ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಪಟಾಕಿ ಪ್ರತಿಜ್ಞೆ

Last Updated 2 ನವೆಂಬರ್ 2021, 21:45 IST
ಅಕ್ಷರ ಗಾತ್ರ

‘ದೀಪಾವಳಿಗೆ ಹಾನಿಕಾರಕ ಪಟಾಕಿ ಹಚ್ಚಬೇಡಿ, ಬೇಕಾದ್ರೆ ಹಸಿರು ಪಟಾಕಿ ಹಚ್ಚಿರಿ...’ ಶಂಕ್ರಿ ಸಲಹೆ ಮಾಡಿದ.

‘ಯಾವ ಕಲರ್ ಪಟಾಕಿಯನ್ನೂ ಹಚ್ಚುವುದಿಲ್ಲಾ ಡ್ಯಾಡಿ, ಪಟಾಕಿರಹಿತ ಹಬ್ಬ ಆಚರಿಸುತ್ತೇವೆ’ ಎಂದ ಮಗ.

‘ಹೌದೂರೀ, ಈ ಬಾರಿ ಪಟಾಕಿ ಹಚ್ಚ ಬಾರದು ಅಂತ ಪ್ರತಿಜ್ಞೆ ಮಾಡಿದ್ದೇವೆ’ ಸುಮಿ ನಿರ್ಧಾರ ಪ್ರಕಟಿಸಿದಳು.

‘ನಾನು ನಂಬುವುದಿಲ್ಲ, ಲಂಚ ಪಡೆಯುವು ದಿಲ್ಲ ಎಂದು ವಿಧಾನಸೌಧದ ಅಧಿಕಾರಿಗಳೂ ಪ್ರತಿಜ್ಞೆ ಮಾಡಿದ್ದಾರೆ ಗೊತ್ತಾ?’ ಎಂದ ಶಂಕ್ರಿ.

‘ನಮ್ಮದು ಕಠಿಣ ಪ್ರತಿಜ್ಞೆ, ಉಲ್ಲಂಘಿಸುವುದಿಲ್ಲ’.

‘ಹೌದು ಡ್ಯಾಡಿ, ಶಬ್ದ ಕೇಳಬೇಕು ಅನಿಸಿದರೆ ತಟ್ಟೆ, ಜಾಗಟೆ ಹೊಡೆದು ಖುಷಿಪಡುತ್ತೇವೆ, ಬೆಳಕಿಗಾಗಿ ದೀಪ ಹಚ್ಚುತ್ತೇವೆ, ಪಟಾಕಿ ಮಾತ್ರ ಹಚ್ಚುವುದಿಲ್ಲ’ ಎಂದಳು ಮಗಳು.

‘ಪಟಾಕಿ ಹಚ್ಚುವುದರಿಂದ ಶಬ್ದಮಾಲಿನ್ಯ, ವಾಯುಮಾಲಿನ್ಯ ಆಗುತ್ತದೆ. ಅಲ್ಲದೆ, ಪಟಾಕಿ ಸುಡುವುದೆಂದರೆ ದುಡ್ಡು ಸುಟ್ಟಂತೆ, ಪಟಾಕಿ ದುಡ್ಡನ್ನು ಸತ್ಕಾರ್ಯಕ್ಕೆ ಬಳಸೋಣ ಅಂತ ಮಕ್ಕಳಿಗೆ ತಿಳಿವಳಿಕೆ ನೀಡಿ ಮನವೊಲಿಸಿದ್ದೇನೆ ಕಣ್ರೀ’ ಎಂದು ಸುಮಿ ಬೀಗಿದಳು.

‘ಪಟಾಕಿಯ ಉಳಿತಾಯದ ದುಡ್ಡನ್ನು ರಸ್ತೆ ಗುಂಡಿ ಮುಚ್ಚಲು ಸರ್ಕಾರಕ್ಕೆ ದೇಣಿಗೆ ಕೊಡ್ತೀರಾ?’ ಶಂಕ್ರಿ ಕೇಳಿದ.

‘ಪಟಾಕಿಯ ಚಿಲ್ಲರೆ ಹಣದಿಂದ ಸರ್ಕಾರದ ತೂತು ಮುಚ್ಚಲು ಸಾಧ್ಯವೇನ್ರೀ?’ ಸುಮಿ ಸಿಡುಕಿದಳು.

‘ಮೇಡಂ ಪಾರ್ಸಲ್ ಬಂದಿದೆ...’ ಎಂದು ಯಾರೋ ಬಾಗಿಲಲ್ಲಿ ಕರೆದಂತಾಯ್ತು. ಮಗಳು ಓಡಿಹೋಗಿ ಬಾಕ್ಸ್ ತಂದಳು.

‘ಹೊಸ ಮೊಬೈಲ್ ಬುಕ್ ಮಾಡಿದ್ವಿ ಡ್ಯಾಡಿ...’ ಮಗಳು ಖುಷಿಯಾಗಿ ಹೇಳಿದಳು.

‘ಮೊಬೈಲ್‍ಗೆ ಹಬ್ಬದ ಆಫರ್ ಇತ್ತೂರೀ, ಪಟಾಕಿಗೆ ದುಡ್ಡು ವೇಸ್ಟ್ ಮಾಡೋದು ಬೇಡಾಂತ ನಾನೂ, ಮಕ್ಕಳು ಒಂದೊಂದು ಹೊಸ ಮೊಬೈಲ್ ಆರ್ಡರ್ ಮಾಡಿದ್ವಿ... ತಗೊಳ್ಳಿ ಬಿಲ್ಲು, ಕೊರಿಯರ್‌ನವನಿಗೆ ಇದರ ದುಡ್ಡು ಕೊಟ್ಟು ಕಳಿಸಿ...’ ಎಂದು ಸುಮಿ ಮೊಬೈಲ್ ಬಾಕ್ಸ್ ಓಪನ್ ಮಾಡಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT