‘ಹಾರುವ ವಿಮಾನ, ಹಾರುವ ಹಕ್ಕಿ, ಹಾರುವ ತಟ್ಟೆ… ಇವೆಲ್ಲ ನಾ ಕೇಳೀನಿ. ಆದರ ಇದೇನಿದು ಫ್ಲೈಯಿಂಗ್ ಕಿಸ್? ಕಿಸ್ ಹೆಂಗ ಹಾರತದ? ಅದಕ್ಕೇನು ರೆಕ್ಕೆ ಅದಾವೇನು?’ ಬೆಕ್ಕಣ್ಣ ಬಲು ಗಂಭೀರವಾಗಿಯೇ ಕೇಳಿತು.
‘ಕಿಸ್ ಹಾರಂಗಿಲ್ಲಲೇ. ದೂರದಿಂದ ಮುತ್ತು ಕೊಟ್ಟಂಗೆ ಸನ್ನೆ ಮಾಡಿ, ಮುತ್ತು ಹಾರಿಸತಾರ. ಅದಕ್ಕೆ ಫೈಯಿಂಗ್ ಕಿಸ್ ಅಂತಾರ’ ಎಂದು ಬೆಕ್ಕಣ್ಣನಿಗೆ ಒಂದು ಫ್ಲೈಯಿಂಗ್ ಕಿಸ್ ಕೊಟ್ಟೆ.
‘ನೀ ನನಗೇ ಕೊಡಾಕೆ ಹತ್ತೀಯಲ್ಲ, ಎಷ್ಟರ ನಾಚಿಕೆಗೆಟ್ಟೀ’ ಎಂದು ಮುಖ ಮುಚ್ಚಿಕೊಂಡಿತು.
‘ನಾ ಖರೇ ಖರೇ ಕೊಟ್ಟಿಲ್ಲಲೇ… ಹಿಂಗ ಕೊಡ್ತಾರಂತ ತೋರಿಸಿದೆ ಅಷ್ಟೇ! ಅದ್ಸರಿ, ನಿನಗ್ಯಾಕೆ ಈ ವಿಚಾರ? ನೀ ಯಾರಿಗರೆ ಕೊಡಬೇಕೇನ್’ ಎಂದು ಕಿಚಾಯಿಸಿದೆ.
‘ಅಲ್ಲಾ... ನಮ್ಮ ರಾಹುಲಣ್ಣ ಸಂಸತ್ತಿಗೆ ವಾಪಸು ಬಂದಿದ್ದೇ, ಕಮಲಕ್ಕನ ಮನಿ ಹೆಣ್‌ಮಕ್ಕಳ ಕಡಿಗೆ ನೋಡಿಕೋತ ಹೀಂಗ ಫ್ಲೈಯಿಂಗ್ ಕಿಸ್ ಕೊಟ್ಟಾನಂತ. ಲೋಕಸಭಾ ಸದಸ್ಯತ್ವ ಮರಳಿ ಸಿಕ್ಕ ದಿನವೇ ಹೀಂಗ ಮಾಡೂದೇನ್’ ಎಂದು ಅಲವತ್ತುಕೊಂಡಿತು.
‘ಮದ್ಲೇ ಕಮಲಕ್ಕನ ಮನಿಯವ್ರು ಹೆಂಗ ಇವನ ಕಾಲಿಡಿದು ಎಳೀಬಕು, ಹೆಂಗ ಮಕಾಡೆ ಮಲಗಿಸಬೇಕು ಅಂತ ಹಗಲು ರಾತ್ರಿ ಯೋಚಿಸಿ, ಹೊಸ ತಂತ್ರ ಹೊಸೀತಿರತಾರೆ. ನಿದ್ದಿ ಮಾಡೋವ್ರಿಗೆ ಹಾಸಿಗಿ ಹಾಸಿಕೊಟ್ಟಂಗೆ ಇದು’.
‘ಮಣಿಪುರದ ದಳ್ಳುರಿ, ಹರಿಯಾಣದ ಕೋಮುಗಲಭೆ ವಿಷಯ ಇವನ್ನೆಲ್ಲ ಮೂಲೆಗೊತ್ತಿ, ಸುಖಾಸುಮ್ಮನೆ ಚರ್ಚೆ ಮಾಡಾಕೆ ಎಂಥ ಘನಗಂಭೀರ ವಿಷಯ ಕೊಟ್ಟಾನ ರಾಹುಲಣ್ಣ ಅಂತ ಕಮಲಕ್ಕನ ಮನಿಯವ್ರು ರಾಹುಲಣ್ಣಂಗೆ ಮನಸ್ಸಿನೊಳಗನೆ ಥ್ಯಾಂಕ್ಸ್ ಹೇಳಾಕೆ ಹತ್ಯಾರಂತ’.
‘ಅದಕ್ಕ ನಿಮ್ಮ ರಾಹುಲಣ್ಣಂಗೆ ಹೇಳಲೇ… ಅಂವಾ ಎಲ್ಲೂ ಕಮಲಕ್ಕನ ಮನಿಯವ್ರ ಹೆಸರು ತೆಗೆದು ಮಾತಾಡಬಾರದು. ಕೈಸನ್ನೆ, ಹಾವಭಾವ ಅಂತೂ ಬಿಲ್‌ಕುಲ್ ಮಾಡಬಾರದು ಅಂತ’.
‘ಕಮಲಕ್ಕನ ಮನಿಯವರು ಅವನಿಗಾಗಿ ಹೊಸ ಪದಕೋಶ ರಚನೆ ಮಾಡ್ಯಾರೆ. ಅಂವಾ ಸುಮ್ಮನಿದ್ದರೂ ಅದಕ್ಕೊಂದು ಅರ್ಥ ಕೊಟ್ಟು, ಅವನಿಗೆ ಟಾಂಗ್ ಕೊಡತಾರೆ!’ ಬೆಕ್ಕಣ್ಣ ಕಿಸಕ್ಕನೆ ನಕ್ಕಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.