ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ | ತಿಂಡಿ 24/7

ನಾರಾಯಣ ರಾಯಚೂರ್ 
Published 1 ಮಾರ್ಚ್ 2024, 22:30 IST
Last Updated 1 ಮಾರ್ಚ್ 2024, 22:30 IST
ಅಕ್ಷರ ಗಾತ್ರ

‘ರೀ... ಬೆಂಗಳೂರ್‌ನಲ್ಲಿ ಇರೋಷ್ಟು ವೆರೈಟಿ ಹೋಟೆಲ್‌ಗಳು ಭಾರತದ ಯಾವ ನಗರದಲ್ಲೂ ಇಲ್ಲವಂತೆ ರೀ! ಸೌತ್ ಇಂಡಿಯನ್ನು, ನಾರ್ತ್‌ ಇಂಡಿಯನ್ನು, ಚೈನೀಸು... ಏನು ಕೇಳಿದ್ರೆ ಅದು, ಕುಳಿತು ತಿನ್ನೋ ಹೋಟ್ಲು, ನಿಂತು ತಿನ್ನೋ ದರ್ಶಿನಿಗಳು ಜೊತೆಗೆ ಸಜ್ಜನರಾವ್ ಸರ್ಕಲ್‌ನಲ್ಲಿ ‘ಈಟ್ ಸ್ಟ್ರೀಟೇ’ ಬರ್ತಾ ಇದೆ. ಅಷ್ಟೇಅಲ್ಲ, ತಿಂಡಿಪೋತರಿಗೆ ಇನ್ನೊಂದು ಬಂಪರ್ ಸುದ್ದಿ- ಹೊಸ ಬಜೆಟ್ ಪ್ರಕಾರ ಹೋಟೆಲ್‌ಗಳನ್ನ ರಾತ್ರಿ 1 ಗಂಟೆವರೆಗೂ ತೆರೆಯೋದಕ್ಕೆ ಅನುಮತಿಯನ್ನೂ ಕೊಡಲಾಗಿದೆಯಂತೆ’.

‘ಸರಿ ಬಿಡಿ, 1 ಗಂಟೆವರೆಗೂ ಹೋಟ್ಲು, ಆಮೇಲೆ ನಾಲಕ್ಕು ಗಂಟೆ ಅಷ್ಟೊತ್ತಿಗೆ ಸರ್ಕಲ್‌
ಗಳಲ್ಲಿ ಇಡ್ಲಿ, ವಡೆ, ದೋಸೆ ಸಮಾರಾಧನೆ, ಅಂತೂ 24/7 ತಿಂಡಿಯ ರಾಜ್ಯ ಅಂತಲೂ ಕರೆಸಿಕೊಳ್ಳಬಹುದು’.

‘ಹಸಿವುಮುಕ್ತ ರಾಜ್ಯ’ ಅಂತ ಫ್ಲೆಕ್ಸ್‌ಗಳಲ್ಲಿ, ಜಾಹೀರಾತುಗಳಲ್ಲಿ ನೋಡ್ತಾನೇ ಇರ್ತೀವಲ್ಲ. ಮೊನ್ನೆ ಹೋಟೆಲ್‌ಗಳ ಬಗ್ಗೆನೇ ಇನ್ನೂ ಒಂದು ಸುದ್ದಿ ಓದ್ತಾಯಿದ್ದೆ. ಇನ್ಮೇಲೆ ಹೋಟೆಲ್‌ಗಳಲ್ಲಿ ಹರಟೆ ಹೊಡೀತಾ, ಕಾಲಹರಣ ಮಾಡೋ ಹಾಗಿಲ್ವಂತೆ. ನೀವೂ ಆ ಪಾರ್ಟಿ, ಈ ಪಾರ್ಟಿ, ಕಿಟ್ಟಿ ಪಾರ್ಟಿ ಅಂತ ಟೈಮ್ ವೇಸ್ಟ್ ಮಾಡೋ ಹಂಗಿಲ್ಲ. ಕೆಲವರಂತೂ  ಬೈ-ಟು-ಕಾಫಿ ತಗೊಂಡು ಬಾಯಿತುಂಬಾ ಹರಟುತ್ತಿರ್ತಾರೆ, ಹಾಗೆ ಮಾಡೋಹಾಗಿಲ್ಲ’.

‘ಎರಡು ಇಡ್ಲಿ- 12 ನಿಮಿಷ, ವಡೆ- 8 ನಿಮಿಷ, ದೋಸೆ- 16 ನಿಮಿಷ ಅಂತೆಲ್ಲ ತಿಂಡಿ ದರದ ಬೋರ್ಡ್‌ನಲ್ಲೇ ಒಂದು ತಿಂಡಿ ತಿನ್ನೋಕೆ ಇಂತಿಷ್ಟು ಸಮಯಾವಕಾಶ ಅಂತ ಹಾಕಿಬಿಡ್ತಾರೇನೊ’.

‘ಬೇಗ ತಿನ್ನಿ, ತಿನ್ನಬೇಕೆನ್ನುವವರಿಗೆ ಜಾಗ ಬಿಟ್ಟು ಕೊಡಿ- ಇನ್ನೂ ಬಹಳಷ್ಟು ಜನ ವೇಟ್ ಮಾಡುತ್ತಿದ್ದಾರೆ’ ಅಂತಲೂ ಬೋರ್ಡ್ ಹಾಕಬಹುದು’.

‘ನಿಧಾನವಾಗಿ ತಿನ್ನಿ, ನಿಧಾನವಾಗಿ ಊಟ ಮಾಡಿ ಅಂತ ಹೇಳ್ತಿದ್ದ ನಾವು, ಇನ್ಮೇಲೆ ಬೇಗ ಬೇಗ ತಿನ್ನೋದನ್ನ ಅಭ್ಯಾಸ ಮಾಡ್ಕೊಬೇಕು. ಬ್ರೇಕ್‌ಫಾಸ್ಟನ್ನ ಫಾಸ್ಟ್ ಆಗಿ ತಿನ್ನೋರಿಗೆ ಒಂದು ಜಾಮೂನ್ ಉಚಿತ ಅಂತನ್ನೊ ಆಫರ್‍ರೂ ಬರಬಹುದು!’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT