ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಕೊರೊನಾ ಕ್ಲಾಸ್

Last Updated 7 ಜನವರಿ 2021, 18:58 IST
ಅಕ್ಷರ ಗಾತ್ರ

‘ಡ್ಯಾಡಿ, ಮಕ್ಕಳನ್ನು ಕ್ಲಾಸ್ ರೂಮಿಗೆ ಸೇರಿಸದೆ, ಕಾಂಪೌಂಡಿನಲ್ಲೇ ಕೂರಿಸಿ ಪಾಠ ಮಾಡಿದ್ರು...’ ಮೊದಲ ದಿನದ ಶಾಲೆ ಮುಗಿಸಿ ಬಂದ ಪಮ್ಮಿ ಹೇಳಿದಳು.

‘ವಿದ್ಯಾಗಮ ಅಂದ್ರೆ ಹಾಗೇ, ಶಾಲಾ ಆವರಣದಲ್ಲಿ ಪಾಠ ಹೇಳಬೇಕು’ ಅಂದ ಶಂಕ್ರಿ.

‘ಕ್ಲಾಸ್ ರೂಂಗೆ ಹೋಗ್ತೀವಿ ಅಂದರೂ ಟೀಚರ್ ಬಿಡಲಿಲ್ಲ, ಕ್ಲಾಸ್ ರೂಂ ಒಳಗೆ ಕೊರೊನಾ ಅವಿತುಕೊಂಡಿದೆಯೇನೋ...’ ಪಮ್ಮಿಗೆ ಅನುಮಾನ.

‘ಇರಬಹುದೇನೋ ಅದಕ್ಕೇ ಒಳಗೆ ಸೇರಿಸಿಲ್ಲ’ ಎಂದ ಸುಮಿ, ‘ಇವತ್ತು ಕನ್ನಡ ಸಬ್ಜೆಕ್ಟ್‌ನಲ್ಲಿ ಯಾವ ಲೆಸನ್ ಮಾಡಿದ್ರು?’ ಕೇಳಿದಳು.

‘ಕರೊನ, ಕೊರೋನ, ಕೊರನಾ, ಕುರೊನ ಅಂತೆಲ್ಲಾ ತಪ್ಪಾಗಿ ಬರೆಯಬಾರದು, ‘ಕೊರೊನಾ’ ಅಂತ ಸ್ಪೆಲ್ಲಿಂಗ್ ಬರೆಯಬೇಕು ಎಂದು ಭಾಷಾಜ್ಞಾನ ಕಲಿಸಿದರು’.

‘ಇಂಗ್ಲಿಷ್ ಸಬ್ಜೆಕ್ಟ್‌ನಲ್ಲೂ ಕೊರೊನಾ ಸ್ಪೆಲ್ಲಿಂಗ್ ಬರೆಸಿದ್ರಾ?’ ಶಂಕ್ರಿ ಕೇಳಿದ.

‘ಇಲ್ಲಾ ಡ್ಯಾಡಿ, ಕೊರೊನಾ, ಕೋವಿಡ್, ಸ್ಯಾನಿಟೈಸರ್, ಕೀಪ್ ಡಿಸ್ಟೆನ್ಸ್, ವೈರಸ್, ಕ್ವಾರಂಟೈನ್ ವಾರ್ಡ್‌ಗಳ ಡಿಕ್ಟೇಷನ್ ಬರೆಸಿದರು. ನಾನು ಎಲ್ಲವನ್ನೂ ಕರೆಕ್ಟಾಗಿ ಬರೆದೆ. ಟೀಚರ್ ವೆರಿಗುಡ್ ಅಂದರು...’ ಪಮ್ಮಿ ಖುಷಿಪಟ್ಟಳು.

‘ವೆರಿಗುಡ್, ಸೈನ್ಸ್‌ನಲ್ಲಿ ಯಾವ ಪಾಠ ಮಾಡಿದ್ರು?’

‘ಕೊರೊನಾ ವೈರಸ್ ಚಿತ್ರ ಬರೆದು, ಅದರ ಭಾಗಗಳನ್ನು ಗುರುತಿಸಿದರು. ವೈರಸ್ ಚಿತ್ರ ಬರೆದು ತೋರಿಸಲು ನಮಗೂ ಹೇಳಿದರು’.

‘ಸಮಾಜ ವಿಷಯದಲ್ಲಿ ಯಾವ ಲೆಸನ್ ಇತ್ತು?’ ಸುಮಿ ಕೇಳಿದಳು.

‘ಕೊರೊನಾ ವೈರಸ್ ಎಲ್ಲಿ ಹುಟ್ಟಿತು, ಎಲ್ಲೆಲ್ಲಿ, ಹೇಗ್ಹೇಗೆ ಹರಡಿ ವಿಶ್ವವಿಖ್ಯಾತಿ ಗಳಿಸಿತು ಅಂತ ಸೋಶಿಯಲ್ ಟೀಚರ್ ಕೊರೊನಾದ ಇತಿಹಾಸ ಹೇಳಿದ್ರು ಮಮ್ಮಿ’.

‘ಟೀಚರ್ ಹೇಳೋ ಪಾಠಗಳನ್ನ ಗಮನವಿಟ್ಟು ಕೇಳು. ಈ ಸಾರಿ ಪರೀಕ್ಷೆಯಲ್ಲಿ ಕೊರೊನಾ ಬಗ್ಗೆ ಜಾಸ್ತಿ ಕ್ವಶ್ಚನ್ಸ್ ಬರಬಹುದು, ಚೆನ್ನಾಗಿ ಓದಿ ಒಳ್ಳೆ ಮಾರ್ಕ್ಸ್ ತಗೊಬೇಕು’ ಎಂದಳು ಸುಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT