ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಪಂಡೋರಾ ಪ್ರವರ!

Last Updated 6 ಅಕ್ಟೋಬರ್ 2021, 17:42 IST
ಅಕ್ಷರ ಗಾತ್ರ

‘ಹಿಂದೆ ಪ್ಯಾರಡೈಸ್ ಪೇಪರ್ಸ್, ಪನಾಮ ಪೇಪರ್ಸ್ ಬಗ್ಗೆ ಕೇಳಿದ್ವಿ. ಇದೇನ್ರೀ ಈಗ ಈ ಪಂಡೋರಾ ಪೇಪರ್ಸ್?!’ ಶ್ರೀಮತಿ ಆತಂಕದಿಂದ ಕೇಳಿದಳು.

‘ಎಲ್ಲಾ ಮಹಿಳಾ ಮಹಾತ್ಮೆ, ಲಕ್ಷ್ಮಿ ವ್ಯಾಮೋಹ’ ಎಂದೆ.

‘ನಿಮಗೆ ನಮ್ಮನ್ನು ಬೈಯದಿದ್ರೆ ಉಂಡ ಅನ್ನ ಅರಗೋಲ್ಲ ಅಲ್ವೇ? ಅದೇನು ಬಿಡ್ಸಿಹೇಳ್ರೀ’ ಧಮಕಿ ಹಾಕಿದಳು.

‘ನಿಂಗೆ ಪಂಡೋರಾ ಕಥೆ ಗೊತ್ತಾ? ಜಗತ್ತಿನ ಎಷ್ಟೋ ಸಮಸ್ಯೆಗಳು ಹುಟ್ಟಿಕೊಂಡದ್ದೇ ಈಕೆಯಿಂದ...!’

'ನೋಡಿ, ಮತ್ತೆ ತೆಗೆದ್ರಲ್ಲಾ ನಿಮ್ಮ ಬುದ್ಧೀನ...’

‘ಪೂರ್ತಿ ಹೇಳೋವರೆಗೂ ಕೇಳು- ಗ್ರೀಕ್ ಪುರಾಣದ ಪ್ರಕಾರ, ಜಗತ್ತಿನ ಅಪ್ರತಿಮ ಸುಂದರಿ ಪಂಡೋರಾ. ಆಕೆಗಿಂತ ಮೊದಲು ಭೂಮಿ ಮೇಲೆ ಬರೀ ಪುರುಷರೇ ಇದ್ರಂತೆ. ಆಗ ಎಲ್ಲಾ ಕಡೆ ಶಾಂತಿ, ಸುಭಿಕ್ಷತೆ, ಶಿಷ್ಟ ಶಕ್ತಿಗಳು ನೆಲೆಸಿದ್ವು... ದೇವರು ಆನಂತ್ರ ಅವಳನ್ನ ಸೃಷ್ಟಿಸಿ, ಕೈಗೆ ದೊಡ್ಡ ಭರಣಿಯೊಂದನ್ನು ಕೊಟ್ಟು, ಮುಚ್ಚಳ ತೆಗಿಬೇಡಾಂತ ಹೇಳಿದ. ಆದ್ರೆ ಅವಳು ಮುಚ್ಚಳ ತೆಗೆದುಬಿಡೋದೇ?! ಒಳಗಿದ್ದ ಎಲ್ಲಾ ದುಷ್ಟ ಶಕ್ತಿಗಳೂ ಒಮ್ಮೆಲೇ ಹೊರನುಗ್ಗಿ ಜಗತ್ತನ್ನೆಲ್ಲಾ ಕಷ್ಟ ಕೋಟಲೆಗಳು, ಅರಿಷಡ್ವರ್ಗ ಆವರಿಸಿಕೊಂಡವು!’

‘ಆದ್ರೆ ಅದಕ್ಕೂ ಈ ಪಂಡೋರಾ ಪೇಪರ್ಸ್‌ಗೂ ಏನ್ರೀ ಸಂಬಂಧ?’

‘ಇದೆ, ಈ ಪೇಪರ್‌ಗಳು ಜಗತ್ತಿನ ಪ್ರಭಾವಿ ರಾಜಕಾರಣಿಗಳು ಮತ್ತು ಶ್ರೀಮಂತರ ಕಳ್ಳ ಬಂಡವಾಳಗಳ ಮಾಹಿತಿಯನ್ನು, ಪಂಡೋರಾಳ ಪೆಟ್ಟಿಗೆಯಿಂದ ಹೊರಬಿದ್ದ ದುಷ್ಟ ಶಕ್ತಿಗಳಂತೆ ಬಯಲು ಮಾಡಿವೆ. ನಮ್ಮ ದೇಶದಲ್ಲಿ ದಿವಾಳಿ ಅಂತ ಘೋಷಿಸಿಕೊಂಡಿರುವ ಕೆಲವರೂ ಸೇರಿದಂತೆ ಮುನ್ನೂರು ಜನರ ಸಾವಿರಾರು ಕೋಟಿ ರೂಪಾಯಿ ಆಸ್ತಿಪಾಸ್ತಿ ತೆರಿಗೆರಹಿತ ದೇಶಗಳಲ್ಲಿದೆಯಂತೆ!’

‘ಭಾರತ ಸರ್ಕಾರ ಈ ಬಗ್ಗೆ ಸಮಗ್ರ ತನಿಖೆ ಮಾಡುತ್ತಂತಲ್ವೇ?’

‘ಆದ್ರೆ, ನಮ್ಮ ದೇಶದಲ್ಲಿ ತನಿಖಾ ವರದಿಗಳ ಗತಿ ಏನಾಗುತ್ತೆ ಅನ್ನೋದು ಗೊತ್ತೇ ಇದೆ!’

ಅರ್ಥವಾಗದೆ, ಮಡದಿ ನನ್ನತ್ತ ಪಿಳಿಪಿಳಿ ನೋಡಿದಳು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT