ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಎಸ್ ಬಿಗ್ ಬಾಸ್...

Published 5 ಡಿಸೆಂಬರ್ 2023, 23:13 IST
Last Updated 5 ಡಿಸೆಂಬರ್ 2023, 23:13 IST
ಅಕ್ಷರ ಗಾತ್ರ

‘ಇದು ಬಿಗ್ ಬಾಸ್... ಟೀಮ್ ಕ್ಯಾಪ್ಟನ್ ಕಮಲೇಂದ್ರ, ನಿಮಗೆ ಚಂಡಮಾರುತ ಹೊಡೆತದ ಅನುಭವ ಆಗಿದೆಯೇ? ಚಂಡಮಾರುತ ನಿಭಾಯಿಸುವ ನಿಮ್ಮ ಸಾಮರ್ಥ್ಯ ಪರೀಕ್ಷಿಸಲು ಬಿಗ್ ಬಾಸ್ ಇಚ್ಛಿಸುತ್ತಾರೆ’.

‘ತಕ್ಕಮಟ್ಟಿನ ಅನುಭವವಾಗಿದೆ ಬಿಗ್ ಬಾಸ್, ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿದರೆ ಚಂಡಮಾರುತವನ್ನು ನಿಯಂತ್ರಿಸಬಹುದು. ಚಂಡಮಾರುತದಿಂದ ಭಾರಿ ಮಳೆಯಾಗಿ ತಮಿಳುನಾಡಿನಲ್ಲಿ ಪ್ರವಾಹ ಬಂದಿದೆ. ಕಾವೇರಿ ನದಿಗೆ ‘ಘರ್ ವಾಪ್ಸಿ’ ಶಕ್ತಿ ಇದ್ದಿದ್ದರೆ ಪ್ರವಾಹದ ನೀರನ್ನು ಕರ್ನಾಟಕಕ್ಕೆ ವಾಪಸ್ ಹರಿಸಿಕೊಂಡು ಕೆಆರ್‌ಎಸ್ ತುಂಬಿಸಿ ತಮಿಳುನಾಡನ್ನು ಕಾಪಾಡಲು ಸಾಧ್ಯವಿತ್ತು...’

‘ಕಮಲೇಂದ್ರ, ಮುಂದೆ ಎದುರಾಗುವ ಪಾರ್ಲಿಮೆಂಟ್ ಚಂಡಮಾರುತ ನಿರ್ವಹಿಸಲು ಬಿಗ್ ಬಾಸ್ ನಿಮಗೆ ‘ಘರ್ ವಾಪ್ಸಿ’ ಟಾಸ್ಕ್ ನೀಡುತ್ತಿದ್ದಾರೆ. ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಶಿಕ್ಷಣ ಇಲಾಖೆಯ ‘ಮರಳಿ ಬಾ ಶಾಲೆಗೆ’ ಕಾರ್ಯಕ್ರಮದಂತೆ, ಪಕ್ಷ ಬಿಟ್ಟುಹೋಗಿರುವ ನಾಯಕರನ್ನು ವಾಪಸ್ ಕರೆ ತರಲು ‘ಮರಳಿ ಬಾ ಮನೆಗೆ’ ಎಂಬ ಚಟುವಟಿಕೆಯನ್ನು ಬಿಗ್ ಬಾಸ್ ನಿಮಗೆ ನೀಡುತ್ತಿದ್ದಾರೆ’.

‘ಆಗಲಿ ಬಿಗ್ ಬಾಸ್, ಮುನಿಸಿಕೊಂಡು ಮನೆ ಬಿಟ್ಟವರ ಮನವೊಲಿಸಿ ಕರೆತರುವ ಪ್ರಯತ್ನ ಮಾಡುತ್ತೇನೆ. ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಬೇಕು ಅಂತ ಅವರು ಬಯಸುತ್ತಾರೆ ಬಿಗ್ ಬಾಸ್...’

‘ವಾಪಸ್ ಬಂದವರಿಗೆ ಸ್ಥಾನದ ಗ್ಯಾರಂಟಿ ನೀಡುವುದಿಲ್ಲ, ಅದರೆ ಅವರ ಮಾನಕ್ಕೆ ಧಕ್ಕೆ ಯಾಗದಂತೆ ಬಿಗ್ ಬಾಸ್ ನೋಡಿಕೊಳ್ಳುತ್ತಾರೆ’.

‘ಓಕೆ ಬಿಗ್ ಬಾಸ್. ಆದರೆ, ಮನೆಯೊಳ ಗಿರುವ ಅಸಮಾಧಾನಿತರನ್ನು ನಿಭಾಯಿಸುವುದೇ ಸಮಸ್ಯೆಯಾಗಿದೆ. ಕೆಂಡಾಮಂಡಲವಾಗಿರುವ ಅವರು ನಮ್ಮ ನಾಯಕರ ವಿರುದ್ಧವೇ ಕೆಂಡಕಾರುತ್ತಿದ್ದಾರೆ. ಈ ಕೆಂಡಮಾರುತಕ್ಕೆ ತಾವು ಕಡಿವಾಣ ಹಾಕಬೇಕು ಬಿಗ್ ಬಾಸ್’.

‘ಕಮಲೇಂದ್ರ, ನೀವು ಬಿಗ್ ಬಾಸ್ ಆದೇಶವನ್ನು ಮಾತ್ರ ಪಾಲಿಸಬೇಕು, ಬಿಗ್ ಬಾಸ್‍ಗೇ ಆದೇಶ ಮಾಡುವಂತಿಲ್ಲ...’

‘ಸ... ಸರಿ ಬಿಗ್ ಬಾಸ್...’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT