ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ಕೊರೊನಾ ವೈರಾಗ್ಯ

Last Updated 13 ಜುಲೈ 2020, 20:19 IST
ಅಕ್ಷರ ಗಾತ್ರ

‘ಸಾ, ಬೆಂಗಳೂರಲ್ಲಿ ಕೊರೊನಾ ನಿಯಂತ್ರಣಕ್ಕೆ ಎಂಟು ಜನ ಕಷ್ಟ ದಿಕ್ಪಾಲಕರನ್ನ ನೇಮಕ ಮಾಡ್ಯವರಂತೆ. ನಾವೆಲ್ಲಾ ಮನೇಲೇ ಇದ್ದು ಮಕ್ಕೆ ಮಾಸ್ಕಾಕಿಕೊಂಡು ಮಾಸ್ಕಂಡೇಯರಾಗಿರಬೇಕು ಸಾ!’ ಅಂತ ಮಾಸ್ಕ್ ಹಾಕಿರದ ತುರೇಮಣೆ ನೋಡಿಕ್ಯಂಡು ಭಾಷಣ ಮಾಡಿದೆ.

‘ಅಡ್ನಾಡಿ ನನ ಮಗನೇ, ಯಡುರಪ್ಪಾರು ಕ್ವಾರಂಟೈನಾಗಿ ಯಯಾತಿ ಬುಕ್ಕು ಹಿಡಕಂದು ಕುಂತವರೆ ಅಂದ್ರೆ ರಾಜಕೀಯದಲ್ಲಿ ಹೊಸ ರಕ್ತ ಹರಿಯೋ ಸೂಚನೆ ಅದೆ ಕನೋ’ ಅಂದ್ರು.

‘ಅಲ್ಲಾ ಸಾ, ತಿರುಪತೀಲಿ 200 ಕೋಟಿ ಖರ್ಚು ಮಾಡಿ ಸವತಿ ಸಮುಚ್ಚಯ ಯಾಕೆ ನಿರ್ಮಿಸ್ತಾವರೆ?’ ಅಂತಂದೆ. ತುರೇಮಣೆಗೆ ಸಿಟ್ಟು ಬಂದೋಯ್ತು. ‘ಲೋ ಅವೇಗ್ಯ, ಅದು ಸವತಿ ಸಮುಚ್ಚಯ ಅಲ್ಲಾ ಕಲಾ ವಸತಿ ಸಮುಚ್ಚಯ. ಕೊರೊನಾ ಕಾಲದಲ್ಲಿ ಲೆಕ್ಕ ಕೇಳೋರು ಸರ್ವನಾಸಾಗ್ಲಿ ಅಂತ ಸರ್ಕಾರ ತಿಮ್ಮಪ್ಪನಿಗೆ ಹರಕೆ ಕಟ್ಟಿಗ್ಯಂಡದಂತೆ ಕನಲಾ’ ಅಂತಂದ್ರು.

‘ಇರಬೌದು ಬುಡಿ, ಸರ್ಕಾರ ಕೊರೊನಾ ಲೇಣೆದೇಣೆ ಸರಿಯಾಗಿ ಮಡಗಿಲ್ಲ ಅಂತ ಸಿದ್ದರಾಮಣ್ಣ ಬಾರಾ ನಮೂನೆ ಪ್ರಶ್ನೆ ಹಾಕ್ಯವರೆ. ಸಿದ್ದರಾಮಣ್ಣನಿಗೆ ಒಳೇಟು ಕೊಡಕೆ ಅವರ ಗರಡಿ ಹಳೇ ಪೈಲ್ವಾನುಗಳನ್ನೇ ಬುಟ್ಟವರಂತೆ ಕನಾ ಸಿಎಮ್ಮು. ಹ್ಯಂಗೋ ಕುಮಾರಣ್ಣನೇ ಪರವಾಗಿಲ್ಲ ಕಣೀ ಸಾ. ‘ಇದು ಲೇವಾದೇವಿ ಕೇಳಾ ಕಾಲ ಅಲ್ಲ! ಕಾಂಗ್ರೇಸ್‍ನೋರಿಗೆ ಕಣ್ಣೆಸರಾಗದೆ. ಅವುರ‍್ನ ಮಾತಾಡಿಸಿಕ್ಯಂಡು ಪ್ಯಾರ್ ದರ್ಶಕವಾಗಿ ಕೆಲಸ ಮಾಡಿ’ ಅಂದವುರೆ. ಜೊತೆಗೆ ನಾನು ನಿಮ್ಮ ಹಿಂದೆ ಅವನಿ ಅಂತ್ಲೂ ಬಾಸೆ ಕೊಟ್ಟವ್ರೆ ಯಡೂರಪ್ಪಾರಿಗೆ!’ ಅಂದೆ.

‘ಅದೇ ಕನಪ್ಪಾ ಕಷ್ಟ! ಈ ಕೊರೊನಾ ವೈರಾಗ್ಯ ಯಾಕೋ ಕಾಣೆ!’ ಅಂತ ಸುಮ್ಮಗಾದರು.

‘ಅದು ಹ್ಯಂಗನ್ನಾ ಇರಲಿ, ಕೊರೊನಾ ಬೆಂಗಳೂರು, ಮೈಸೂರು, ಕಲಬುರ್ಗಿ, ಉಡುಪಿ, ಬೆಳಗಾವಿ ಬಾಗಿಲಲ್ಲಿ ಕುಂತು ಕಾರ್‍ಕಾರ್ ಅಂತ ಕೂಗ್ತಾ ಅದಲ್ಲಾ ಸಾ’ ಅಂದೆ.

‘ನೋಡ್ಲಾ, ಇಲ್ಲೀವರೆಗೂ ಡೌಲ್‍ಸೀನ್ ನೋಡಿದ್ದಾಯ್ತು. ಈಗ ಒಂದ್ವಾರ ಲಾಕ್‍ಡೌನ್ ಮಾಡಕೆ ಹೊಂಟವರೆ. ಕೊರೊನಾ ಮಾರಮ್ಮನ ಡೌಲ್‍ನಾಕ್ ಆಗಬೇಕು ಕನೋ’ ಅಂದ್ರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT