ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಬ್ರಹ್ಮಾಂಡ ಉಸ್ತುವಾರಿ!

Last Updated 4 ಜೂನ್ 2021, 19:31 IST
ಅಕ್ಷರ ಗಾತ್ರ

‘ಹಲೋ... ಸ್ವಾಮಿಗಳೇ, ನೀವು ಈ ಕೊರೊನಾನ ದೇಶ ಬಿಟ್ಟು ಓಡಿಸ್ತೀನಿ ಅಂತ ಹೇಳಿದ್ದು ಕೇಳಿದೆ. ಹೆಂಗೆ, ಎಲ್ಲಿಗೆ ಓಡಿಸ್ತೀರಿ?’

‘ಲೋ ಮುಂಡೇದೆ, ನಾನು ಮಠದ ಸ್ವಾಮಿ ಅಲ್ಲ, ತ್ರಿಕಾಲ ಜ್ಞಾನಿ. ಬ್ರಹ್ಮಾಂಡವೇ ನನ್ನ ಕೈಲಿದೆ. ಯಃಕಶ್ಚಿತ್ ಯಾರು ನೀನು?’

‘ನಾನು ತೆಪರೇಸಿ ಅಂತ. ಅಲ್ಲ, ಅದೇನೋ ಕೋನಮಾರಮ್ಮ ಅಂತ ಮಾಡಿ ಅದಕ್ಕೆ ಮೊಸರನ್ನ ತಿನ್ನಿಸಿ ಓಡಿಸ್ತೀನಿ ಅಂತಿದ್ರಿ... ಎಲ್ಲಿಗೆ ಓಡಿಸ್ತೀರಿ?’

‘ಮುಂಡಾಮೋಚ್ತು... ದೇಶ ಅಲ್ಲ, ಇಡೀ ಬ್ರಹ್ಮಾಂಡ ಬಿಟ್ಟು ಓಡಿಸ್ತೀನಿ. ನನ್ನ ಶಕ್ತಿ ನಿಂಗೊತ್ತಿಲ್ಲ...’

‘ಅಲ್ಲ... ಓಡಿಸೋದಿರ‍್ಲಿ, ನಿಮಗೆ ಅಷ್ಟು ಶಕ್ತಿ ಇದ್ದಿದ್ರೆ ಅದು ಬರದಂಗೇ ತಡೀಬಹುದಿತ್ತಲ್ಲ?’

ಗುರೂಜಿ ತಡವರಿಸಿದರು, ‘ಅದು ವೇಷ ಬದಲಿಸಿ ಬಂದರೆ ಯಾರಿಗೆ ಗೊತ್ತಾಗುತ್ತೆ?’

‘ಅಲ್ಲ, ನೀವು ತ್ರಿಕಾಲ ಜ್ಞಾನಿ ಅಂತೀರಿ. ಎಲ್ಲ ಕಾಲದಲ್ಲೂ ನೀವು ಎಚ್ಚರ ಇರಲ್ವ? ಹೋಗ್ಲಿ ಬಿಡಿ, ಇಲ್ಲೊಬ್ಬ ಸ್ವಾಮಿಗಳು ಭವಿಷ್ಯ ನುಡಿದಿದ್ದಾರೆ. ದೊಡ್ಡ ದೊಡ್ಡ ತಲೆಗಳು ಉರುಳ್ತಾವಂತೆ?’

‘ಅದನ್ನ ಅವರ ಬಳಿಯೇ ಕೇಳು. ನಾನು ಬ್ರಹ್ಮಾಂಡ ಉಸ್ತುವಾರಿ...’

‘ನಿಮ್ ತಲೆ, ತ್ರಿಕಾಲ ಜ್ಞಾನಿ, ಬ್ರಹ್ಮಾಂಡ ಉಸ್ತುವಾರಿ, ಬದ್ನೇಕಾಯಿ ಅಂತೀರಿ. ಎಲ್ಲ ಗೊತ್ತಿದ್ರೆ ಇಂಥದ್ದೊಂದು ರೋಗ ಬರ್ತತಿ ಅಂತ ನಾಲ್ಕು ವರ್ಷ ಮೊದ್ಲೇ ಹೇಳೋಕೆ ಏನಾಗಿತ್ತು ನಿಮಗೆ?’

‘ಲೋ ಮೂರ್ಖ, ಹೀಗೆಲ್ಲ ಮಾತಾಡಿದ್ರೆ ನಿನ್ನ ತಲೆನೇ ಉರುಳುತ್ತೆ ನೋಡ್ತಿರು...’ ಗುರೂಜಿ ಗರಂ ಆದರು.

‘ಏನು? ತಲೆ ಉರುಳಿಸ್ತೀರಾ? ನಂಗೆ ತಲೆನೇ ಇಲ್ಲಪ್ಪ, ಏನು ಉರುಳಿಸಿ ಉಪ್ಪಿನಕಾಯಿ ಹಾಕ್ತೀರಿ?’ ತೆಪರೇಸಿಯೂ ರಾಂಗಾದ. ಗುರೂಜಿ ಫೋನ್ ಕಟ್ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT