ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ತೆಪರೇಸಿ ಫೈಲ್ಸ್!

Last Updated 24 ಮಾರ್ಚ್ 2022, 19:31 IST
ಅಕ್ಷರ ಗಾತ್ರ

‘ಲೇ ತೆಪರ, ಈ ಫೈಲ್ಸ್ ಅಂದ್ರೆ ಏನ್ಲೆ?’ ಹರಟೆ ಕಟ್ಟೆಯಲ್ಲಿ ತೆಪರೇಸಿಯನ್ನ ಗುಡ್ಡೆ ಕೇಳಿದ.

‘ಅಂದ್ರೆ? ಆಫೀಸ್ ಫೈಲ್ಸೋ, ಆಸ್ಪತ್ರೇಲಿ ತೋರ್ಸೋ ಪೈಲ್ಸೋ?’

‘ಅಲೆ ಇವ್ನ, ಅದ್ರಾಗೂ ಬೇರೆ ಬೇರೆ ಅದಾವೇನ್ಲೆ? ನಾನು ಕೇಳಿದ್ದು ಫೈಲ್ಸ್ ಅಂತ ಸಿನಿಮಾ ಬಂದೇತಲ್ಲ ಅದು, ಆ ಫೈಲ್ಸ್...’

‘ಓ ಅದಾ? ಅದನ್ನ ನಿಂಗೆ ಬಿಡಿಸಿ ಹೇಳೋಕಾಗಲ್ಲ. ಅಂದ್ರೇ ಹಿಂದೆ ನಡೆದದ್ದನ್ನ ಈಗ ಹುಡುಕಿ ತೆಗೆದು ತೋರ್ಸೋದು... ನೋಡ್ರಪ್ಪ ಹಿಂಗಿಂಗ್ ಈ ತರ ಆಗಿತ್ತು ಅಂತ ಹಳೇ ಕತೆನೆಲ್ಲ ಹೇಳೋದು...’ ತೆಪರೇಸಿ ವಿವರಿಸಿದ.

‘ಓ... ಅಂದ್ರೆ ಹಳೆ ಗಾಯ ಕೆರ್ಕಳಾದು ಅನ್ನು...’ ದುಬ್ಬೀರ ನಕ್ಕ.

‘ಏನಾದ್ರು ತಿಳ್ಕಾ, ಈಗಿನೋರಿಗೆ ಹಳೇದೆಲ್ಲ ಗೊತ್ತಾಗ್ಲಿ ಅಂತಾನೂ ಇರಬೋದು...’

‘ಅಂದ್ರೇ ನಾವು ಹಳೇದ್ನೆಲ್ಲ ತೋರಿಸ್ಬೋದು. ಹಳೆ ದುರಂತಗಳು, ಹಿಂಸೆ, ಹತ್ಯಾಕಾಂಡಗಳು, ಬ್ರಹ್ಮಾಂಡ ಭ್ರಷ್ಟಾಚಾರಗಳು... ಇವನ್ನೆಲ್ಲ ಸಿನಿಮಾ ಮಾಡಿ ತೋರಿಸ್ಬೋದು ಅನ್ನು’.

‘ಮತ್ತೆ ಹಳೇ ಪ್ರೇಮ ಪುರಾಣಗಳು, ಮದುವೆ, ಅಪಘಾತಗಳು ಇವುನ್ನೂ ತೋರಿಸ್ಬೋದಾ?’ ಗುಡ್ಡೆ ಕೇಳಿದ.

‘ನಿನ್ತೆಲಿ, ಏನಾದ್ರೂ ತೋರಿಸ್ಕಾ ಹೋಗು, ತೆಲಿ ತಿಂತಾನೆ...’ ತೆಪರೇಸಿಗೆ ಸಿಟ್ಟು ಬಂತು.

‘ನೋಡ್ರಪ್ಪಾ ನಾನೇನಾದ್ರು ಡೈರೆಕ್ಟರ್ ಆಗಿದ್ರೆ ‘ತೆಪರೇಸಿ ಫೈಲ್ಸ್’ ಅಂತ ಸಿನಿಮಾ ಮಾಡಿ ತೋರಿಸ್ತಿದ್ದೆ’ ಎಂದ ಗುಡ್ಡೆ.

‘ಯಾಕಪ್ಪ ಅವುಂದೇನೈತಿ ಹಳೆ ಪುರಾಣ?’ ದುಬ್ಬೀರನಿಗೆ ಕುತೂಹಲ.

‘ಯಾಕೆ? ಅವನ ಪುರುಷೋತ್ತಮನ ಸಾಹಸಗಳು ನಿಂಗೊತ್ತಿಲ್ವ? ಮದುವೆ ಆದ ಮೇಲೆ ಪಾಪ ಅವನು ಪಡ್ತಿರೋ ಕಷ್ಟ ಆ ದೇವರಿಗೇ ಗೊತ್ತು. ಪಮ್ಮಿ ಕೈಲಿ ಮೂರ್ನಾಲ್ಕು ಸಲ ಮರ್ಡರ್ ಆಗ್ಬೇಕಿತ್ತು, ಬಚಾವಾದ’ ಗುಡ್ಡೆ ನಗುತ್ತ ಆಕಾಶ ನೋಡಿದ.

‘ಲೇ ಗುಡ್ಡೆ ಏನಕ್ಕೇನಾದ್ರು ಆಗ್ಲಿ, ತೆಪರನ ಮ್ಯಾಲೆ ನೀ ಸಿನಿಮಾ ತೆಗಿಯಲೆ, ನಾ ರೊಕ್ಕ ಹಾಕ್ತೀನಿ’ ದುಬ್ಬೀರನಿಗೆ ಹುರುಪು ಬಂತು.

ಅಲ್ಲಿಯವರೆಗೂ ಸುಮ್ಮನೆ ಕೂತಿದ್ದ ಕಡೆಮನಿ ಕೊಟ್ರೇಶಿ ‘ಅಲ್ಲೋ ದುಬ್ಬೀರ, ಅವನು ಸಿನಿಮಾ ತೆಗೀಬಹುದು, ಆದ್ರೆ ನೋಡೋರು ಬೇಕಲ್ಲ...’ ಎಂದ. ಎಲ್ಲರೂ ಗೊಳ್ಳಂತ ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT