ಮಂಗಳವಾರ, ಜನವರಿ 18, 2022
27 °C

ಚುರುಮುರಿ: ಕೋವಿಡಣ್ಣನ ಸಭೆ

ಸುಮಂಗಲಾ Updated:

ಅಕ್ಷರ ಗಾತ್ರ : | |

Prajavani

ಹಿರಿ ಕೋವಿಡಣ್ಣನ ಅಧ್ಯಕ್ಷತೆಯಲ್ಲಿ ಮರಿ, ಕಿರಿ ಕೋವಿಡ್ಡುಗಳೆಲ್ಲ ಸಭೆ ಸೇರಿದ್ದವು.

‘ಕರುನಾಡಿನಲ್ಲಿ ಕೊರೊನಾ ಎಲ್ಲೈತೆ? ಒಬ್ಬರಾದ್ರೂ ಐಸಿಯುನಲ್ಲಿ ಮಕ್ಕಂಡಿದಾರಾ?’ ಎಂಬ ಡಿಕೇಶಣ್ಣನ ಪ್ರಶ್ನೆಯ ಕೂರಂಬು ಹಿರಿ ಕೋವಿಡಣ್ಣನ ಎದೆಯ ಹೊಕ್ಕಿತ್ತು.

‘ಏನ್ರಲೇ... ಕೊರೊನಾ ಎಲ್ಲೈತೆ ಅಂತ ಕೇಳ್ತಾವರೆ... ನೀವೆಲ್ಲ ಎಲ್ಲಿ ತಣ್ಣಗೆ ಬಿದ್ಕಂಡಿದೀರಿ’ ಎಂದು ಹಿರಿ ಕೋವಿಡಣ್ಣ ಗುಡುಗಿದ.

‘ಡೆಲ್ಟಾ ಸಾಕು, ಓಮೈಕ್ರಾನ್ ವೇಷ ಹಾಕ್ಕಂಡು ಹೋಗ್ರಿ ಅಂತ ನೀನು ಹೇಳಿದಂಗೇ ಮಾಡಾಕೆ ಹತ್ತೀವಿ’ ಒಂದು ಮರಿ ಕೋವಿಡ್ಡು ತುಸು ಧೈರ್ಯದಿಂದ ಉಸುರಿತು.

‘ಈಗ ನಮ್ಮ ಬಗ್ಗೆ ಯಾರಿಗೂ ಭಯಭಕ್ತಿ ಏನೂ ಉಳಿದಿಲ್ಲ. ವೀಕೆಂಡು ಕರ್ಫ್ಯೂ ಅಂತಾರೆ... ನೋಡಿದ್ರೆ ಗೃಹ ಸಚಿವರ ಹುಟ್ಟೂರಿನಲ್ಲೇ ಜಾತ್ರೆ ನಡೆಸ್ತಾರೆ, ಇನ್ನೆಲ್ಲೋ ಕುರಿ ಸಂತೆ ನಡೆಸ್ತಾರೆ. ಏನೇನೋ ಸುಡುಗಾಡು ಸುಂಟಿಕೊಂಬು ಪ್ರಚಾರ, ಸಭೆ, ಸಮ್ಮೇಳನ ಅಂತ ಗುಂಪುಗೂಡ್ತವರೆ, ಮುಖಕ್ಕೆ ಮಾಸ್ಕೂ ಇಲ್ಲದೆ ರಾಜಾರೋಷವಾಗಿ ಓಡಾಡ್ತವರೆ’ ಹಿರಿ ಕೋವಿಡಣ್ಣ ಮತ್ತೆ ಗುಡುಗಿದ.

‘ನಾವೇನ್ ಸುಮ್ಮನೆ ಕುತ್ತಿಲ್ಲ... ಒಂದೇ ದಿನದಾಗೆ ಕರುನಾಡಿನಾಗೆ ಎಂಟು ಸಾವಿರಕ್ಕೂ ಹೆಚ್ಚು ಮಂದಿ ಮ್ಯಾಲೆ, ದೇಶದಾಗೆ ಸುಮಾರು ಒಂದೂವರೆ ಲಕ್ಷ ಮಂದಿ ಮ್ಯಾಲೆ ದಾಳಿ ನಡಿಸೀವಿ, ಅವರ ಮನೆ ಮೇಲೆ ಕೊರೊನಾ ಧ್ವಜ ಹಾರಿಸಿದೀವಿ’ ಇನ್ನೊಂದು ಕಿರಿ ಕೋವಿಡ್ಡು ಅಂಕಿಸಂಖ್ಯೆ ಮುಂದಿಟ್ಟಿತು.

‘ಏನೇ ಹೇಳಪೋ... ಭರತಖಂಡದ ರಾಜಕಾರಣಿಗಳ, ಕೂಗುಮಾರಿಗಳ ವೀರನಾಲಿಗೆಗಳ ಮುಂದೆ ಯಾರೂ ಗೆಲ್ಲೋದಕ್ಕೆ ಆಗಲ್ಲ, ಅಬ್ಬಬ್ಬ...’ ಎಂದು ಮುದಿ ಕೋವಿಡ್ಡು ಒಂದು ಗೊಣಗಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.