ಶುಕ್ರವಾರ, ಸೆಪ್ಟೆಂಬರ್ 17, 2021
23 °C

ಚುರುಮುರಿ: ಸಂಪುಟ-1 ಸಂಚಿಕೆ-2

ಮಣ್ಣೆ ರಾಜು Updated:

ಅಕ್ಷರ ಗಾತ್ರ : | |

Prajavani

‘ಕೋವಿಡ್ ಕಾಟದಲ್ಲಿ ಮಕ್ಕಳು ಪರೀಕ್ಷೆಗೆ ಹಾಜರಾಗದೆ ಪಾಸಾದಂತೆ, ಹೈಕಮಾಂಡ್ ಆಟದಲ್ಲಿ ಬಸವರಾಜ ಬೊಮ್ಮಾಯಿ ಪಾಸಾಗಿ ಪದವೀಧರರಾಗಿಬಿಟ್ರು...’ ಸುಮಿ ಹೇಳಿದಳು.

‘ಹೌದು, ಪರೀಕ್ಷೆಯಲ್ಲಿ ಉತ್ತರ ಬರೆಯದೆ ಉತ್ತರಾಧಿಕಾರಿ ಆಗಿಬಿಟ್ಟರು’ ಎಂದ ಶಂಕ್ರಿ.

‘ಬೊಮ್ಮಾಯಿಯ ಅಂಕಪಟ್ಟಿಯಲ್ಲಿ ಯಡಿಯೂರಪ್ಪನವರ ಕೃಪಾಂಕ ಕಾಣ್ತಿದೆ ಅಲ್ವೇನ್ರೀ?’

‘ಹೌದು, ಇದು ಕೃಪಾಪೋಷಿತ ಪರೀಕ್ಷಾ ಪದ್ಧತಿ, ಕೃಪಾಕಟಾಕ್ಷ ಇಲ್ಲದೆ ಪಾಸಾಗಲಾಗಲ್ಲ. ಆಮೇಲೆ ಎದುರಾಗುವ ಸತ್ವಪರೀಕ್ಷೆ ಎದುರಿಸುವುದು ಅವರವರ ಸಾಮರ್ಥ್ಯ’.

‘ಹಾಗಾದ್ರೆ ಬೊಮ್ಮಾಯಿಯವರು ಹೊಸ ಸಿಲೆಬಸ್ ಅಧ್ಯಯನ ಮಾಡಬೇಕೇನ್ರೀ?’

‘ಅದೇ ಸಂಪುಟದ ಎರಡನೇ ಸಂಚಿಕೆ ಆಗಿರೋದ್ರಿಂದ ಸಿಲೆಬಸ್ ಬದಲಾಗಲ್ಲ, ಕುರ್ಚಿ, ಬೆಂಚು ಚೇಂಜಾಗಬಹುದು ಅಷ್ಟೇ...’

‘ಮೊದಲ ಸಂಚಿಕೆಯ ಎಲ್ಲಾ ಖಾತೆದಾರರಿಗೆ ಕುರ್ಚಿ ಸಿಗಬಹುದಾ?’

‘ಕಷ್ಟ, ಆ ಸಂಚಿಕೆಯಲ್ಲಿ ಕ್ಯಾತೆ ಮಾಡಿದವರನ್ನು ಕೈಬಿಟ್ಟು ಒಬೀಡಿಯೆಂಟ್ ಖಾತೆದಾರರ ಕೈ ಹಿಡಿಯಬಹುದು’.

‘ಖಾತೆದಾರರು ಪ್ರತ್ಯೇಕ ಪರೀಕ್ಷೆ ಎದುರಿಸಬೇಕೋ ಅಥವಾ ಅವರೂ ಕೃಪಾಂಕದ ಕೋಟಾದಲ್ಲಿ ಪಾಸಾಗ್ತಾರೋ?’

‘ಖಾತೆದಾರಿಕೆಗೆ ರಿಯಾಯಿತಿ ಪಾಸು, ಸಾಂಪ್ರದಾಯಿಕ ಶಿಫಾರಸು ನಡೆಯುವುದಿಲ್ಲ
ವಂತೆ. ಅನುಭವ, ಜಾತಿ, ಪ್ರದೇಶ, ಶಕ್ತಿ ಸಾಮರ್ಥ್ಯದ ಆಧಾರದಲ್ಲಿ ಸೂಕ್ತ ಖಾತೆದಾರರನ್ನು ಪರೀಕ್ಷಾ ಮಂಡಳಿಯೇ ಆಯ್ಕೆ ಮಾಡುವುದಂತೆ. ಅದರಲ್ಲೂ ಮಠಾಧೀಶರ ಶಿಫಾರಸು ತರುವ ಖಾತೆದಾರರನ್ನು ಡಿಸ್‍ಕ್ವಾಲಿಫೈ ಮಾಡಲಾಗುತ್ತದೆ ಎಂದು ಹೆಡ್ ಆಫೀಸಿನಿಂದ ಎಚ್ಚರಿಕೆ ಸಂದೇಶ ಬಂದಿದೆಯಂತೆ’ ಶಂಕ್ರಿ ಅಂದಾಜು ಮಾಡಿದ.

‘ಪದವಿತ್ಯಾಗಿ ಯಡಿಯೂರಪ್ಪನವರಿಗೆ ಕುರ್ಚಿ, ಬೆಂಚು ಸಿಗಬಹುದಾ?’

‘ಅವರು ಸರ್ಕಾರಿ ಕುರ್ಚಿ ಒಲ್ಲೆ ಎಂದಿದ್ದಾರೆ. ಖಾಸಗಿ ಕುರ್ಚಿ ಹಾಕಿಕೊಂಡು ಮನೆ ಯಜಮಾನನಂತೆ ಆಗುಹೋಗು ನಿಭಾಯಿಸುವ ಅವಕಾಶ ಕೊಡಿ ಎಂದು ಕೇಳಬಹುದು’.

‘ಕೇಳಬಹುದು, ತಮಗೆ ಕಾಟ ಕೊಟ್ಟವರಿಗೆ ಪಾಠ ಕಲಿಸಲು ಯಡಿಯೂರಪ್ಪನವ್ರಿಗೆ ಇದು ಒಳ್ಳೆ ಅವಕಾಶವಾಗಬಹುದು ಅಲ್ವೇನ್ರೀ?...’ ಎಂದಳು ಸುಮಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.