ಶುಕ್ರವಾರ, ಫೆಬ್ರವರಿ 26, 2021
31 °C

(ಅನ್)ಹ್ಯಾಪಿ ಹಿರಿಯರ ದಿನ!

ಪ್ರೊ. ಎಸ್.ಬಿ. ರಂಗನಾಥ್ Updated:

ಅಕ್ಷರ ಗಾತ್ರ : | |

ಮೊಮ್ಮಗಳು ‘ತಾತಾ, ಹ್ಯಾಪಿ ಎಲ್ಡರ್ಸ್ ಡೇ’ ಅಂದಾಗ, ನಿವೃತ್ತ (ಮರೆಗುಳಿ) ಪ್ರೊಫೆಸರ್‌ ರಂಗಣ್ಣನವರಿಗೆ, ಮಿತ್ರ ಗುಂಡಣ್ಣ ಅಂದು ವಿಶ್ವ ಹಿರಿಯರ ದಿನಾಚರಣೆ ಭಾಷಣ ಮಾಡಲು ಕರೆದದ್ದು ನೆನಪಾಯಿತು. ನಿವೃತ್ತ ನೌಕರರ ಭವನದಲ್ಲಿ ಸಮಾರಂಭಕ್ಕೂ ಮುನ್ನ ಕೇಸರಿಭಾತ್, ಇಡ್ಲಿ, ವಡೆ ಉಪಾಹಾರ, ಮಧ್ಯಾಹ್ನ ಹೋಳಿಗೆ ಊಟವೆಂದು ಹೇಳಿ ಒತ್ತಾಯ ಮಾಡಿದ್ದರಿಂದ, ಮಡದಿ ಮಹಾಲಕ್ಷ್ಮಮ್ಮನವರಿಗೆ ಊಟ ತಿಂಡಿಯ ವಿವರ ತಿಳಿಸಬಾರದೆಂಬ ಷರತ್ತಿನ ಮೇಲೆ ಒಪ್ಪಿಕೊಂಡಿದ್ದರು.

ತನಗೆ ಡಯಾಬಿಟೀಸ್ ಇಲ್ಲದಿದ್ದರೂ, ಶುಗರ್ ಲೆವೆಲ್ ಮಾರ್ಜಿನ್‍ನಲ್ಲಿ ಇರುವುದರಿಂದ ಜಿಡ್ಡು, ಸಕ್ಕರೆಯನ್ನು ಕಡಿಮೆ ಮಾಡಬೇಕು ಎಂದಿದ್ದರು ಡಾಕ್ಟರ್. ತಕ್ಷಣವೇ ಮಹಾಲಕ್ಷ್ಮಮ್ಮ, ಪ್ರೊಫೆಸರರ ಡಯಟ್‍ನಿಂದ ಇವೆರ ಡಕ್ಕೂ ಶಾಶ್ವತ ಗೇಟ್ ಪಾಸ್ ಕೊಟ್ಟಿದ್ದರು. ಹಾಗಾಗಿ ರಂಗಣ್ಣನವರು ಗುಟ್ಟಾಗಿ ಸಿಹಿ ಸವಿಯುವ ಸಂದರ್ಭಗಳನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ.

ತಲೆಯಲ್ಲಿ ಉಳಿದಿದ್ದ ಕೆಲವೇ ಕೂದಲುಗಳಿಗೆ ಲಗುಬಗೆಯಿಂದ ಡೈ ಮಾಡಿಕೊಂಡು ಸ್ನಾನ ಮುಗಿಸಿದರು ಪ್ರೊಫೆಸರ್‌. ದೇವರಿಗೆ ಕೈಮುಗಿಯುವ ಶಾಸ್ತ್ರ ಮಾಡಿ, ಕನ್ನಡಕ ಏರಿಸಿಕೊಂಡು ಹಲ್ಲುಸೆಟ್ ಹಾಕಿಕೊಂಡರು.

ಕನ್ನಡಿ ಮುಂದೆ ನಿಂತು ಅರ್ಧ ಬೋಳು ತಲೆ ಮೇಲೆ ಬಾಚಣಿಗೆ ಆಡಿಸಿದರು. ವಾರ್ಡ್‌ರೋಬಿನಿಂದ ಇಪ್ಪತ್ತು ವರ್ಷಗಳ ಹಿಂದೆ, ಸಿಲ್ವರ್ ಜ್ಯುಬಿಲಿ ಮ್ಯಾರೇಜ್ ಆ್ಯನಿವರ್ಸರಿಗೆ ಹೊಲಿಸಿದ್ದ ಸೂಟು, ಟೈ ಧರಿಸಿ, ಸೆಂಟ್ ಹಾಕಿ
ಕೊಂಡು ಶಿಳ್ಳೆ ಹೊಡೆಯುತ್ತಾ ಹೊರಬಂದರು.

ಮೊಮ್ಮಗ, ‘ಇವತ್ತು ವೆಡ್ಡಿಂಗ್ ಆ್ಯನಿವರ್ಸರೀನಾ ತಾತಾ?’ ಎಂದ.

‘ಇಲ್ಲಪ್ಪಾ, ಇವತ್ತು ವಿಶ್ವ ಹಿರಿಯರ ದಿನವಲ್ವೇ? ಫಂಕ್ಷನ್‍ಗೆ ಹೋಗ್ತಿದೀನಿ. ನಿನ್ನ ಅಜ್ಜೀನ ಕರೆಯಯ್ಯಾ’ ಎಂದರು.

ಅಷ್ಟರಲ್ಲಿ ಅಲ್ಲಿಗೆ ಬಂದ ಮಹಾಲಕ್ಷ್ಮಮ್ಮ, ಸ್ವಚ್ಛ ಭಾರತ್ ಅಭಿಯಾನದ ಬಿಸಿಲು ಟೋಪಿ ಮತ್ತು ತೆಂಗಿನಕಡ್ಡಿ ಪೊರಕೆಯನ್ನು ಪ್ರೊಫೆಸರರ ಕೈಗೆ ತುರುಕಿದರು!

ರಂಗಣ್ಣನವರಿಗೆ ಥಟ್ಟನೆ ನೆನಪಾಯಿತು– ಗಾಂಧಿ ಜಯಂತಿ ಅಂಗವಾಗಿ ಬಡಾವಣೆಯಲ್ಲಿ ಶ್ರಮದಾನವನ್ನು ಅಂದು ತಮ್ಮ ಮನೆಯ ಮುಂದಿನಿಂದಲೇ ಪ್ರಾರಂಭಿಸಬೇಕೆಂದು ತೀರ್ಮಾನಿಸಿದ್ದ ಬಡಾವಣೆ ಸಂಘದ ನಿರ್ಣಯ!

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.