ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ದೀಪಾವಳಿ ಭವಿಷ್ಯ

Last Updated 1 ನವೆಂಬರ್ 2021, 22:00 IST
ಅಕ್ಷರ ಗಾತ್ರ

ಶನಿ, ರಾಹು-ಕೇತುಗಳ ಕ್ರೂರ ದೃಷ್ಟಿಯಿಂದ ಸಾಮಾನ್ಯರಿಗೆ ಸೋಲಾಯಮಾನ ಸ್ಥಿತಿ ಕಾಡಲಿದೆ. ಭಾರತೀಯ ಕ್ರಿಕೆಟ್ ವೀರರಿಗೆ ಸಾಡೆಸಾತಿಯ ಪ್ರಭಾವದಿಂದ ನಿರಂತರ ಅಪವಾದ ಭಯ. ಕೊರೊನಾ ಕಾಲದಲ್ಲಿ ಧನ್ವಂತರಿ ಸ್ತೋತ್ರ ಪಠಣೆಯಿಂದ ಅನುಕೂಲ.

ರಾಜಕೀಯದ ಕೀಳು ಬೈಗುಳಗಳ ಪಟಾಕಿಯ ದುರ್ವಾಸನೆಯಿಂದ ಸಾಮಾನ್ಯರಿಗೆ ಉಬ್ಬಸ ಸಾಧ್ಯತೆ. ಅಕ್ರಮಾದಿತ್ಯರಲ್ಲಿ ಸ್ವಕರ್ಮಾ ಸಕ್ತಿ ಹೆಚ್ಚುವುದರಿಂದ ಸಾರ್ವಜನಿಕ ಹಣ ದುರ್ವ್ಯಯ. ಕೈ-ತೆನೆಗಳ ನಾಯಕರಿಂದ ಅಧಿಕಾರದ ನಿರಂತರ ಕನವರಿಕೆ, ಸ್ವಜನವೈರ, ನಿದ್ರಾನಾಶ, ದ್ವೇಷ ಭಾವನೆ ಹೆಚ್ಚಳ. ಕಮಲಮುಖಿಗಳು 1008 ಬಾರಿ ‘ಸಾರುವ ಭೌಮಾ ನಮೋ, ನಮೋ’ ಎಂಬ ಶಾ-ಕ್ತ ಮಂತ್ರ ಜಪಿಸುವುದರಿಂದ ಕಾರ್ಯಸಿದ್ಧಿ.

ರಾಜ್ಯದಲ್ಲಿ ಪಟಿಂಗ ಮಂತ್ರಿಗಳಿಗೆ, ಶಾಸಕರಿಗೆ ಬಾಯಿಬೀಗ ಹಾಕುವುದರಿಂದ ಶಬ್ದಮಾಲಿನ್ಯ ಇಳಿದೀತು. ಕಾಮಗಾರಿ ಬಿಲ್ಲುಗಾರರಿಗೆ ಹಸ್ತ ಚಾಪಲ್ಯ ಹೆಚ್ಚಳ. ಪರಿಷತ್ ಪಟುಗಳು ಪ್ರಚಾರಪ್ರಿಯತೆ ಬಿಟ್ಟು ಕನ್ನಡ ಕೈಂಕರ್ಯ, ಭುವನೇಶ್ವರಿ ಆರಾಧನೆ ಮಾಡಿದಲ್ಲಿ ಉತ್ತಮ ಫಲ.

‘ಗ್ಯಾಸ್ಫೋಟನ ಮತ್ತು ಬೆಲೆ ಏರಿಕೆಯಿಂದ ಜನರೇನೂ ಆಕ್ರೋಶಗೊಂಡಿಲ್ಲ’ ಎಂದು ಭಗವಂತನು ಆದೇಶ ನೀಡಿದ್ದು, ಇಂಧನ ದರ ಯುಗಾದಿಯ ವೇಳೆಗೆ ದ್ವಿಶತಕ ಬಾರಿಸುವ ಸಾಧ್ಯತೆ ಇದೆ. ಧನವ್ಯಯದಿಂದ ಕಂತುಪಿತರಿಗೆ ಇಎಂಐ ತತ್ವಾರವು. ಮಧ್ಯಮ ವರ್ಗವು ‘ಬ್ಯಾಕ್ ಟು ಬೇಸಿಕ್ಸ್’ ಪ್ರಕಾರ ಸೌದೆ ಒಲೆ ಬಳಸಿ, ಕ್ಯಾಂಡಲ್ ಉರಿಸಿ, ವಾಹನಗಳಿಗೆ ವಿಶ್ರಾಂತಿ ಯೋಗ ನೀಡುವುದರಿಂದ ಆರ್ಥಿಕ ಆರೋಗ್ಯ ಲಾಭ. ರೈತ ವರ್ಗಕ್ಕೆ ಧಾನ್ಯಹಾನಿ, ಮನೋವ್ಯಥೆ.

ಕರ್ನಾಟಕ ಲೋಪಸೇವಾ ಆಯೋಗದ ಹುದ್ದೆ ನಂಬಿದ ಯುವಕರಿಗೆ ಉದ್ಯೋಗ ನಾಸ್ತಿ. ಲಂಚ ಸ್ವೀಕರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರೂ ಹಣಾನುಬಂಧ ತಪ್ಪದು. ಐಟಿಗಳಿಂದ ಖೂಳರ ಊರುಭಂಗ. ಮೇಲ್ವರ್ಗಕ್ಕೆ ಸನ್ ಸ್ಟ್ರೋಕ್ ಸಾಧ್ಯತೆ ಹೆಚ್ಚುವುದ ರಿಂದ ಯಶೋಹಾನಿ. ಲ್ಯಾಂಡುರೋಗಿಗಳಿಂದ ಭೂ-ಚೇಷ್ಟೆ ಹೆಚ್ಚುವುದು. ಆರ್ಥಿಕರಂಗದಲ್ಲಿ ಬಿಟ್‍ಕಾಯಿನ್ ಕೃಷ್ಣಲೀಲೆಯಿಂದ ಅಲ್ಲೋಲ ಕಲ್ಲೋಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT