ಮಂಗಳವಾರ, ಜನವರಿ 25, 2022
28 °C

ಚುರುಮುರಿ: ಪಾದಯಾತ್ರೆ ಪವಾಡ

ಮಣ್ಣೆ ರಾಜು Updated:

ಅಕ್ಷರ ಗಾತ್ರ : | |

Prajavani

‘ಜನನಾಯಕರು ಪಾದಯಾತ್ರೆ ಮಾಡಿದರೆ ತೀರ್ಥಯಾತ್ರೆಯಷ್ಟೇ ಫಲ-ಪುಣ್ಯ ಸಿಗುತ್ತೇನ್ರೀ?’ ಸುಮಿ ಕೇಳಿದಳು.

‘ಫಲ-ಪುಣ್ಯ ಅಲ್ಲದಿದ್ದರೂ ಅಧಿಕಾರದ ಬಲ ಸಿಗುತ್ತೆ ಅನ್ನುವ ನಂಬಿಕೆಯಂತೆ. ಪಾದಯಾತ್ರೆ ಪವಾಡದಿಂದ ಅಧಿಕಾರ ಹಿಡಿದವರ ಇತಿಹಾಸವಿದೆ. ಬಳ್ಳಾರಿಗೆ ನಡೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್‍ನವರು ಈಗ ಮೇಕೆದಾಟುವಿಗೆ ನಡೆದು ಆಡಳಿತ ನಡೆಸುವ ಪ್ರಯತ್ನ ಮಾಡ್ತಿದ್ದಾರಂತೆ’ ಅಂದ ಶಂಕ್ರಿ.

‘ಅವರ ಪಕ್ಷ, ಅವರ ಪಾದ. ಕಾಂಗ್ರೆಸ್‍ನವರು ಪಾದಯಾತ್ರೆ ಮಾಡಿದರೆ ಬಿಜೆಪಿ, ಜೆಡಿಎಸ್‌ನವರಿಗೆ ಯಾಕಂತೆ ಹೊಟ್ಟೆ ಉರಿ? ಇವರೂ ಪಾದಯಾತ್ರೆ ಮಾಡಬಹುದಲ್ವಾ?’

‘ಪಾದಯಾತ್ರೆಯಲ್ಲಿ ನೀವೂ ಬಂದು ಭಾಗ ವಹಿಸಿ ಅದರ ಫಲಾಫಲಗಳನ್ನು ಪಡೆಯಿರಿ ಅಂತ ಕಾಂಗ್ರೆಸ್‍ನವರು ಕರೆದರೂ ಹೋಗ್ತಿಲ್ಲವಂತೆ. ಕಾಲು ನೋವಿಗೆ ಹೆದರಿದರೇನೋ...’

‘ಹಾಗೇನಿಲ್ಲ, ಬಿಜೆಪಿ, ಜೆಡಿಎಸ್‍ನಲ್ಲೂ ಪರಿಣತ ಪಾದಯಾತ್ರಿಗಳಿದ್ದಾರೆ. ಮೈಲಿಗಳ ಲೆಕ್ಕವಿಡದೆ ರಾಜಕಾರಣದಲ್ಲಿ ಬಹುದೂರ ನಡೆದುಬಂದಿರುವ ದೇವೇಗೌಡರು,
ಯಡಿಯೂರಪ್ಪನೋರು ಪಾದಯಾತ್ರಿಗಳಿಗೆ ಮೈಲಿಗಲ್ಲಾಗಿದ್ದಾರೆ. ಈಗಿನವರಂತೆ ಟಾರು ರಸ್ತೆಯಲ್ಲಿ ನಡೆದವರಲ್ಲ, ಕಲ್ಲುಮುಳ್ಳು ತುಳಿದು ಬಂದಿದ್ದಾರೆ ಕಣ್ರೀ’.

‘ಪಕ್ಷವನ್ನು ಅಧಿಕಾರಕ್ಕೆ ತರಲು ತಾವು ರಾಜ್ಯ ಸುತ್ತುವುದಾಗಿ ಯಡಿಯೂರಪ್ಪ ಹೇಳಿದ್ದಾರೆ’.

‘ತಮ್ಮ ಕುರ್ಚಿ ಕಂಟಕ ನಿವಾರಣೆ ಆದಮೇಲೆ ಮುಖ್ಯಮಂತ್ರಿ ಬಸಣ್ಣರ ಶಕ್ತಿ, ಸಾಮರ್ಥ್ಯವೂ ಹೆಚ್ಚಾಗಿ ರಾಜ್ಯವ್ಯಾಪಿ ನಡೆಯುವ ಉತ್ಸಾಹ ತೋರಿದ್ದಾರಂತೆ’.

‘ಮುಖ್ಯಮಂತ್ರಿ ಸಾಮರ್ಥ್ಯದ ವಿಚಾರವಿರಲಿ, ಸಂಪುಟದ ಸಚಿವರಿಗೆ ಪಾದಯಾತ್ರೆಯ ಸ್ಪರ್ಧೆ ಏರ್ಪಡಿಸಿ ಅವರ ನಡಿಗೆ, ಕೊಡುಗೆ ಸಾಮರ್ಥ್ಯ ಪರೀಕ್ಷೆ ನಡೆಸಿ ಅಂತ ಅನೇಕ ಶಾಸಕರು ಹೈಕಮಾಂಡ್‍ಗೆ ಕೋರಿಕೆ ಸಲ್ಲಿಸಿದ್ದಾರಂತೆ’.

‘ಸಚಿವರಿಗೆ ನಡಿಗೆಯ ಆಟೋಟ ಸ್ಪರ್ಧೆ ನಡೆಸಿ, ಗೆದ್ದವರಿಗೆ ಬಹುಮಾನ ಕೊಡ ಬೇಕಂತಾ?’ ಸುಮಿ ಕೇಳಿದಳು.

‘ಅಲ್ಲಾ, ಮೈಲೇಜ್ ಇಲ್ಲದ ಮಂತ್ರಿಗಳನ್ನು ಔಟ್ ಮಾಡಿ, ಹೊಸಬರಿಗೆ ಸಂಪುಟದಲ್ಲಿ ಅವಕಾಶ ನೀಡಿ ಅಂತ ಸಚಿವ ಸ್ಥಾನ ಆಕಾಂಕ್ಷಿ ಶಾಸಕರು ಕೇಳಿಕೊಂಡಿದ್ದಾರಂತೆ’ ಎಂದ ಶಂಕ್ರಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು