ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರ ಪ್ರಸಂಗಿಗಳು!

Last Updated 9 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

‘ಒಲಿಂಪಿಕ್ಸಲ್ಲಿ ನೀರಜ್ ಚಿನ್ನ ಗೆದ್ದುದ್ಕೆ ಮೋದಿ ಮಾರ್ಗದರ್ಶನವೇ ಕಾರಣ ಅಂದದೆ ಸೋನೆವಾಲು. ಶಾಸಕರಿಗೂ ಮಾರ್ಗದರ್ಶನ ಕೊಡಬೌದಲ್ಲವ್ರಾ?’ ಅಂತ ಕೇಳಿದೆ.

‘ಬಡ್ಡೆತ್ತುದೇ, ಒಲಿಂಪಿಕ್ಸಲ್ಲಿ ಆ ಹುಡ್ಲೇನೋ ಮೆಹನತ್ತು ಮಾಡಿ ಗೆದ್ದವೆ. ಇಲ್ಲಿ ನೋಡಿದ್ರೆ ಪಿಂಚಣಿ ತಗಬೇಕಾದವೆಲ್ಲ ಖಾತೆಗೆ ಕ್ಯಾತೆ ಮಾಡ್ತಾವೆ! ಇಂತೋರಿಗೆ ಮೋದಿ ಏನು ಹೇಳಾತು?’ ತುರೇಮಣೆ ಹೇಳಿದರು.

‘ತ್ಯಾಗಜೀವಿಗಳಿಗೆಲ್ಲಾ ಭಾರೀ ವಜನ್ ಇರೋ ‘ಎ’ ಗ್ರೇಡ್ ಖಾತೆನೇ ಬೇಕಂತೆ! ಇನ್ನೊಬ್ರು ಖಾತೆ ಬದ್ಲಾಸದಿದ್ರೆ ರಾಜೀನಾಮೆ ಕೊಟ್ಟಾರಂತೆ!’ ಅಂತು ಚಂದ್ರು.

‘ಸಂಘ ನಿಷ್ಠರು, ವಲಸಿಗರು, ಪಕ್ಷ ನಿಷ್ಠರು, ವ್ಯಕ್ತಿ ನಿಷ್ಠರು, ಶಕ್ತಿ ನಿಷ್ಠರು, ಅಧಿಕಾರ ನಿಷ್ಠರು, ಅನಿಷ್ಠರುಗಳಿಗೆಲ್ಲಾ ವಿತ್ತಭ್ರಮೆಯಾಗ್ಯದೆ! ಕ್ಷೇತ್ರದೇಲಿ ಆಡಳಿತ ದುರಾಡಳಿತವಾಗ್ಯದೆ, ರೋಡೆಲ್ಲ ಕೆಟ್ಟು ಕುಲಾಕರ್ಮಾಗಿದ್ರೂ ಗ್ಯಾನವೇ ಇಲ್ಲ!’ ಯಂಟಪ್ಪಣ್ಣ ಬುಸುಗರೀತು.

‘ಸಾವ್ಕಾರ‍್ರು, ಶೆಟ್ರು ಯಾಕೋ ಮುಕ್ಕುರಿತಾವ್ರೆ. ಅತೃಪ್ತರು ಜೊತೆಗೆ ಸೇರಿಕ್ಯಂಡು ಬಸಣ್ಣನಿಗೆ ಮುಳ್ಳು ಮುರಿದಾರಾ ಅಂತ!’ ನನ್ನ ಅನುಮಾನ ಹೇಳಿದೆ.

‘ನೋಡ್ಲಾ ಹೈವಾನ್, ಇವೆಲ್ಲಾ ರಂಗದ ಕುಣಿತಾ ಇದ್ದುದ್ದೇ. ನಮ್ಮೂರಗೆ ನಾಟಕ ಆಡುವಾಗ ದುಡ್ಡಸ್ಥರೆಲ್ಲಾ ‘ನಾನು ಜಾಸ್ತಿ ದುಡ್ಡು ಕೊಟ್ಟಿವ್ನಿ, ನನಗೆ ಅರ್ಜುನನ ಪಾತ್ರವೇ ಬೇಕು’, ‘ನಾನೇನು ಹುಣಸೆ ಬಿತ್ತ ಕೊಟ್ಟಿವ್ನಾ? ನನಗೆ ಕೃಷ್ಣನ ಪಾತ್ರ ಕೊಡಲೇಬೇಕು!’, ‘ನನಗೆ ಮಂಡ್ಯೇದ ವೀರೋವಿನ್ ಜೊತೆಗೆ ಒಂದು ಡ್ಯಾನ್ಸ್ ಬೇಕು. ದುಡ್ಡು ಏಟಾದ್ರೂ ಆಗ್ಲಿ!’ ಅಂತ ಯೇಗ-ಯೇಗ್ತೆ ಮೀರಿ ಮಾತಾಡತಿರಲಿಲ್ಲವ್ಲಾ?’ ತುರೇಮಣೆ ಕೇಳಿದರು.

‘ಒಬ್ಬರು ತ್ಯಾಗಜೀವಿ ಮಾತ್ರ ‘ನಿಮ್ಮ ತ್ಯಾಗದ ಕತೆಯ ಇನ್ನೂ ಎಷ್ಟು ದಿನ ಹೇಳ್ತೀರಯ್ಯಾ! ಪಕ್ಸಕ್ಕೇನು ಕೊಡುಗೆ ಕೊಟ್ಟೀದೀರ‍್ಲಾ?’ ಅಂತ ಸತ್ಯ ಹೇಳ್ಯವರೆ!’ ಅಂತಂದೆ.

‘ಋಷಿಕೇಶದ ಮೋದಿ ಗುರುಗಳು, ‘ವೃತ್ತಿಪರ ನಿರಾಶಾವಾದಿಗಳು ಎಲ್ಲಾ ಕಡೆ ಇರತರೆ’ ಅಂತ ಹೇಳಿದ್ರಲ್ಲ! ಅವರೆಲ್ಲ ಕರ್ನಾಟಕದಲ್ಲೇ ಬೇರು ಬುಟ್ಟವರೆ ಕಯ್ಯಾ!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT