ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ವಾಟರ್ ಸಿಟಿ

Last Updated 30 ಆಗಸ್ಟ್ 2022, 19:31 IST
ಅಕ್ಷರ ಗಾತ್ರ

‘ಅಬ್ಬಾ ಅದೇನು ಮಳೆ? ಮೈಸೂರಿಗೆ ಹೋಗೋಕ್ಕೆ ರಸ್ತೆ ಜಲಾವೃತ, ಸದ್ಯಕ್ಕೆ ರೈಲಿಗೂ ನೋ ಎಂಟ್ರಿ’ ನನ್ನವಳ ಕಿಟಿಕಿಟಿ.

‘ನೆಂಟರ ಮದುವೆ ಕಮ್ ಹಬ್ಬದ ಪ್ರೋಗ್ರಾಮ್ ನೀರುಪಾಲು’ ಅತ್ತೆಯ ಸಂಕಟ.

‘ಎಲ್ಲೆಲ್ಲಿ ನೋಡಲಿ ನೀರೆಯರ ಕಾಣುವೆ...’ ರಾಗವೆಳೆದೆ. ನನ್ನವಳ ಕಣ್ಣು ಕೆಂಪಾದಾಗ ನಾಲಗೆ ಜಾರಿದ್ದ ಅರಿವಾಗಿ ‘ನೀರನ್ನೇ ಅನ್ನುವುದು ಜಾರಿ... ಸಾರಿ’ ಎಂದೆ. ಪುಟ್ಟಿ ಕಿಸಕ್ಕನೆ ನಕ್ಕಳು.

‘ಮನೆಯಿಂದ ಹೊರಗಡೆ ಕಾಲಿಡಲಾಗದು, ಬಟ್ಟೆ ಒಣಗದು, ವರ್ಷವಿಡೀ ವರ್ಷಾಕಾಲ ಅನ್ನೋ ಹಾಗಾಗಿದೆ. ಸಿಲಿಕಾನ್ ಸಿಟಿ ಬರ್ತಾ ಬರ್ತಾ ವಾಟರ್ ಸಿಟಿ ಆಗ್ತಿದೆ, ಸ್ಮಾರ್ಟ್ ಸಿಟಿ ದೂರದ ಮಾತು’ ನನ್ನವಳ ಪ್ರಸ್ತುತಿ.

‘ಅಲ್ವೇ ಮತ್ತೆ? ಪರಿಸರ ಸಂರಕ್ಷಣೆ ಇಲ್ಲದಿದ್ದರೆ, ಅವೈಜ್ಞಾನಿಕವಾಗಿ ನಗರ ಬೆಳೆದರೆ ಹೀಗೇ ವರ್ಷಕ್ಕೊಮ್ಮೆ ತುಂಬೋ ಕೆರೆ ಕಟ್ಟೆ ಇಷ್ಟಕ್ಕೇ ಕೋಡಿ ಒಡೆದು ಅವಾಂತರ ಸೃಷ್ಟಿಯಾಗುತ್ತೆ’ ಅತ್ತೆಯ ಅನುಭವದ ಮಾತು.

‘ಅಪ್ಪಾ ಇಂಗ್ಲಿಷ್ ಡಿಕ್ಷನರಿ ಬೇಕಿತ್ತು’ ಪುಟ್ಟಿಯ ಮನವಿ. ‘ಈಗಾಗಲೇ ಕೊಡಿಸಿದ್ದು ಹೊಸತಾಗೇ ಇದೆ, ಮತ್ಯಾಕೆ?’ ನನ್ನವಳ ಕ್ವೈರಿ.

‘ನಿನಗರ್ಥವಾಗೋಲ್ಲ ಬಿಡು, ಒಂದು ವೇಳೆ ಶಶಿ ತರೂರ್ ಕಾಂಗ್ರೆಸ್ ಅಧ್ಯಕ್ಷರಾದರೆ ಅವರ ಭಾಷಣ ಅರ್ಥ ಮಾಡ್ಕೊಳ್ಳೋಕೆ ಬೇಕಲ್ಲ?’ ಪುಟ್ಟಿಯನ್ನು ವಹಿಸಿಕೊಂಡೆ.

ಅಷ್ಟರಲ್ಲಿ ಕಂಠಿಯ ಆಗಮನ, ಕೈಯಲ್ಲಿ ಮುದ್ದಾದ ಗಣಪನ ಮೂರ್ತಿ.

‘ನಿಮಗೆಂತಲೇ ತಂದೆ, ಪರಿಸರಸ್ನೇಹಿ, ಹಬ್ಬದ ನಂತರ ಇದೇ ಮಣ್ಣಲ್ಲಿ ಗಿಡ ಬರುತ್ತೆ’ ಎಂದ.

‘ಅಂದ್ಹಾಗೆ ಬಾಸ್ ಮನೇಲಿ ಗೌರಿ ಬಾಗಿನಕ್ಕೆ ರೇಷ್ಮೆ ಸೀರೆ ಉಡುಗೊರೆ ಪ್ರಾಯೋಜಿಸಿದ್ದಾರೆ. ಮಳೆ ಕಾರಣ ಕೊರಿಯರ್ ಮಾಡ್ತಾರೆ, ನಿಮ್ಮ ವಿಳಾಸವನ್ನೂ ಕೊಟ್ಟಿದ್ದೀನಿ’ ಎಂದ.

‘ಇನ್ನೇನು ಹಾಲಿನ ಬೆಲೆ ಮೂರು ರೂಪಾಯಿ ಜಾಸ್ತಿಯಾಗಬಹುದು ಅನ್ನೋ ಸೂಚನೆ, ಅಷ್ಟರೊಳಗೆ ಗಟ್ಟಿಹಾಲಿನ ಕಾಫಿ ಕುಡಿದುಬಿಡಬೇಕು’ ಅರ್ಥಗರ್ಭಿತವಾಗಿ ನನ್ನವಳತ್ತ ನೋಡಿದೆ. ‘ಕಾಫಿ ತರ್ತೀನಿ ಇರಿ’ ಎನ್ನುತ್ತಾ ನನ್ನವಳು ಅಡುಗೆಮನೆಗೆ ಹಾರಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT