ಶುಕ್ರವಾರ, ಫೆಬ್ರವರಿ 26, 2021
20 °C

ಚುರುಮರಿ: ಕೇಳು ಜನಮೇಜಯ

ಲಿಂಗರಾಜು ಡಿ.ಎಸ್. Updated:

ಅಕ್ಷರ ಗಾತ್ರ : | |

Prajavani

‘ಪೆಟ್ರೋಲ್, ಡೀಜೆಲ್ ಸೆಂಚುರಿ ಬಾರಿಸ್ಯವೆ. ತೆರಿಗೆ, ದಿನಸಿ, ಗ್ಯಾಸು, ಕರಂಟು ಶಾಕು ಹೊಡೀತಾವೆ. ಬದುಕು ಕುರುಕ್ಷೇತ್ರ ಯುದ್ಧ ಆಗ್ಯದಲ್ಲಾ?’ ತುರೇಮಣೆಗೆ ಕೇಳಿದೆ.

‘ನೀನು ಆರ್ಥಿಕ ರಾಜಕೀಯದ ಮಹಾ ಭಾರತದೇಲಿ ಕರ್ಣ ಇದ್ದಂಗೆ, ಕೊಡದೆಲ್ಲಾ ಕೊಟ್ಟು ಅಮಿಕ್ಕಂಡಿರದಷ್ಟೇ ನಿನ್ನ ಕೆಲಸ. ಎಲ್ಲಾ ಅವನ ಕ್ರಿಯೆ ಕನಾ ಜನಮೇಜಯ!’ ಅಂದರು.

‘ವ್ಯವಸ್ಥೇಲಿ ನಾವು ಯಾತಕೂ ಸಲುವಲ್ಲದೋರಾ ಸಾ?’

‘ವ್ಯವಸ್ಥೇಲಿ 9 ಮನೆ ಇರತವೆ ತಿಳಕೋ ಜನಮೇಜಯ’ ಅಂದರು. ಇದೇನೋ ಒಂಥರಾ ವ್ಯರ್ಥಶಾಸ್ತ್ರದ ಗ್ರಹಕೂಟ ಇದ್ದಂಗದಲ್ಲಾ ಅನ್ನಿಸಿ ‘ಆಮೇಲ್ಸಾ?’ ಅಂದೆ.

‘ವ್ಯವಸ್ಥೆಯ ಮೂಲಾಧಾರ ಬಡವ ಕನೋ. ಎರಡನೇ ಮನೇಲಿರಾ ಶ್ರೀಮಂತನಿಗೆ ಬಡವನ್ನ ಗೋರಿಕ್ಯಂಡು ತಿನ್ನದೇ ಕೆಲಸ. ಮೂರನೇ ವರ್ಗದೇಲಿರ ಪೋಲೀಸು ಮೇಲಿನ ಎರಡು ವರ್ಗಕ್ಕೆ ರಕ್ಷಣೆ ಕೊಡಬೇಕು. ನಾಲ್ಕನೇ ಮನೇಲಿ ನನ್ನ-ನಿನ್ನಂತಾ ಮಧ್ಯಮ ವರ್ಗದ ಬಿಕನಾಸಿಗಳಿರತೀವಿ. ಮೇಲಿನ ಮೂರೂ ವರ್ಗಕ್ಕೂ ನಮ್ಮದೇ ಖರ್ಚು! ಒಳ್ಳೆ ದಿನ ಬತ್ತದೆ ಅಂತ ಭ್ರಮೆಯಲ್ಲೇ ಎಲ್ಲಾ ಬದುಕ್ತರೆ!’ ಅಂದರು.

‘ಮುಂದೆ ಸಾ!’

‘ಐದನೇ ಮನೇಲಿ ಬ್ಯಾಂಕರುಗಳಿರತರೆಕಲಾ. ನಾಲ್ಕೂ ವರ್ಗದ ದುಡ್ಡು ಇವರು ಮಡಿಕಂಡು ಉಳ್ಳೋರಿಗೇ ಕೊಡತರೆ. ಆರನೇ ಮನೇಲಿ ಕಾರ್ಯಾಂಗ ಇರತದೆ. ಮೇಲಿನ ಐದು ವರ್ಗಕ್ಕೂ ದಾರಿ ತಪ್ಪಿಸೋರು ಇವರೇಯ! ಏಳನೇ ಮನೇಲಿ ಪೋಲಿಪಕಾರುಗಳಿರತರೆ. ಇವರು ಎಲ್ಲ ಆರೂ ವರ್ಗಗಳನ್ನ ಹೆದರಿಸ್ಕ್ಯಂಡು ಬದಿಕ್ಕತರೆ. ಎಂಟನೇ ವರ್ಗ ಧರ್ಮಗುರುಗ
ಳದ್ದು. ಎಲ್ಲಾರೂ ಇವರ ಆಶೀರ್ವಾದ ಕೇಳತರೆ!’

‘ಒಂಬತ್ತನೇ ಗ್ರಹ ಯಾವುದು?’ ಅಂದೆ. ‘ಬೊಡ್ಡಿಹೈದ್ನೇ, ಒಂಬತ್ತನೇ ಮನೇ ರಾಜಕಾರಣಿಗಳದ್ದು. ಇವರು ಎಂಟೂ ವರ್ಗದವರ ತಲೆ ಸವರಿಕ್ಯಂಡು ಮಜವಾಗಿರೊತ್ಗೇ ನಮಗೆ ಈ ವಡಬಾಳು!’ ಅಂದ್ರು.

ಜನಮೇಜಯನ ಕತೆ ಕೇಳಿ ಚಂದ್ರು, ಯಂಟಪ್ಪಣ್ಣ ಬಗನಿ ಗೂಟ ಹೊಡಸಿಕ್ಯಂಡೋರಂಗೆ ಉಸೂರಂತಾ ವಾರೆಯಾಗಿ ಕುಂತಗಂಡ್ರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.