ಬುಧವಾರ, ಮೇ 18, 2022
24 °C

ಚುರುಮುರಿ: ಪೇರೆಂಟ್ಸ್‌ಗೆ ಪಾಠ

ಮಣ್ಣೆ ರಾಜು Updated:

ಅಕ್ಷರ ಗಾತ್ರ : | |

Prajavani

ವಿದ್ಯಾರ್ಥಿಯ ಆನ್‍ಲೈನ್ ಕ್ಲಾಸ್ ವ್ಯವಸ್ಥೆ ಪರಿಶೀಲಿಸಲು ಸ್ಕೂಲ್ ಟೀಚರ್ ಮನೆಗೆ ಬಂದರು.

‘ಸೆಪರೇಟಾಗಿ ಕಂಪ್ಯೂಟರ್, ಚೇರು, ಟೇಬಲ್ ವ್ಯವಸ್ಥೆ ಮಾಡಿದ್ದೀವಿ’ ಟೀಚರ್‌ಗೆ ತೋರಿಸಿದ ಶಂಕ್ರಿ.

‘ಮಗನಿಗೆ ಹಲ್ಲು ಉಜ್ಜಿಸಿ, ಸ್ನಾನ ಮಾಡಿಸಿ, ಡ್ರೆಸ್ ಹಾಕಿ, ತಲೆ ಬಾಚಿ, ತಿಂಡಿ ತಿನ್ನಿಸಿ ಆನ್‍ಲೈನ್ ಕ್ಲಾಸಿಗೆ ಸಿದ್ಧಮಾಡ್ತೀನಿ’ ಸುಮಿ ಹೇಳಿದಳು.

‘ಕ್ಲಾಸ್ ನಡೆಯುವಾಗ ಗಂಡಹೆಂಡ್ತಿ ಜಗಳವಾಡಕೂಡದು. ಮೊನ್ನೆ ನಿಮ್ಮ ಜಗಳ ಕ್ಲಾಸ್ ಕೇಳುತ್ತಿದ್ದ ಮಕ್ಕಳ ಮನೆಗಳಲ್ಲಿ ಪ್ರಸಾರ ಆಯ್ತು’ ಟೀಚರ್ ಬೇಸರಗೊಂಡರು.

‘ಸಾರಿ, ಇನ್ಮೇಲೆ ಕ್ಲಾಸ್ ಟೈಂನಲ್ಲಿ ಜಗಳ ಆಡೊಲ್ಲ’ ಎಂದಳು ಸುಮಿ.

‘ನಿನ್ನೆಯೂ ಕೂಗಾಟ ಕೇಳಿಸಿತು...’

‘ನಮ್ಮ ಜಗಳ ಅಲ್ಲ, ಸಾಲಗಾರರು ಬಂದು ಗಲಾಟೆ ಮಾಡಿದ್ರು...’ ಶಂಕ್ರಿ ಮುಜುಗರಪಟ್ಟ.

‘ಪಾತ್ರೆ ಸೌಂಡ್, ಟಿ.ವಿ, ಮೊಬೈಲ್ ಮ್ಯೂಟ್ ಮಾಡ್ಬೇಕು...’

‘ಆಗಲಿ ಟೀಚರ್’.

‘ಕ್ಲಾಸ್ ಅಟೆಂಡ್ ಮಾಡಿದ್ರೆ ಸಾಲದು, ನಿಮ್ಮ ಮಗನಿಗೆ ಸ್ಪೋರ್ಟ್ಸ್‌ನಲ್ಲೂ ಆಸಕ್ತಿ ಬೆಳೆಸಿ’.

‘ಆಸಕ್ತಿ ಇದೆ. ಮೊಬೈಲ್‍ನಲ್ಲಿ ಗೇಮ್ ಆಡ್ತಾನೆ, ಟಿ.ವಿಯಲ್ಲಿ ಕ್ರಿಕೆಟ್ ಮ್ಯಾಚ್ ನೋಡ್ತಾನೆ’ ಎಂದಳು ಸುಮಿ.

‘ಇನ್‌ಡೋರ್ ಅಲ್ಲ, ಔಟ್‍ಡೋರ್ ಗೇಮ್ ಆಡಬೇಕು’.

‘ಆಡ್ತಾನೆ. ಅಕ್ಕಪಕ್ಕದ ಮನೆ ನಾಯಿಗಳಿಗೆ ಕಲ್ಲು ಎಸೆಯುತ್ತಾನೆ, ನಾಯಿ ಬೊಗಳಿದರೆ ಓಡಿ ಬರ್ತಾನೆ, ಹೀಗೆ ದಿನಕ್ಕೆ ಏಳೆಂಟು ಬಾರಿ ಮಾಡ್ತಾನೆ’ ಅಂದ ಶಂಕ್ರಿ.

‘ನಾಯಿಗೆ ಕಲ್ಲು ಹೊಡೆಯುವುದು ಗೇಮ್ ಅಲ್ಲ, ಕ್ರೈಂ...’

‘ಕೊರೊನಾ ಕಾಟದಲ್ಲಿ ಬೀದಿಯ ಮಕ್ಕಳು ಒಟ್ಟಿಗೆ ಸೇರಲು ನಾವು ಬಿಟ್ಟಿಲ್ಲ ಟೀಚರ್’ ಸುಮಿ ಕಾಫಿ ತಂದುಕೊಟ್ಟಳು.

‘ರನ್ನಿಂಗ್, ಜಂಪಿಂಗ್, ಸ್ಕಿಪ್ಪಿಂಗ್ ರೀತಿಯ ಇಂಡಿವಿಜುಯಲ್ ಗೇಮ್ ಆಡಬಹುದಲ್ಲಾ...’ ಎಂದ ಟೀಚರ್, ‘ನಾಳೆ ಸ್ಕೂಲಿಗೆ ಬಂದು ಬಾಕಿಯಿರುವ ಫೀಸ್ ಪೇ ಮಾಡಿ...’ ಎಂದು ಹೇಳಿ ಹೊರಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.