ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ರೊಕ್ಕದ ಬೆಳೆ ತರಬೇತಿ

Last Updated 14 ಮಾರ್ಚ್ 2021, 19:30 IST
ಅಕ್ಷರ ಗಾತ್ರ

‘ಹೊಸಾ ವರ್ಷಕ್ಕೆ ನನಗ ಕ್ಯಾಲ್ಕುಲೇಟರ್ ಕೊಡಿಸು ಅಂತ ಅವತ್ತಿಂದ ಕೇಳಿದೆ, ನೀ ಕೊಡಿಸಲಿಲ್ಲ. ಲೆಕ್ಕ ಮಾಡಕ್ಕೆ ನನಗೆ ಎಷ್ಟ್ ತ್ರಾಸ್ ಆಗೈತಿ’ ಬೆಕ್ಕಣ್ಣ ಗುರುಗುಡುತ್ತಲೇ ಇತ್ತು.

‘ನಿನ್ನದೇನ್ ಲೆಕ್ಕ ಅದಾವ್ ಹೇಳಲೇ... ನಾನೇ ಮಾಡ್ತೀನಿ’ ಎಂದೆ. ‘ಹಂಗಾರೆ ಒಂದೇ ಸೆಕೆಂಡಿನಾಗೆ ಹೇಳು... ಹನ್ನೆರಡು ಲಕ್ಷ ಕೋಟಿ ರೂಪಾಯಿ ಅಂದರ ಹನ್ನೆರಡರ ಮುಂದೆ ಎಷ್ಟ್ ಸೊನ್ನೆ ಬರೀಬಕು’ ಎಂದು ಕ್ವಿಜ್ ಪ್ರಶ್ನೆ ಹಾಕಿತು.

ನಾನು ಗಾಬರಿಗೊಂಡು ಹಾರಿಬಿದ್ದೆ. ತಿಂಗಳ ಕೊನೆಯಲ್ಲಿ ಅಕೌಂಟಿನಲ್ಲಿ ಹನ್ನೆರಡು ನೂರು ರೂಪಾಯಿ ಉಳಿದರೆ ಹೆಚ್ಚು, ಅಂತಾದ್ರಲ್ಲಿ ಹನ್ನೆರಡು ಲಕ್ಷ ಕೋಟಿ ರೂಪಾಯಿ ಎಂದರೆ... ‘ಮೆತ್ತಗೆ ಮಾತಾಡಲೇ... ಐಟಿ ಮಂದಿ ಕಿವಿಗೆ ಬಿತ್ತು ಅಂದರ ನಾ ಅಷ್ಟಕೊಂದ್ ರೊಕ್ಕ ಇಟ್ಟೀನಂತ ಮನಿ ಮ್ಯಾಲ ರೈಡ್ ಮಾಡ್ತಾರ’ ಎಂದೆ.

ಬೆಕ್ಕಣ್ಣ ಪಕ್ಕೆ ಹಿಡಿದುಕೊಂಡು ಪಕಪಕನೆ ನಕ್ಕಿತು. ‘ಹನ್ನೆರಡು ಲಕ್ಷ ಕೋಟಿ ಅಂದ್ರ ಹನ್ನೆರಡರ ಮುಂದೆ ಎಷ್ಟ್ ಸೊನ್ನಿ ಅಂತ್ಲೇ ನಿನಗ ಗೊತ್ತಿಲ್ಲ... ಹಳೇ ಪಾಪರ್ಚೀಟಿ ನೀನು. ನಿನ್ನಂಥೋರ ಮನಿ ಮ್ಯಾಗ ಎದಕ್ಕ ದಾಳಿ ಮಾಡತಾರ. ಹೋದ ವರ್ಷ ಕೊರೊನಾ ಕಾಲದಾಗೆ ಎಲ್ಲಾರೂ ದಿವಾಳಿ ಎದ್ದಾರ. ಅಂಥದ್ರಾಗೆ ನಮ್ಮ ಅದಾನಿ ಮಾಮನ ಆಸ್ತಿ ಐವತ್ತು ಪರ್ಸೆಂಟ್ ಹೆಚ್ಚಾಗೈತಂತ. ಹನ್ನೆರಡು ಲಕ್ಷ ಕೋಟಿ ರೂಪಾಯಿ ರೊಕ್ಕ ಗಳಿಸ್ಯಾನಂತ. ಹಿಂಗ ರೊಕ್ಕದ ಬೆಳಿ ಡಬ್ಬಲ್, ಟ್ರಿಪ್ಪಲ್ ಆಗತದ ಅಂದ್ರ ಅದು ನಾಟಿ ಬೆಳಿ ಅಂತ್ಲೂ ಅಲ್ಲ... ಹೈಬ್ರಿಡ್ ಇರಬಕು’.

‘ನಮ್ ರೈತ್ರು ಯಾವ ಬೆಳೀನೂ ಕೈಗೇ ಹತ್ತಂಗಿಲ್ಲಂತ ಸುಮ್ನೇ ಕುಂತು ಅಳತಾರ. ದಿಲ್ಲೀವಳಗ ಕೂತು ಪ್ರತಿಭಟಿಸೂದು ಕೈಬಿಟ್ಟು, ಕೃಷಿ ಕಾಯಿದೆ ಒಪ್ಪಿಗೊಂಡು, ರೊಕ್ಕದ ಬೆಳಿ ಹೆಂಗ ಡಬ್ಬಲ್ ಮಾಡಬಕು ಅಂತ ಅದಾನಿ ಮಾಮನ ಹತ್ರ ಟ್ರೈನಿಂಗ್ ತಗಳೂದು ಭಾಳ ಚಲೋ ಅನ್ನಿಸ್ತದ’ ಎಂದು ಘನಗಂಭೀರವಾಗಿ ವಾದ ಮಂಡಿಸಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT