ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ನಮ್ಮ ತೊಕ್ಕು, ನಮ್ಮ ಹಕ್ಕು!

Published 17 ಫೆಬ್ರುವರಿ 2024, 0:30 IST
Last Updated 17 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ಮನೆಯಲ್ಲಿ ಬಿಗುವಿನ ವಾತಾವರಣದ ಮಧ್ಯೆ ಮೀಟಿಂಗ್ ನಡೆಯುತ್ತಿತ್ತು: ‘ಮನೆ ಆದಾಯದ ಹಂಚಿಕೆ ಸರಿಯಾಗಿ ಆಗ್ತಿಲ್ಲ’ ಆಕ್ಷೇಪಿಸಿದರು ಪದ್ದಮ್ಮ.

‘ಹೌದು, ನನ್ ಪಾಕೆಟ್‌ಮನಿ ಎಸ್‍ಎಸ್‍ಎಲ್‍ಸಿಲಿ ಇದ್ದಷ್ಟೇ ಈಗ್ಲೂ ಇದೆ. ಸರ್ಕಾರನೇ ಯುವನಿಧಿ ಕೊಡುತ್ತೆ. ಅಪ್ಪ ಆಗಿ ಇನ್ನೂ ನನ್ ಪಾಕೆಟ್‌ಮನಿ ರೈಸ್ ಮಾಡಿಲ್ಲ ಅಂದ್ರೆ ಶೇಮ್ ಅನ್ಸುತ್ತೆ’ ಕೂಗಿದ ಕುಮಾರ ಕಂಠೀರವ.

‘ಹೌದ್ಹೌದು, ನನಗೆ ಕೊಡ್ತಿರೋದೂ ಅಷ್ಟಕ್ಕಷ್ಟೇ! ಮೇಕ‍ಪ್‌ಗಾದ್ರೆ ಲಾಲಿಪಪ್‌ಗಿಲ್ಲ, ಲಾಲಿಪಪ್‌ಗಾದ್ರೆ ಕಡ್ಲೆಪಪ್ಪಿಗಿಲ್ಲ ಅನ್ನೋ ಹಾಗಾಗಿದೆ’ ಮಗಳು ಪಮ್ಮಿನೂ ಕೊಯ್ ಅಂದಳು.

‘ಹಾಗೆಲ್ಲಾ ಏನಿಲ್ಲ, ನಾಲ್ಕು ವರ್ಷದ ಕೆಳಗೆ ಏನು ಒಪ್ಪಂದ ಆಗಿತ್ತೋ ಅದೇ ಥರ ಎಲ್ರಿಗೂ ಕೊಡ್ತಿದೀನಿ’.

‘ನಿಮ್ ಸಂಬಳ ಜಾಸ್ತಿ ಆಗಿದೆ. ಊರಲ್ಲಿ ಹುಣಿಸೇಹಣ್ಣು, ನೆಲ್ಲಿಕಾಯ್ ಮಾರಿದ್ ದುಡ್ಡೂ ನೀವೇ ತಗೋತೀರ, ಗುಜರಿ ಐಟಮ್ ಮಾರಿದ್ ಇನ್‍ಕಂನಲ್ಲೂ ನಮಗೆ ಪಾಲು ಕೊಡಲ್ಲ, ಷೇರು, ಸ್ಟಾಕು ಎಲ್ಲಾ ಇನ್ಕಮ್ಮೂ ಖೋತಾ! ನಮಗೆ ನ್ಯಾಯ ಬೇಕು’ ಅಂದ್ರು ಪದ್ದಮ್ಮ.

‘ಹೌದು! ನಮ್ಮ ಹುಣಿಸೇತೊಕ್ಕು, ನಮ್ಮ ಹಕ್ಕು’ ಎಂದು ಮೂವರೂ ಕೂಗಿದರು. ‘ನೋಡಿ, ನೀವು ಕೇಳಿದಂಗೆಲ್ಲ ಕೊಡಕ್ಕಾಗಲ್ಲ. ನಮ್ ಚಿಕ್ಕಪ್ಪನ ಮಕ್ಕಳ ಜವಾಬ್ದಾರಿನೂ ನನ್ ಮೇಲಿದೆ ಅನ್ನೋದು ಜ್ಞಾಪಕ ಇರ್‍ಲಿ’.

‘ಆ ಉತ್ತರೆಗೂ, ಬಿಹಾರಿಗೂ ನೀವ್ಯಾಕ್ ನಮ್ ದುಡ್ಡು ಕೊಡ್ಬೇಕು?’

‘ಒಕ್ಕುಟುಂಬ ಅಂದ್ಮೇಲೆ ಎಲ್ಲರ ಯೋಗಕ್ಷೇಮನೂ ನೋಡ್ಬೇಕಲ್ವಾ? ನೀವು ಇದೆಲ್ಲಾ ಯೋಚ್ನೆ ಮಾಡ್ದೆ ದೊಡ್ಡಜ್ಜನ್ ಕೈಲಿ ನನ್ನ ಬಗ್ಗೆ ಇಲ್ಲದ್ದೆಲ್ಲಾ ಹೇಳುಸ್ತೀರಿ. ಆ್ಯಕ್ಚುಯಲೀ ಅವರನ್ನ ಮಧ್ಯಪಟ್ಟಣದಿಂದ ಕರ್ಕೊಂಡ್ ಬಂದು ಇಲ್ಲಿ ಇಟ್ಕೊಂಡೋನು ನಾನು’.

‘ನೀವು ಅಧಿಕಾರ ಚಲಾಯ್ಸಕ್ಕೆ ಆಪರೇಷನ್ನಿಂದ ಹಿಡಿದು ಎಲ್ಲಾ ಮಂಗಾಟ ಆಡ್ದಾಗ ಅಜ್ಜ ನೋಡ್ಕೊಂಡು ಸುಮ್ನೆ ಇರ್ಲಿಲ್ವಾ? ಈಗ ನಮಗೆ ಬಹುಮತ ಇದೆ. ನಾವು ಹೇಳುಸ್ತೀವಿ. ಕಮಲದ ಗವುಸು, ಕೈ ಬಿಡಿಸುತ್ತೆ ಗ್ಯಾರಂಟಿ ಬಸ್ಸು... ಪ್ರಿನ್ಸಿಪಾಲ್ರು ಅವರೇ, ಸಿಲಬಸ್ ಚೇಂಜ್ ಅಷ್ಟೇ!’ ನಕ್ಕರು ಪದ್ದಮ್ಮ. ಪರ್ಮೇಶಿ ಮುಖ ಹಿಂಡಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT