ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ | ಭಯಸ್ಕರ ವ್ಯಾಕರಣ

Published 9 ಜುಲೈ 2024, 0:55 IST
Last Updated 9 ಜುಲೈ 2024, 0:55 IST
ಅಕ್ಷರ ಗಾತ್ರ

ತುರೇಮಣೆ, ಯಂಟಪ್ಪಣ್ಣ ವ್ಯಾಕರಣ ಪುಸ್ತಕ ಓದ್ತಾ ಕುಂತುದ್ರು. ‘ಇದೇನ್ಸಾ ಕುಡಿಯೋ ವಯಸ್ಸಲ್ಲಿ ನಡಿಯೋದನ್ನ ಕಲೀತಾ ಇದ್ದೀರಿ! ನಿಮಗ್ಯಾಕೆ ವ್ಯಾಕರಣದ ಹುಚ್ಚು?’ ಅಂತಂದೆ.

‘ವಯಸ್ಸಾಯ್ತಾ ಆಯ್ತಾ ಜೀವನದ ಗ್ರಾಮರ್‌ ತಿಳಕಬಕು ಕಲಾ! ಅಜ್ಜ-ಅಜ್ಜಿ, ಅಪ್ಪ-ಅಮ್ಮ ಅಂದ್ರೆ ಅರ್ಥಾಗದ ಹಳೆಗನ್ನಡ. ಅತ್ತೆ-ಸೊಸೆ ಅನ್ನೋದು ವಿರುದ್ಧಾರ್ಥಕ ಪದಗಳು. ಮಾವ ಅಂದ್ರೆ ಸಂಜ್ಞಾ ಸೂಚನೆ ಮಾತ್ರ. ಮಗ-ಮಗಳು ಸ್ವರಗಳು. ಕಾಸು ಕೊಡದಿದ್ದಾಗ ದೀರ್ಘಸ್ವರವಾಗುತ್ತೆ’ ಎಂದು ಯಂಟಪ್ಪಣ್ಣ ವಿವರಿಸಿತು.

‘ಹೆಂಡ್ತಿಗೆ ಸಿಟ್ಟು ಬಂದ್ರೆ ಕ್ರಿಯಾಪದ. ಸ್ನೇಹಿತರು ಅಂದ್ರೆ ಕಾರ್ಯ-ಕಾರಣ ಸಂಬಂಧ ಸೂಚಕ ವಿಭಕ್ತಿ ಪ್ರತ್ಯಯಗಳು. ನಾನು ಅಲ್ಪಪ್ರಾಣ!’ ತುರೇಮಣೆ ಗ್ರಾಮರಿಗೆ ನಗು ತಡೆಯಲಾಗಲಿಲ್ಲ.

‘ಸಾ ಹಿಂಗೇ ರಾಜಕೀಯದ ವ್ಯಾಕರಣವೂ ಇರುತ್ತಾ’ ಎಂದು ಕೇಳಿದೆ.

‘ರಾಜಕೀಯದೇಲಿ ವ್ಯಾಕರಣವೇ ಮುಖ್ಯ ಕನೋ! ಸಂಧಿ ಅಂದ್ರೆ ಪಕ್ಷ-ಪಕ್ಷಗಳು ಜೊತೆಗೂಡಿ ಮಾಡಿಕೊಳ್ಳೋ ಒಳಒಪ್ಪಂದ. ಸಮುಚ್ಚಯ ಪದ ಅಂದ್ರೆ ಡಿಸಿಎಂಗಳ ಸಂಖ್ಯಾ ಸೂಚಕ. ನಾಮಪದಗಳಲ್ಲಿ ಸಿಎಂ ರೂಢನಾಮ, ಡಿಸಿಎಂ ಅಂಕಿತನಾಮ. ಮಂತ್ರಿಗಳ ಬಣ್ಣದ ಮಾತೇ ಶಬ್ದಾಲಂಕಾರ’ ತುರೇಮಣೆ ಮಾತಿಗೆ ಯಂಟಪ್ಪಣ್ಣ ಸೇರಿಸಿತು.

‘ರಾಜಕಾರಣಿಗಳು ಅರಿಷಡ್ವರ್ಗಗಳಾದ ಸೆಟಲ್ಮೆಂಟ್, ಬೇನಾಮಿ, ಭ್ರಷ್ಟಾಚಾರ, ಅಕ್ರಮ, ಅಧಿಕಾರ ಮದ, ಲೋಭಗಳನ್ನೆಲ್ಲಾ ಅರಿತು ಆಚರಿಸಬೇಕು. ಆಗಾಗ ಕೇಳಿಬರೋ ಆರೋಪಕ್ಕೆ ಸಿಟ್ಟಾಗಿ ಬೈಯ್ದಾಡೋದು ಜಿಹ್ವಾಮೂದಲೀಯ ಪದ. ವಿರೋಧ ಪಕ್ಷಗಳು ಅಂದ್ರೆ ವಿರುದ್ಧಾರ್ಥಕ ಪದಗಳು! ದ್ವಂದ್ವಾರ್ಥ ಪದಗಳಂದ್ರೆ ಉದಾಹರಣೆಗೆ ಸೈಟು. ಕ್ರಿಯಾಪದಗಳಂದ್ರೆ ಹಂಚಿಕೆ, ಬದಲಿ, ರೀ-ಡೂ ಧನಾಗಮ
ಪದಗಳು’ ಎಂದು ತುರೇಮಣೆ ದೀರ್ಘವಾಗಿ ವಿವರಿಸಿದರು.

‘ಇದು ರಾಜಕೀಯ ಭಯಸ್ಕರ ವ್ಯಾಕರಣ ಅಂದಂಗಾತು’ ಅಂತ ಚಿಂತೆಗೆ ಬಿದ್ದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT