ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಗೊಂಬೆ ಹೇಳುತೈತೆ...

Last Updated 8 ಅಕ್ಟೋಬರ್ 2021, 20:30 IST
ಅಕ್ಷರ ಗಾತ್ರ

ಅನು ಗೊಂಬೆ ಅಲಂಕಾರ ಮಾಡಿದ್ದಳು. ಗೊಂಬೆಗಿಂತ ಚೆನ್ನಾಗಿ ತಾನು ಅಲಂಕಾರ ಮಾಡಿಕೊಂಡಿದ್ದಳು. ಮನೆಗೆ ಬಂದ ಹೆಂಗಸರು ಅನು ಅಲಂಕಾರ ನೋಡಿ ಖುಷಿ ವ್ಯಕ್ತಪಡಿಸಿದರೂ ಒಳಗೊಳಗೇ ಅಸೂಯೆಪಟ್ಟರು.

‘ಈ ಬಾರಿ ನಾನು ಪುರಾಣ, ಪುಣ್ಯಕಥೆಗಳ ಗೊಂಬೆ ಅಲಂಕಾರ ಮಾಡಿಲ್ಲ, ಪ್ರಚಲಿತ ಫಜೀತಿಗಳ ದೃಶ್ಯಾವಳಿ ರೂಪಿಸಿದ್ದೇನೆ’ ಎಂದಳು ಅನು.

‘ಇದು ಕೊರೊನಾ ಕಾಲದಲ್ಲಿ ಮಕ್ಕಳು ಆನ್‍ಲೈನ್ ಶಿಕ್ಷಣ ಕಲಿಯಲು ಮೊಬೈಲ್ ಹಿಡಿದು ಮೂಲೆಯಲ್ಲಿ ಕುಳಿತಿರುವ ದೃಶ್ಯ. ಪಕ್ಕದಲ್ಲಿ ಇದೆಯಲ್ಲ ಅದು ಮೊಬೈಲ್‍ನಿಂದ ಕಣ್ಣು ಮಂಜಾದ ಮಕ್ಕಳಿಗೆ ಶಾಲೆಯಲ್ಲಿ ನೇತ್ರ ತಪಾಸಣಾ ಶಿಬಿರ ನಡೆಸುತ್ತಿರುವ ದೃಶ್ಯ’ ಎಂದಳು.

‘ಗಂಡಸೊಬ್ಬ ಅಡುಗೆ ಮಾಡುತ್ತಿರುವ ಈ ದೃಶ್ಯ ಏನು?’ ಒಬ್ಬಾಕೆ ಕೇಳಿದಳು.

‘ಕೊರೊನಾ ರಜೆಯಲ್ಲಿ ಸ್ಕೂಲ್ ಮೇಷ್ಟ್ರಿಗೆ ಅವರ ಪತ್ನಿ ಹೋಂವರ್ಕ್ ನೀಡಿದ್ದಾರೆ. ಮೇಷ್ಟ್ರು ಮನೆಯಲ್ಲಿ ಬಿಸಿಯೂಟ ಸಿದ್ಧಮಾಡುತ್ತಿದ್ದಾರೆ’.

‘ಈ ದೃಶ್ಯದಲ್ಲಿ ಅಡುಗೆ ಮನೆಯಲ್ಲಿ ಗ್ಯಾಸ್ ಸ್ಟವ್ ಉರಿಯುತ್ತಿಲ್ಲ, ಆದರೂ ಮಹಿಳೆಯ ಬಟ್ಟೆಗೆ ಬೆಂಕಿ ಹೊತ್ತಿಕೊಂಡಿದೆಯಲ್ಲ ಏನಿದು?’ ಕೇಳಿದಳು ಇನ್ನೊಬ್ಬಳು.

‘ಬಟ್ಟೆಯಲ್ಲ, ಗ್ಯಾಸ್ ಬೆಲೆ ದುಬಾರಿಯಾಗಿಸ್ಟವ್ಬದಲು ಹೊಟ್ಟೆ ಉರಿಯುತ್ತಿದೆ ಎಂದು ಹೇಳುವ ಸನ್ನಿವೇಶ ಇದು...’ ಎಂದಳು ಸುಮಿ.

‘ರಾಜಕಾರಣಿಗಳು ಸಭೆ ನಡೆಸುತ್ತಿರುವ ಈ ದೃಶ್ಯಾವಳಿ ಏನು?’ ಮತ್ತೊಬ್ಬಳ ಪ್ರಶ್ನೆ.

‘ಇದು ಅಸೆಂಬ್ಲಿ ಮೀಟಿಂಗ್... ದಿನಬಳಕೆ ಪದಾರ್ಥಗಳ ಬೆಲೆ ಇಳಿಸುವ ವಿಚಾರದಲ್ಲಿ ಆಡಳಿತ-ವಿರೋಧ ಪಕ್ಷದವರ ಮಾರಾಮಾರಿ ಚರ್ಚೆಯ ದೃಶ್ಯ’.

‘ಪಕ್ಕದಲ್ಲಿರುವ ಗೊಂಬೆಗಳು ನಾಡಿನ ಪ್ರಜೆಗಳೇ?’

‘ಹೌದು, ಚರ್ಚೆ ಮಾಡುವ ಜನನಾಯಕರು ಬೆಲೆ ಇಳಿಸ್ತಾರೋ ಅಥವಾ ತಮ್ಮ ಬೆಲೆ ಏರಿಸಿಕೊಳ್ತಾರೋ ಅಂತ ತಿಳಿಯದೆ ಪ್ರಜೆಗಳು ಕನ್‍ಫ್ಯೂಸ್ ಆಗಿರುವ ದೃಶ್ಯ ಕಣ್ರೀ...’ ಎಂದು ತನ್ನ ಕಲಾಪ್ರತಿಭೆ ವಿವರಿಸುತ್ತಾ ತಾನೇ ರೋಮಾಂಚನಗೊಂಡಳು ಅನು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT