ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ| ಹಿಂದಿಯೇ ಮುಂದೆ!

Last Updated 24 ಜನವರಿ 2021, 19:31 IST
ಅಕ್ಷರ ಗಾತ್ರ

‘ಹಿಂದಿ ವಿಶಾರದ ಪರೀಕ್ಷೆ ಕಟ್ತೀನಿ ಅಂದ್ರ ಬ್ಯಾಡ, ಹಿಂದಿ ವೋದಿ ಏನ್ ಕಟ್ಟೆ ಕಡೀತಿ ಅಂತ ಬೈತಿದ್ದಿ. ಈಗ ನೋಡು... ರಂಗಜ್ಜಾರು ಹೇಳ್ಯಾರ, ಇಂಗ್ಲಿಷಿಗೆ ಮಣೆ ಹಾಕ್ತೀರಿ, ಹಿಂದಿಗೆ ಎದಕ್ಕ ವಿರೋಧ ಮಾಡ್ತೀರಿ, ಅದ್ ನಮ್ಮ ರಾಷ್ಟ್ರಭಾಷೆ ಅಂತ’ ಬೆಕ್ಕಣ್ಣ ಧುಸುಮುಸು ನಡೆಸಿತ್ತು.

‘ಹಿಂದಿ ಭಾಷೆಗೆ ವಿರೋಧ ಅಲ್ಲಲೇ... ಸುಮ್ಸುಮ್ನೆ ಹಿಂದಿ ಹೇರಿಕೆ ಮಾಡಬ್ಯಾಡ್ರಿ ಅಂತ ವಿರೋಧ. ಮೊನ್ನೆ ನೋಡೀಯಿಲ್ಲೋ... ನಿಮ್ಮ ಶಾಣೇ ಅಂಕಲ್ ಭದ್ರಾವತಿವಳಗ ಆರ್‌ಎಎಫ್‌ ಘಟಕ ಉದ್ಘಾಟನೆ ಮಾಡಿದ್ರ ಬೋರ್ಡಿನಾಗೆ ಕನ್ನಡನ ಇದ್ದಿಲ್ಲಂತ, ಬರೇ ಇಂಗ್ಲಿಷ್‌ ಮತ್ತೆ ಹಿಂದಿವಳಗ ಹೆಸರು ಬರೆಸಿದ್ದರಂತ...’ ಎಂದೆ.

‘ರಂಗಜ್ಜಾರು ಹೇಳೂದು ಖರೇನೆ ಐತಿ... ಈ ಸಲ ಸಾಹಿತ್ಯ ಸಮ್ಮೇಳನದಾಗೂ ಇದೇ ಠರಾವು ಮಂಡಿಸೂ ಹಂಗ ಕಾಣ್ತರ...’ ಎಂದು ವರಾತ ಮುಂದುವರಿಸಿತ್ತು.

‘ಅಲ್ಲಲೇ... ಹಂಪನಾ ಅನ್ನದಾತ ರೈತರ ಪರವಾಗಿ ಮಾತಾಡಿದ್ರ ನಿಮ್ಮ ಮೋದಿಮಾಮಾನ ವಿರೋಧಿ ಅಂತ ಪೊಲೀಸ್ ಠಾಣೆಗೆ ಕರೆಸಿ ವಿಚಾರಿಸ್ತಾರ. ರಂಗಜ್ಜಾರು ಇಷ್ಟ್ ಹಿಂದಿ ಭಾಷೆ ಹೊಗಳಾಕೆ ಹತ್ಯಾರ ಅಂದ್ರ ಜ್ಞಾನಪೀಠದ ಮಣೆಹಾಕಿ ಕೂರಸ್ತಾರ ಬಿಡು’ ಎಂದು ಕಿಚಾಯಿಸಿದೆ. ಮೂತಿಯುಬ್ಬಿಸಿಕೊಂಡು ಕೂತ ಬೆಕ್ಕಣ್ಣ ಬೆರಳು ಮಡಚಿ, ತೆಗೆದು ಏನೋ ಲೆಕ್ಕಾಚಾರ ನಡೆಸಿತ್ತು.

‘ಇನ್ಮ್ಯಾಲೆ ಕ್ರಿಸ್ತಪೂರ್ವ, ಕ್ರಿಸ್ತಶಕ ಅನ್ನೂದು ಬಿಟ್ಟು, ಮೋದಿಪೂರ್ವ, ಮೋದಿಶಕ ಅನ್ನಬೇಕಂತ ಕಟೀಲುಮಾಮಾ ಹೇಳ್ಯಾರ. ಅದಕ್ಕ ಇಸ್ವಿಲೆಕ್ಕ ಮಾಡೂದು ಕಲಿಯಾಕ ಹತ್ತೀನಿ. ಮೋದಿಪೂರ್ವ ಅಂದ್ರ ಅಂಧಕಾರಯುಗ, ಹಿಮಯುಗ. ಮೋದಿಶಕ ಅಂದ್ರ...’ ನಾನು ನಡುವೆ ಬಾಯಿ ಹಾಕಿ, ‘ಡಿಮಾನಿಟೈಸೇಶನ್ನಿಂದ ತಿಂಗಳುಗಟ್ಟಲೆ ನಡೆಸಿರೂ ರೈತರ ಪ್ರತಿಭಟನೆ
ವರೆಗೆ ಎಷ್ಟಕೊಂದು ಸಾಧನಾ ಮೈಲುಗಲ್ಲು ಅದಾವು, ಎಲ್ಲಾನೂ ಸರಿಯಾಗಿ ಲೆಕ್ಕ ಹಾಕಲೇ’ ಎಂದೆ.

‘ಏನರ ಕೊಂಕು ತೆಗಿಬ್ಯಾಡ. ನೋಡೀಯಿಲ್ಲೋ... ಈಗ ಬಂಗಾಳದ ದುರ್ಗಾಮಾತೆನೂ ಕೈಯಾಗ ಕಮಲ ಹಿಡ್ಕಂಡವಳೆ’ ಎಂದು ವಾಪಸು ನನಗೇ ಜಬರಿಸಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT