ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಕೊನೆಯ ನಗು!

Last Updated 7 ಮೇ 2021, 20:00 IST
ಅಕ್ಷರ ಗಾತ್ರ

ಬೆಳ್ಳಂಬೆಳಿಗ್ಗೆ ಮನೆಗೆಲಸದ ಮಮ್ತಾಜ್ ‘ದೀದಿ ದೀದಿ’ ಎಂದು ಬಾಗಿಲು ಬಡಿದಳು.

ಕೂಲಿ ಕೆಲಸಕ್ಕೆ ಹೋಗುವುದರೊಳಗೆ ನಮ್ಮ ಮನೆಕೆಲಸ ಮಾಡಬೇಕಿದ್ದುದರಿಂದ ಮುಂಜಾನೆಯೇ ಕೆಲಸಕ್ಕೆ ಬರುತ್ತಿದ್ದಳು.

‘ದಾದಾ’ ಎಂದು ಕರೆಯುತ್ತಿದ್ದಂತೆ ಬಾಗಿಲು ತೆರೆಯುತ್ತಿದ್ದೆ. ಇವತ್ತು ‘ದೀದಿ’ ಎನ್ನುತ್ತಿದ್ದಾಳೆ! ದೀದಿಯೇ ತೆರೆಯಲಿ ಎಂದು ಸುಮ್ಮನಿದ್ದೆ.

‘ಕೂಗ್ತಿರೋದು ಕೇಳಿಸ್ತಿಲ್ವೇನ್ರೀ?’- ಬಂದೇಬಿಡ್ತು ಫರ್ಮಾನ್.

‘ಕರೆದದ್ದು ನಿನ್ನನ್ನ’ ಎಂದು ಮೆಲ್ಲಗೆ ಗೊಣಗಿಕೊಳ್ಳುತ್ತಾ ಬಾಗಿಲು ತೆರೆದೆ.

‘ಇನ್ಮೇಲೆ ಹೆಸ್ರು ನನ್ನದಾದ್ರೂ ಕೆಲ್ಸ ನಿಮ್ದೇ... ನೋಡಿದ್ರಲ್ಲಾ, ಮೋದಿಗಿಂತ ದೀದಿಯೇ ಮೇಲು. ಮುಖ್ಯಮಂತ್ರಿಯಾಗಿ ಹ್ಯಾಟ್ರಿಕ್ ಹೊಡೆದೇಬಿಟ್ರು!’

‘ಮಮ್ತಾಜ್, ದೀದಿ ಕಡೆಗೆ ಯಾಕೆ ಪಕ್ಷಾಂತರ ಮಾಡಿದ್ಳೂಂತ ಗೊತ್ತಾಯ್ತು’.

‘ಮನೆಯ ಮಗಳ ಮೇಲೆ ‘ಶಾ’ಣೇರು ಮಾಡಿದ ಮೋಡಿ(ದಿ) ಏನೂ ವರ್ಕ್ಔಟ್‌ ಆಗ್ಲಿಲ್ವಲ್ಲ. ವ್ಹೀಲ್ ಚೇರಿನಲ್ಲೇ ಶುರು ಮಾಡಿದ ಆಟದಲ್ಲಿ ಆಕೇದೇ ಕೊನೇ ನಗು!’ ಎಂದು ಗಹಗಹಿಸಿ ನಕ್ಕಳು.

ವಿಷಯಾಂತರಿಸಲು, ‘ಯಾಕೆ ಹಾಗೆ ನಗ್ತೀಯ? ವಿಶ್ವ ನಗುವಿನ ದಿನ ಮುಗಿದು ಹೋಯ್ತಲ್ಲ?’ ಎಂದೆ.

‘ಹೆಂಗಸರ ಮೇಲೆ ಮೀಸೆ ತಿರುಗಿಸೋ ನಿಮ್ಮಂಥೋರಿಗೆ ನಾಚ್ಕೆಯಾಗ್ಬೇಕು... ಗೊತ್ತಿದೆಯಲ್ಲ, ಕೇರಳದ ಚುನಾವಣೇಲಿ ಶೈಲಜಾ ಟೀಚರ್ ಅರವತ್ತೊಂದು ಸಾವಿರ ಮತಗಳ ಅಂತರದಿಂದ ಗೆದ್ದು ದಾಖಲೆ ಮಾಡಿದ್ದು!’

‘ಅಷ್ಟೊಂದು ವೋಟು ಹೇಗೆ ಬಂದವೋ?’

‘ಕೊರೊನಾ ಕಾಲದಲ್ಲಿ ದಕ್ಷತೆಯಿಂದ ಕೆಲಸ ಮಾಡಿರೋ ಮೂವರು ವಿಶ್ವ ನಾಯಕಿಯರಲ್ಲಿ ಅವರೊಬ್ರು. ಆರೋಗ್ಯ ಮಂತ್ರಿಯಾಗಿದ್ದ ಆಕೆ ಆಮ್ಲಜನಕ ಉತ್ಪಾದನಾ ಘಟಕಗಳನ್ನ ಸ್ಥಾಪಿಸಿ ಬೇರೆ ರಾಜ್ಯಗಳಿಗೂ ಆಮ್ಲಜನಕ ಕೊಟ್ರಂತೆ’!

ಅಷ್ಟರಲ್ಲಿ ಮಮ್ತಾಜ್ ಪೇಪರ್ ತಂದಿಟ್ಟಳು. ‘ಆಮ್ಲಜನಕದ ಕೊರತೆಯಿಂದ ಇಪ್ಪತ್ನಾಲ್ಕು ಜನರ ಸಾವು... ಮುಖ್ಯಮಂತ್ರಿ ಮನೆ, ವಿಧಾನಸೌಧದ ಮುಂದೆ ಕೊರೊನಾ ಸೋಂಕಿತರ ಗೋಳು... ದುಡ್ಡಿಗಾಗಿ ಬೆಡ್ಡು...’

ಉಸಿರು ಕಟ್ಟಿದಂತಾಗಿ ಕೆಮ್ಮಿದೆ. ನನ್ನಾಕೆಯ ಕುಟುಕು, ‘ವಿಶ್ವ ಅಸ್ತಮಾ ದಿನ ಬಂದು ಹೋಯ್ತಲ್ಲಾ’!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT