‘ಫ್ರೆಂಡ್ಸ್ ಜೊತೆ ಪರಪ್ಪನ ಅಗ್ರಹಾರ ಜೈಲಿಗೆ ಹೋಗ್ತಿದ್ದೀವಿ, ನೀವೂ ಬರ್ತೀರೇನ್ರೀ?’ ಎನ್ನುತ್ತಾ ಪಕ್ಕದ ಮನೆ ಪದ್ಮಾ ಬಂದಳು.
‘ಜೈಲಿಗೆ ಹೋಗುವಂಥಾ ಅಪರಾಧ ನೀವೇನು ಮಾಡಿದ್ದೀರಿ?!’ ಸುಮಿ ಕೇಳಿದಳು.
‘ಹಾಗೇನಿಲ್ಲಾರೀ, ಜೈಲಿಗೆ ಟೂರ್ ಹೋಗ್ತಿದ್ದೀವಿ. ಪರಪ್ಪನ ಜೈಲು ಪ್ರವಾಸತಾಣ ಆಗಿದೆಯಂತೆ. ನಿತ್ಯ ನೂರಾರು ಅಭಿಮಾನಿಗಳು ಬರ್ತಾರಂತೆ’.
‘ಜೈಲಿನ ನರಕ ನೋಡಲು ಹೋಗ್ಬೇಕೇನ್ರೀ?’
‘ನಾನೂ ಹಾಗೇ ಅಂದುಕೊಂಡಿದ್ದೆ. ಜೈಲು ನರಕ ಅಲ್ವಂತೆ, ಅಲ್ಲಿ ಎಲ್ಲಾ ಸೌಲಭ್ಯ ಇವೆಯಂತೆ. ಆದರೆ ಸ್ಟಾರ್ ಹೋಟೆಲ್‍ಗಿಂತ ದುಬಾರಿ ಅಂತೆ. ನಾನು ಒಮ್ಮೆಯೂ ಜೈಲಿಗೆ ಹೋಗಿಲ್ಲ, ನೋಡಿಕೊಂಡು ಬರೋಣ ಅಂತ ಹೊರಟಿದ್ದೀವಿ’.
‘ಹೋದವರನ್ನೆಲ್ಲಾ ಜೈಲಿನ ಒಳಗೆ ಬಿಡೋಲ್ಲವಂತೆ...’
‘ಹೌದೂರೀ, ಪ್ರವೇಶ ಶುಲ್ಕ ಪಡೆದು ಒಳಗೆ ಬಿಡುವ ವ್ಯವಸ್ಥೆಯನ್ನಾದರೂ ಮಾಡಿದರೆ ಸರ್ಕಾರಕ್ಕೆ ವರಮಾನವೂ ಬರುತ್ತದೆ, ಪ್ರವಾಸಿ
ತಾಣವಾಗಿ ಜೈಲು ಪ್ರಸಿದ್ಧಿಯೂ ಆಗುತ್ತದೆ. ದಿನನಿತ್ಯ ಸಿನಿಮಾ ನಟನಟಿಯರು ಜೈಲು ಕಡೆ ಬರ್ತಿದ್ದಾರಂತೆ. ನಾವೂ ಅವರನ್ನು ಮಾತನಾಡಿಸಿ ಪರಿಚಯ ಮಾಡಿಕೊಂಡು, ಸೆಲ್ಫಿ ತಗೊಂಡು ಬರ್ತೀವಿ’.
‘ನಾನು ಬರೊಲ್ಲ... ಅಂದಹಾಗೆ, ನಿಮ್ಮ ಮಗನ ಬರ್ತ್‌ಡೇ ಎಲ್ಲಿ ಆಚರಿಸ್ತೀರಿ?’
‘ಹೋದ ವರ್ಷ ಅನಾಥಾಶ್ರಮದಲ್ಲಿ ಆಚರಿಸಿದ್ವಿ, ಅದರ ಹಿಂದಿನ ವರ್ಷ ರೆಸಾರ್ಟ್
ನಲ್ಲಿ ಸೆಲೆಬ್ರೇಟ್ ಮಾಡಿದ್ವಿ, ಈ ವರ್ಷ ಜೈಲಿನಲ್ಲಿ ಆಚರಿಸೋಣ ಅಂತ ಮಗ ಆಸೆಪಡ್ತಿದ್ದಾನೆ... ನಿಮ್ಮ ಗಂಡನಿಗೆ ಜೈಲು ಅಧಿಕಾರಿಗಳು ಪರಿಚಯ ಇದ್ದಾರೆ, ಮಗನ ಬರ್ತ್‌ಡೇ ಆಚರಿಸಲು ಜೈಲಿನಲ್ಲಿ ಪರ್ಮಿಷನ್ ಕೊಡಿಸಿ ಅಂತ ಕೇಳಲು ಬಂದೆ’.
‘ಜೈಲಿನಲ್ಲೇ ಯಾಕ್ರೀ?’
‘ಜೈಲಿನಲ್ಲಿ ಬರ್ತ್‌ಡೇ ಆಚರಿಸಿದರೆ ಪೇಪರ್, ಟಿ.ವಿ.ಯವರು ಸುದ್ದಿ ಮಾಡ್ತಾರೆ, ನಾವೂ ಫೇಮಸ್ ಆಗ್ತೀವಿ. ನಿಮ್ಮ ಗಂಡನಿಗೆ ಹೇಳಿ ಪರ್ಮಿಷನ್ ಕೊಡಿಸಿ...’ ಎಂದು ಹೇಳಿ ಪದ್ಮಾ ಹೊರಟಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.