ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಹುಯ್ಯೋ ಮಳೆರಾಯ!

Last Updated 29 ನವೆಂಬರ್ 2021, 19:31 IST
ಅಕ್ಷರ ಗಾತ್ರ

‘ಹುಯ್ಯೋ ಹುಯ್ಯೋ ಮಳೆರಾಯ ಹೂವಿನಗಿಡಕೆ ನೀರಿಲ್ಲ’ ಅಂತ ತುರೇಮಣೆ ಗುನುಗ್ತಿದ್ದರು.

‘ಅಲ್ಲಾ ಸಾ, ಮಳೆ ತಾರಾಮಾರ ಹೂದು ಭಾಳಾ ಜನದ ಬಾಯಿಗೆ ಮಣ್ಣಾಕ್ಯದೆ. ನಿಮ್ಮ ಹಾಡು ಕೇಳಿದ್ರೆ ಅವರೆಲ್ಲಾ ಬಂದು ಕುತ್ತಿಗೆ ಮ್ಯಾಲೆ ಮಿದಿತರೆ ಅಷ್ಟೇಯ!’ ಅಂತ ಎಚ್ಚರಿಕೆ ಕೊಟ್ಟೆ.

‘ಅದ್ಯಾಕೆ ಮಿದಿತರ‍್ಲಾ? ತಗ್ಗಾಗಿರ ಕಡೆಗೆ ನೀರು ಹರಿದೋಗ್ಯದೆ. ನಾನು-ನೀನು ಏನು ಮಾಡಕ್ಕಾದದು! ಅಗ್ನಿಶಾಮಕದೋರು, ಪಾಪದ ಪೋಲೀಸಿನೋರು ಕಷ್ಟ ಬೀಳ್ತಾವ್ರೆ’ ಅಂದರು.

‘ಅಲ್ಲಾ ಸಾ, ಹಿಂಗೆ ಮನೆ ಒಳಿಕೆ ನೀರು ನುಗ್ಗಿದ್ರೆ ಕಷ್ಟ ಅಲ್ಲುವ್ರಾ? ಸರ್ಕಾರ ಏನು ಮಾಡ್ತಾ ಅದೆ?’

‘ಸರ್ಕಾರದ ಬಡ್ಡೇಲೆ ಇರೋ ಲ್ಯಾಂಡುರೋಗಿಗಳು ಬಂದು ರಾಜಾಕಾಲುವೆ ಅತ್ತಗೆ ನೂಕಿ ಕೆರೆ ಕಟ್ಟೆನೆಲ್ಲಾ ಬೊಗಸೇಲಿ ತಗಂಡು ಬಾಯಿಗಾಕ್ಕ್ಯಂಡು ಬಾಳಗೆಡಿಸವ್ರೆ. ಈಗ ಹಳ್ಳದ ಕಡೆಗೆ ನೀರು ನುಗ್ಗಿ ತೊಂದ್ರಾಗ್ಯದೆ ಅಂದ್ರೆ, ಕೆರೆಲೆಲ್ಲಾ ಅಪಾರ್ಟ್‌ಮೆಂಟ್ ಕಟ್ಟಕೆ ಪರ್ಮಿಶನ್ ಕೊಟ್ಟು ಪರ್ಸೆಂಟೇಜ್ ತಗಂಡಿರ ಎಂಜಿನೀರುಗಳನ್ನ ತರುಮಿಕ್ಯಬಂದು ಅದೇ ನೀರಗೆ ಮೂರು ಸಲ ಮುಳುಗಿಸಿ ಎರಡು ಸಲ ತಗೀಬೇಕು!’ ತಮ್ಮ ವಾದ ಮುಂದಿಟ್ಟರು.

‘ಕೋರ್ಟು ಕೆಂಡಾಗ್ಯದಂತೆ!’ ಅಂತಂದೆ.

‘ಕೋರ್ಟು ಎಷ್ಟೆಲ್ಲಾ ಮಕ್ಕುಗಿದರೂ ಬೇಜಾರು ಮಾಡಿಕ್ಯದೆ ಅಕ್ರಮ ಕಟ್ಟಡಕೆ ಅನುಮತಿ ಕೊಡ್ತಿರೋ ದುಡ್ಡಪ್ಪಗಳ ಇನ್‍ಕಂ ಜಾಸ್ತಿಯಾಗಿ ಟಾಯ್ಲೆಟ್ ಪೈಪಲ್ಲಿ ಹೆಂಗೆ ಔಟ್‍ಕಂ ಆಯ್ತಿತ್ತು ಅಂತ ನೋಡ್ದಲ್ಲಾ!’

‘ಸಿಗೆಬಿದ್ದೋರು ಇನ್ನು ದೂಟಿ ಮಾಡಂಗಿಲ್ಲವಲ್ಲ ಬುಡಿ ಸಾ!’

‘ನೋಡ್ಲಾ, ಇವುರ ಕರಪ್ಶನ್ ಡಿಕ್ಷನರೀಲಿ ಸರ್ಕಾರಿ ಕೆಲಸ ಅಂದ್ರೆ ಸ್ವಂತ ಲಾಭಕ್ಕೆ ನಿರಂತರವಾಗಿ ಪ್ರೇರೇಪಿಸೋ ಆಸೆಯ ಹಸಿವು. ಅದುನ್ನ ಪುರೈಸ್ಗಣಕೆ ಮತ್ತೆ ಬೇಗನೆ ವಾಪಾಸ್ ಬಂದು ಉಣ್ಣಕೆ ಮುದ್ದೇಗೆ ಎಸರಿಟ್ಟು ನಮ್ಮ ಕಂಠಕ್ಕೆ ಕವೆಗೋಲಾಕಿ ತಿರುವ್ತರೆ ಕನೋ’ ಅಂದು ಮಾತಲ್ಲೇ ಓಮಿಕ್ರಾನ್ ತೋರಿಸಿದರು! ಅಂದ್ರೆ ಮಾಸ್ಕಾಕ್ಯಂಡು ಬಾಯಿಮುಚ್ಕಂಡಿರಬೇಕು ಅಂತ ಅರ್ಥ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT