ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ಪ್ರಾಣಿಗಳೇ ವಾಸಿ!

Published 31 ಜುಲೈ 2023, 0:16 IST
Last Updated 31 ಜುಲೈ 2023, 0:16 IST
ಅಕ್ಷರ ಗಾತ್ರ

ಬೆಕ್ಕಣ್ಣ ಯುಟ್ಯೂಬಿನಲ್ಲಿ ವಿಡಿಯೊ ಒಂದನ್ನು ನೋಡುತ್ತ, ಪಕ್ಕದಲ್ಲೇ ಪೇಪರಿಟ್ಟುಕೊಂಡು ಅದರ ಮೇಲೂ ಕಣ್ಣಾಡಿಸುತ್ತಿತ್ತು.

‘ನೋಡಿಲ್ಲಿ… ಜಪಾನಿನಾಗೆ ಒಬ್ಬನಿಗೆ ನಾಯಿ ಆಗಬೇಕು ಅಂತ ಭಯಂಕರ ಆಸೆ ಇತ್ತಂತೆ. ಅದಕ್ಕೆ 11 ಲಕ್ಷ ಖರ್ಚು ಮಾಡಿ ನಾಯಿ ಥರಾ ಡ್ರೆಸ್ಸು ಹೊಲೆಸಿಕೊಂಡು, ಅದನ್ನು ಹಾಕಿಕೊಂಡು ಥೇಟ್‌ ನಾಯಿ ಹಂಗೇ ನಡೆದಾಡಿಕೊಂಡು ಹೋಗಾಕೆ ಹತ್ಯಾನ. ನಮ್ಮ ದೇಶದಾಗೆ ನೀವು ಮನುಷ್ಯರು ಮನುಷ್ಯರಾಗಿ ಕಾಣೂ ಹಂಗೆ ಮೊದ್ಲು ಡ್ರೆಸ್ಸು ಹೊಲೆಸಿಕೊಳ್ಳಬೇಕು’ ಎಂದು ಪೇಪರಿನಲ್ಲಿ ಮಣಿಪುರ ಹಿಂಸಾಚಾರದ ಸುದ್ದಿಯನ್ನು ಬೊಟ್ಟು ಮಾಡಿ ತೋರಿಸಿತು.

‘ಹೊರಗಡೆ ಡ್ರೆಸ್ಸು ತಗಂಡು ಏನು ಮಾಡೂಣಲೇ… ಒಳಗಿನಿಂದ ಮನುಷ್ಯರಾಗಬೇಕಲ್ಲ’ ನಾನು ವೇದಾಂತ ಹೊಸೆದೆ.

‘ಅದ್ಸರಿ, ನಾವು ಮನುಷ್ಯರಿಗೆ ಪ್ರಾಣಿಗಳಾಗಬೇಕು ಅಥವಾ ಹಕ್ಕಿ ಹಂಗೆ ಹಾರಬೇಕು ಅಂತ ಆಸೆ ಇರತೈತಿ. ನಿನಗ ಮನುಷ್ಯನಾಗಬೇಕು, ಹೀಂಗ ಎರಡು ಕಾಲಿನ ಮ್ಯಾಗೆ ನಡೀಬೇಕು ಅಂತ ಆಸೆಯಾಗಿಲ್ಲನು?’ ನಾನು ಕುತೂಹಲದಿಂದ ಕೇಳಿದೆ.

‘ಇಲ್ಲವಾ, ತಪ್ಪಿನೂ ಮನುಷ್ಯನಾಗೂ ಆಸೆ ಇಲ್ಲ. ಎರಡು ಕಾಲಿನ ಮ್ಯಾಗೆ ನಡೆದಾಡಿಕೋತ ನೀವು ಇಡೀ ಭೂಮಂಡಲನೇ ನಮ್ಮದು ಅಂತ ಎಲ್ಲ ಹಾಳು ಮಾಡಾಕೆ ಹತ್ತೀರಲ್ಲ, ಹಂಗ ಆಗೂದು ಬ್ಯಾಡ’ ಎಂದು ಕೆನ್ನೆ ಕೆನ್ನೆ ಬಡಿದುಕೊಂಡಿತು.

‘ಎಲ್ಲಾ ಏನು ಹಾಳು ಮಾಡತೀವಲೇ… ನೋಡಿಲ್ಲಿ, ನಿನ್ನ ವಂಶಸ್ಥ ಹುಲಿಗಳ ಸಂಖ್ಯೆ ಎಷ್ಟ್‌ ಹೆಚ್ಚಾಗೈತಿ ಅಂತ. ನಮ್ಮ ಕರುನಾಡಿನಾಗೆ 563 ಐತಿ, ಇಡೀ ದೇಶದ ಲೆಕ್ಕ ಹಿಡಿದರೆ ಈ ನಾಲ್ಕು ವರ್ಷದಾಗೆ ಸುಮಾರು 700 ಹುಲಿ ಹೆಚ್ಚಾಗ್ಯಾವು’ ಎಂದೆ.

‘ಹಂಗೇ ಕಳ್ಳಬೇಟೆಗೆ 112 ಹುಲಿ ಬಲಿಯಾಗ್ಯವೆ ಅನ್ನೂ ಸುದ್ದಿನೂ ಓದು ಮತ್ತ. ಏನೇ ಹೇಳು, ನಾವು ಪ್ರಾಣಿಗಳೇ ವಾಸಿ ಬಿಡು… ನಿಮ್ಮಂಗಲ್ಲ. ಅಧಿಕಾರ, ಕುರ್ಚಿ, ಕಾಸಿಗಾಗಿ ಏನು ಮಾಡಕ್ಕೂ ತಯಾರಿರತೀರಿ. ನಾವು ಪ್ರಾಣಿಗಳಾಗಿಯೇ ಇರತೀವಿ, ನೀವು ಮದ್ಲು ಮನುಷ್ಯರಾಗ್ರಿ’ ಎಂದು ನನ್ನ ಮೂತಿಗೆ ತಿವಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT