ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಬೆಲೆ ಬೇನೆ

Last Updated 17 ಮೇ 2022, 19:45 IST
ಅಕ್ಷರ ಗಾತ್ರ

‘ಲೀಟರ್ ಪೆಟ್ರೋಲ್‍ಗಿಂತ ಕೇಜಿ ಟೊಮೆಟೊ ಬೆಲೆಯೇ ಜಾಸ್ತಿಯಾಗಿದೆ...’ ತರಕಾರಿ ತಂದು ಶಂಕ್ರಿ ಸಂಕಟ ಹೇಳಿಕೊಂಡ.

‘ಬಡಪಾಯಿ ಟೊಮೆಟೊ ಬೆಲೆ ಅಪರೂಪಕ್ಕೆ ಹೆಚ್ಚಾಗಿದೆ ಬಿಡ್ರೀ, ಕೆಲವು ಸಾರಿ ರಸ್ತೆಗೆ ಸುರಿಯುವಷ್ಟು ಬೆಲೆ ಕಳೆದುಕೊಳ್ಳುತ್ತದೆ’ ಎಂದಳು ಸುಮಿ.

‘ಟೊಮೆಟೊಗೆ ಗ್ರಹಚಾರ ಕೆಟ್ಟಿದೆ ಅನ್ಸುತ್ತೆ. ಟೊಮೆಟೊ ಹೆಸರು ಕೆಡಿಸಲು ಟೊಮೆಟೊ ಜ್ವರ ಬೇರೆ ಕಾಣಿಸಿಕೊಂಡಿದೆ... ಹಕ್ಕಿ ಜ್ವರ, ಹಂದಿ ಜ್ವರದಂತಹ ನಾನ್‍ವೆಜ್ ಜ್ವರಗಳ ಜೊತೆಗೆ ವೆಜಿಟೇರಿಯನ್ ಟೊಮೆಟೊ ಜ್ವರ ಹರಡುತ್ತಿದೆ’.

‘ಮುಂದೆ ಕುಂಬಳಕಾಯಿ, ಬದನೆಕಾಯಿ ಜ್ವರಗಳೂ ಬರಬಹುದು...’

‘ಟೊಮೆಟೊ ಜ್ವರ ಹರಡುತ್ತಿರುವುದರಿಂದ ಗೃಹಿಣಿಯರು ಅಡುಗೆಗೆ ಟೊಮೆಟೊ ಬಳಸಬೇಡಿ ಅಂತ ಟೀವಿ ಗುರುಗಳು ಹೇಳಬಹುದು, ನೀನು ನಂಬಬೇಡ’.

‘ನಂಬುವುದಿಲ್ಲ. ಆದರೆ ಜ್ವರ, ನೆಗಡಿಯಂಥ ಕಾಯಿಲೆಗಳು ಮಾತ್ರೆ, ಇಂಜೆಕ್ಷನ್‍ಗೆ ವಾಸಿಯಾಗ್ತವೆ. ಪೆಟ್ರೋಲ್, ಗ್ಯಾಸ್, ಅಡುಗೆಎಣ್ಣೆ ಬೆಲೆ ಏರಿಕೆಯ ಬೇನೆ ನಿಯಂತ್ರಣಕ್ಕೆ ಚಿಕಿತ್ಸೆನೇ ಇಲ್ವೇನ್ರೀ?’ ಸುಮಿಗೆ ಸಂಕಟ.

ಅಷ್ಟೊತ್ತಿಗೆ ಗ್ಯಾಸ್ ಏಜೆನ್ಸಿಯವ ಸಿಲಿಂಡರ್ ಡೆಲಿವರಿಗೆ ಬಂದ, ‘ಇಲ್ಲಾ ಮೇಡಂ, ಗ್ಯಾಸ್ ಬೆಲೆ ಬೇನೆಗೆ ಸರ್ಕಾರಿ ಚಿಕಿತ್ಸೆ ಇಲ್ಲ, ನೀವೇ ಮನೆ ಮದ್ದಿನಿಂದ ಕಾಯಿಲೆ ಕಂಟ್ರೋಲ್ ಮಾಡ್ಕೊಬೇಕು’ ಅಂದ.

‘ಗ್ಯಾಸ್ ರೇಟ್ ರೋಗಕ್ಕೆ ಮನೆ ಮದ್ದು ಇದೆಯಾ?!...’ ಸಿಲಿಂಡರ್ ದುಡ್ಡು ಕೊಡುತ್ತಾ ಸುಮಿ ಕೇಳಿದಳು.

‘ಇದೆ ಮೇಡಂ, ವಾರಕ್ಕೆ ಎರಡು ಮೂರು ದಿನ ಅಡುಗೆ ಮನೆ ಲಾಕ್‍ಡೌನ್ ಮಾಡಿ, ಬಾಯಿಗೆ ಮಾಸ್ಕ್ ಕಟ್ಟಿಕೊಂಡು ಉಪವಾಸ ಸತ್ಯಾಗ್ರಹ ಮಾಡಿ...’ ಅಂದ.

‘ಸರ್ಕಾರದ ವಿರುದ್ಧ ಸತ್ಯಾಗ್ರಹನಾ?’ ಶಂಕ್ರಿ ಕೇಳಿದ.

‘ಅಲ್ಲಾ ಸಾರ್, ನಿಮ್ಮ ಆರ್ಥಿಕ ದುಃಸ್ಥಿತಿ ವಿರುದ್ಧ ನೀವೇ ಹೋರಾಟ ಮಾಡಿದ್ರೆ ಗ್ಯಾಸ್ ಕಾಯಿಲೆ ಕಂಟ್ರೋಲಿಗೆ ಬರಬಹುದು... ಹೆಹ್ಹೆಹ್ಹೆ...’ ನಗುತ್ತಾ ಖಾಲಿ ಸಿಲಿಂಡರ್ ಎತ್ತಿಕೊಂಡು ಹೊರಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT