ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ‘ನಾನು’ ಅಧ್ಯಕ್ಷ!

ಚುರುಮುರಿ
Published 15 ಡಿಸೆಂಬರ್ 2023, 19:04 IST
Last Updated 15 ಡಿಸೆಂಬರ್ 2023, 19:04 IST
ಅಕ್ಷರ ಗಾತ್ರ

‘ಜೆಡಿಎಸ್‌ ರಾಷ್ಟ್ರ ಘಟಕಕ್ಕೆ ನಾನು ಅಧ್ಯಕ್ಷ...’- ಯಂಕ್ಟೇಶ ಮನೆ ಒಳಗೆ ಪ್ರವೇಶಿಸುವ ಮುನ್ನವೇ ಅಂಗಳದಿಂದ ಅವನ ಧ್ವನಿ ಅಪ್ಪಳಿಸಿತು.

‘ಏನಯ್ಯಾ ಅದು? ಅವರಿಗೆ ಬೇರೆ ಯಾರೂ ಸಿಗಲಿಲ್ವಾ, ನಿನ್ನನ್ನು ಅಧ್ಯಕ್ಷ ಮಾಡೋದಕ್ಕೆ?!’

‘ನಾನಲ್ಲ ಗುರುಗಳೇ... ಜೆಡಿಎಸ್‌ಗೆ ‘ನಾನು’ ರಾಷ್ಟ್ರ ಘಟಕದ ಅಧ್ಯಕ್ಷ. ಹಾಗಂತ ಇಬ್ರಾಹಿಂ ಸಾಹೇಬರು ಫರ್ಮಾನು ಹೊರಡಿಸಿದ್ದಾರೆ’.

‘ಅಲ್ಲಪ್ಪಾ... ಹಿಂದೆ ಕರಾವಳಿಯಲ್ಲಿ ಒಬ್ಬರು ನಾನು ರಾಜ್ಯ ಘಟಕದ ಅಧ್ಯಕ್ಷ ಎಂದು ಯಕ್ಷಗಾನ ಶೈಲಿಯಲ್ಲಿ ತಿರುಗಾಡುತ್ತಿದ್ರು. ಈಗ ಅವರ ಸುದ್ದಿಯೇ ಇಜ್ಜಿ. ಅವರ ಹಾದಿಯಲ್ಲೇ ನೀನೂ ಹೊರಟಿದ್ದೀಯಾ?’

‘ಗುರುಗಳೇ... ಟೀವಿಯಲ್ಲೂ ಬಂದಿದೆ. ಜೆಡಿಎಸ್‌ಗೆ ಕೇರಳದ ನಾನು ರಾಷ್ಟ್ರ ಘಟಕದ ಅಧ್ಯಕ್ಷ ಅಂತ’.

‘ನನ್ನ ಕರ್ಮ, ನಿನಗೆ ಕನ್ನಡ ಕಲಿಸಿದ್ನಲ್ಲಾ! ಅದು ನಾನು ಅಲ್ಲ... ನಾಣು! ಬಹುಶಃ ನಾರಾಯಣ ಅಂತ ಉದ್ದ ಹೆಸರು ಹೇಳಲು ಪುರಸತ್ತಿಲ್ಲದೆ ನಾಣು ಅಂತ ಇಟ್ಟಿರಬೇಕು. ಸರಿ, ಅದರಿಂದ ನಿನಗೇನು ತೊಂದರೆ?’

‘ತೊಂದರೆ ಏನಿಲ್ಲ.‌ ಈ ಕಡೆ ದೇವೇಗೌಡರು ರಾಷ್ಟ್ರ ಘಟಕದ ಅಧ್ಯಕ್ಷರಾಗಿರುವಾಗ ಅದೇ ಪಕ್ಷಕ್ಕೆ ಇನ್ನೊಬ್ಬರು ಅಧ್ಯಕ್ಷರು ಆಗೋದು ಹೇಗೆ?’

‘ಅದು ಸರಿಯೇ. ಈ ಆಯ್ಕೆ ಪ್ರಕ್ರಿಯೆ ಎಲ್ಲಿ ನಡೀತು?’

‘ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೀತು ಅಂತ ಪೇಪರಲ್ಲಿ ಬಂದಿದೆ. ಅಂದ್ರೆ ಗವರ್ನಮೆಂಟ್ ಹೋಟೆಲ್ ಅಲ್ಲ ಅಂತಾಯ್ತು. ಸಭೇಲಿ ಯಾರೆಲ್ಲ ಇದ್ರಂತೆ?’

‘ಇಬ್ರು ಮಾತ್ರ ಇದ್ರಂತೆ. ರಾಜ್ಯ ಘಟಕದ ಅಧ್ಯಕ್ಷರು ಮತ್ತು ರಾಷ್ಟ್ರ ಘಟಕದ ಅಧ್ಯಕ್ಷರು’.

‘ಅಂದ್ರೆ ರಾಜ್ಯ ಅಧ್ಯಕ್ಷರು, ರಾಷ್ಟ್ರ ಅಧ್ಯಕ್ಷರನ್ನು ನೇಮಿಸಿದ್ದಾರೆ ಅಂತಾಯ್ತು. ಹೊಸ ಪಕ್ಷಕ್ಕೆ ಹೊಸ ಐಡಿಯಾ!’

‘ಹೊಸ ಪಕ್ಷ ಅಲ್ಲ ಗುರುಗಳೇ. ಜೆಡಿಎಸ್ ಇರೋದು ಒಂದೇ ಪಕ್ಷ. ಅದಕ್ಕೆ ಇಬ್ಬಿಬ್ಬರು ರಾಜ್ಯ ಘಟಕದ ಅಧ್ಯಕ್ಷರು, ಇಬ್ಬಿಬ್ಬರು ರಾಷ್ಟ್ರ ಘಟಕದ ಅಧ್ಯಕ್ಷರು!

‘ಹೀಗಾದ್ರೆ ಜನರಿಗೆ ಕನ್‌ಫ್ಯೂಶನ್ನು ಜಾಸ್ತಿ ಆಗುತ್ತೆ. ಇಬ್ರಾಹಿಂ ಸಾಹೇಬರು ತಮ್ಮ ಪಕ್ಷಕ್ಕೆ ಹೊಸ ಹೆಸರು ಇಡಬೇಕು’.

‘ಏನಂತ ಇಡಬಹುದು ಗುರುಗಳೇ?’

‘ಜೆಡಿಎಸ್-ಐ ಅಂತ ಇಡಬಹುದು. ಐ ಅಂದ್ರೆ ಇಂಗ್ಲಿಷಲ್ಲಿ ಇಬ್ರಾಹಿಂ ಅಂತಲೂ ಆಗುತ್ತೆ, ನಾನು ಅಂತಲೂ ಆಗುತ್ತೆ. ಒಳ್ಳೇ ಸೆಕ್ಯುಲರ್ ಹೆಸರು’.

‘ಮುಂದೆ ಇವರಿಬ್ರಿಗೂ ಜಗಳ ಬಂದು ಪಕ್ಷ ಇಬ್ಭಾಗ ಆದ್ರೆ?’

‘ಆಗ ಜೆಡಿ-ಐಎಸ್ ಅಂತ ಒಂದು ಪಕ್ಷ, ಜೆಡಿ- ಐಎನ್ ಅಂತ ಇನ್ನೊಂದು ಪಕ್ಷ!’

‘ಪಕ್ಷಗಳ ಪೂರ್ತಿ ಹೆಸರು ಹೇಳಿ ಸಾರ್?’

‘ಜೆಡಿ-ಐಎಸ್ ಅಂದ್ರೆ ಜನತಾದಳ ಇಬ್ರಾಹಿಂ ಸಾಬ್ ಅಂತ. ಜೆಡಿ-ಐಎನ್ ಅಂದ್ರೆ ಇಬ್ರಾಹಿಂ ನಾಣು ಅಂತ. ಇಬ್ರೂ ರಾಷ್ಟ್ರ ಘಟಕದ ಅಧ್ಯಕ್ಷರು ಆಗಬಹುದು!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT