ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಕಿಚನ್ ರಾಜಕೀಯ!

Last Updated 30 ಸೆಪ್ಟೆಂಬರ್ 2022, 19:04 IST
ಅಕ್ಷರ ಗಾತ್ರ

ರಾಜಕೀಯದ ಕಾರ್ಯಾಗಾರದಲ್ಲಿ ಹಿರಿಯ ಮುತ್ಸದ್ದಿ ಒಬ್ಬರು ಕಿಚನ್ ರಾಜಕೀಯದ ಬಗ್ಗೆ ತರಬೇತಿ ಕೊಡ್ತಿದ್ದರು. ಒಲೆ ಮೇಲೆ ನೀರು ಕುದೀತಿತ್ತು. ‘ಸರ್, ಯಾಕೋ ಬೇಳೆನೇ ಬೇಯ್ತಿಲ್ಲ’ ಅಂದ ಪರ್ಮೇಶಿ.

‘ಅಯ್ಯೋ ಈಗ ಬೇಯ್ತಿರೋದೇ ನಮ್ ಬೇಳೆ. ಬೇಳೆ ಬೇಯದಿದ್ರೂ ‘ನಮ್ಮ ಬೇಳೆ ಹಾಕಿದ ತಕ್ಷಣ ನುಣ್ಣಗೆ ಕರಗಿ ಹೋಗುತ್ತೆ’ ಅಂತ ಹೇಳ್ಕೊಬೇಕು. ಡ್ಯಾಮಿಗೆ ಗೇಟ್ ರಿಪೇರಿ ಮಾಡುಸ್ತಿದ್ರೂ ಡ್ಯಾಮ್ ಕಟ್ಟಿದ್ದೇ ನಾವು ಅಂತ ಹೇಳ್ಕೊಬೇಕು. ಅನುದಾನ, ಭಾಗ್ಯಗಳೆಲ್ಲಾ ನಮ್ದೇ ಅಂತ ತುತ್ತೂರಿ ಊದ್ಕೊಬೇಕು’.

‘ಸರ್, ಏನೋ ವಾಸನೆ? ಗ್ಯಾಸ್ ಲೀಕಾಗ್ತಿದೀಯ ಅಂತ?’ ಇನ್ನೊಬ್ಬ ಕೇಳಿದ.

‘ಪಕ್ಷ, ಸಿಲಿಂಡರ್‍ರು ಎರಡೂ ಸಣ್ಣಗೆ ಲೀಕ್ ಆಗ್ತಾನೇ ಇರುತ್ತೆ ಕಣ್ರಪ್ಪ. ಯಾವಾಗ ಸಿಡಿಯುತ್ತೆ ಹೇಳಕ್ಕಾಗಲ್ಲ. ಎಷ್ಟು ಹುಶಾರಾಗಿದ್ರೂ ಸಾಲದು, ಭಿನ್ನಾಭಿಪ್ರಾಯದ ಹೊಗೆ ಒಳಗೊಳಗೇ ಕುದೀತಿರುತ್ತೆ. ಕೈ ಸುಟ್ಕೊಬಾರದು. ಕುಕ್ಕರ್ ತಳಕ್ಕೆ ಹುಳಿ ಹಿಂಡಬೇಕು. ಅದು ಅನ್ನ ಸಾಂಬಾರಿಗೆ ಸೇರದ ಹಾಗೆ ಇಳಿಸ್ಕೊಬೇಕು’.

‘ಅಕ್ಕಿನ ಕೇರಿ ಹಾಕಬೇಕಾ ಸರ್?’

‘ಯಾವುದನ್ನೂ ಕೇರಬಾರದು, ಯಾರಿಗೂ ಕ್ಯಾರೇ ಅನ್ನಬಾರದು. ಇದೇ ರಾಜಕೀಯ ಮಂತ್ರ’.

‘ಹಾಗಲ್ಲ, ಅಕ್ಕೀಲಿ ಕಲ್ಲು, ಹಾಳು‌ ಮೂಳು ಇರುತ್ತಲ್ಲ’ ಇನ್ನೊಬ್ಬ ಅನುಮಾನ ತೆಗೆದ.

‘ಅದಕ್ಕೇ ನಾವು ಸಾಂಬಾರ್ ತಂಟೆಗೆ ಹೋಗದೆ ಸುಮ್ನೆ ಚಿತ್ರಾನ್ನ ಮಾಡಿಬಿಡಬೇಕು. ಹುಳ, ಹುಳುಕು ಯಾವುದೂ ಕಾಣಲ್ಲ, ರಾಜಕೀಯದೋರಿಗೆ ಚಿತ್ರಾನ್ನನೇ ಆಗಿಬಂದಿರೋದು’.

‘ನಿಜ ಸರ್, ಮುಂದಿನ ಸಾರಿ ಸೆಂಟ್ರಲ್ಲಲ್ಲೂ ಚಿತ್ರಾನ್ನನೇ ಅಂತ ಮಾತಾಡ್ತಿದಾರೆ’.

‘ಮಾತಾಡೋದೇನ್ ಬಂತು? ಅಲ್ಲಿ ಗ್ಯಾರಂಟಿ ಚಿತ್ರಾನ್ನನೇ! ನಿತೀಶು, ರಾಹುಲ್ಲು, ದೀದಿ, ಕಾಮ್ರೇಡ್‍ಗಳು ಪರಸ್ಪರ ಕಾಲು ಎಳೆದಾಡ್ತಾರೆ. ಮತ್ತೆ ಕರ್ನಾಟಕಕ್ಕೇ ಪ್ರಧಾನಿ ಯೋಗ ಕಣ್ರೋ!’ ನಕ್ಕರು ಹಿರಿಯರು.

‘ಇಲ್ಲೂ ತಳ್ಳು, ಕೊಳ್ಳು ಪರಿಸ್ಥಿತಿ ಬಂದ್ರೆ ಡಬಲ್ ಎಂಜಿನ್ ‘ದೇಕು’ ಸರ್ಕಾರದ ಯೋಗನೂ ಇದೆ ಬಿಡಿ ಸರ್’ ಎಂದು ಒಗ್ಗರಣೆ ಹಾಕಿದ ಪರ್ಮೇಶಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT