಿದೀಯಾ? ಅವರೇನು ತಪ್ಪು ಮಾಡಿದಾರೆ?’ ಎಂದು ಕೇಳಿದೆ.

‘ಅಯ್ಯೋ! ಬೇಜಾರು ಬೇಡ. ನಮ್ಮ ಖಾದರ್ ಸಾಹೇಬರ ಪ್ಲಾನ್ ಬಗ್ಗೆ ಓದಿದಾಗ ಆ ಪ್ರಶ್ನೆ ಹೊಳೀತು’ ಎಂದಾಗ ನನಗೆ ಗೊಂದಲವಾಯಿತು.

‘ಯಾವ ಖಾದರ್? ಏನು ಹೇಳ್ತಿದೀಯ?’

‘ವಿಧಾನಸಭಾ ಅಧ್ಯಕ್ಷರು. ಅವರ ಪ್ಲಾನ್ ಬಗ್ಗೆ ಇಲ್ಲಿದೆ ನೋಡಿ’ ಎಂದು ಪೇಪರ್ ಮುಂದೆ ಹಿಡಿದಳು.

ವಿಧಾನಸಭಾ ಅಧಿವೇಶನದ ಸಮಯದಲ್ಲಿ ಶಾಸಕರಿಗೆ ಭರ್ಜರಿ ಬ್ರೇಕ್‌ಫಾಸ್ಟ್ ಏರ್ಪಡಿಸಿರುವ ಬಗ್ಗೆ ಸುದ್ದಿ ಇತ್ತು. ವಿವಿಧ ಹೋಟೆಲ್‍ಗಳಿಂದ ವಿವಿಧ ಬಗೆಯ ತಿಂಡಿಗಳನ್ನು ತರಿಸುವ ಯೋಜನೆ ಅದು. ಅದನ್ನು ಓದಿ ನನ್ನ ಬಾಯಲ್ಲೂ ನೀರೂರಿ, ನಾನೂ ಶಾಸಕನಾಗಿದ್ದರೆ ಚೆನ್ನಿತ್ತು ಎಂದೆನಿಸಿತು. ‘ಭರ್ಜರಿ ಭತ್ಯೆಯ ಜತೆಗೆ ಭರ್ಜರಿ ಬ್ರೇಕ್‍ಫಾಸ್ಟ್ ಅದೂ ಉಚಿತವಾಗಿ! ಅಧಿವೇಶನ ಕಮ್ಸ್‌ ಲೇಟರ್’ ಎಂದೆ.

‘ಅಧಿವೇಶನಕ್ಕೆ ಬರಲಿ ಅಂತಾನೇ ಈ ಪ್ಲಾನ್‍ರೀ’ ಎಂದಾಗ ನಾನು ಹೌಹಾರಿದೆ.

‘ಹೌದೂರಿ, ಇದೊಂದು ಅಟ್ರಾಕ್ಷನ್ ಅವರನ್ನು ಸೆಳೆಯಲು. ಅನೇಕರು ಸದನಕ್ಕೆ ಬರೋದನ್ನು ತಪ್ಪಿಸಿಕೊಳ್ತಾರಂತೆ. ಒಳ್ಳೆ ನಾಸ್ಟಾ ಫ್ರೀ ಸಿಗುತ್ತೆ ಅಂತಿದ್ದರೆ ಎಲ್ಲರೂ ಬರಬಹುದು ಅಂತ ಖಾದರ್ ಸಾಹೇಬ್ರು ಪ್ಲಾನ್ ಮಾಡಿದ್ದಾರೆ’ ಎಂದಳು.

‘ಫ್ರೀ ಎಲ್ಲಿ ಬಂತು?’

‘ಶಾಸಕರೇನು ಬಿಲ್ ಕೊಡಬೇಕಿಲ್ಲವಂತೆ...’

‘ಆದರೆ ಅದನ್ನು ಸಪ್ಲೈ ಮಾಡಿದವರಿಗೆ ಕೊಡಬೇಕಲ್ಲವೆ. ಅದನ್ನು ನಾವು ಕೊಡ್ತೀವಿ. ನಮ್ಮ ತೆರಿಗೆ ಹಣದಿಂದ ತಾನೆ ಆ ಬಿಲ್ ಸಂದಾಯ ಆಗೋದು. ಅದಿರಲಿ ಇಲ್ಲಿ ಮಕ್ಕಳನ್ನು ಯಾಕೆ ಎಳೆದಿ ನೀನು?’ ಎಂದು ಕೇಳಿದೆ ಅರ್ಥವಾಗದೆ.

‘ಸಿಂಪಲ್, ಬಿಸಿಯೂಟ ಮಕ್ಕಳನ್ನು ಶಾಲೆಗೆ ಆಕರ್ಷಿಸೋದಿಲ್ಲವೇ?’ ಎಂದಾಗ ನಾನು ಮತ್ತೊಮ್ಮೆ ಹೌಹಾರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT